ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ತೋಟತ್ತಾಡಿ-ಚಿಬಿದ್ರೆ ಗ್ರಾಮಗಳ ಗಡಿ ಭಾಗವಾದ ಬಾರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಆನೆ ಕಂದಕ ರಚನೆ ಕಾರ್ಯ ಶುಕ್ರವಾರ ಆರಂಭವಾಗಿದೆ. ಸುಮಾರು 1.500 ಕಿ.ಮೀ. ಪ್ರದೇಶಕ್ಕೆ 5.40 ಲಕ್ಷ ರು. ವೆಚ್ಚದಲ್ಲಿ ಆನೆ ಕಂದಕ ನಿರ್ಮಾಣವಾಗಲಿದೆ. ಧರ್ಮಸ್ಥಳ-ಮುಂಡಾಜೆ ರಕ್ಷಿತಾರಣ್ಯದ ಪಕ್ಕದಲ್ಲಿರುವ ಬಾರೆ ಪ್ರದೇಶದಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದೆ.ಇಲ್ಲಿನ ಹಲವು ಕೃಷಿ ತೋಟಗಳಿಗೆ ಆಗಾಗ ಕಾಡಾನೆಗಳ ಹಿಂಡು,ಒಂಟಿ ಸಲಗ ದಾಳಿ ನಡೆಸುತ್ತಿದ್ದು ಅಪಾರ ಪ್ರಮಾಣದ ಕೃಷಿ ನಾಶ ಉಂಟಾಗುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ನಾಗರಹೊಳೆಯಿಂದ ಪರಿಣಿತ ಆನೆ ಕಾವಾಡಿಗರನ್ನು ತರಿಸಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಹಲವು ದಿನಗಳ ಕಾಲ ನಡೆದಿತ್ತು. ಕಾರ್ಯಾಚರಣೆ ವೇಳೆ ಕೆಲವು ಬಾರಿ ಕಾಡಾನೆಗಳು ತಂಡಕ್ಕೆ ಎದುರಾಗಿದ್ದವು. ಬಳಿಕ ಕೊಂಚ ದಿನ ಆನೆಗಳ ಉಪಟಳ ಕಂದುಬಂದಿರಲಿಲ್ಲ ಬಳಿಕ ಆಗಾಗ ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿ ನಡೆಸುವುದು,ಇಲ್ಲಿನ ಮೂಲಕ ದಾಟಿ ಹೋಗುವುದು ಮುಂದುವರೆದಿತ್ತು. ಇತ್ತೀಚೆಗೆ ಕಾಡಾನೆಗಳು ಆಗಮಿಸದಂತೆ ಮೆಣಸಿನ ಹೊಗೆ ಕುರಿತು ನುರಿತರಿಂದ ಪ್ರಾತ್ಯಕ್ಷಿಕೆಯು ನಡೆದಿತ್ತು. ಆದರೆ ಇದು ಹೆಚ್ಚಿನ ಪರಿಣಾಮ ಬೀರದ ಕಾರಣ ಇಲ್ಲಿನ ಕೃಷಿಕರು ಕಂಗಾಲಾಗಿದ್ದಾರೆ. ಇದೀಗ ಇಲ್ಲಿ ರಕ್ಷಿತಾರಣ್ಯ ಭಾಗದಿಂದ ಕಾಡಾನೆಗಳು ಆಗಮಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ಆನೆ ಕಂದಕ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. 2 ಮೀ.ಆಳ,3 ಮೀ.ಅಗಲದ ಆನೆ ಕಂದಕ 1.500 ಕಿಮೀ ವ್ಯಾಪ್ತಿಗೆ ನಿರ್ಮಾಣಗೊಳ್ಳಲಿದೆ. ಈಗ ನಿರ್ಮಾಣಗೊಳ್ಳುತ್ತಿರುವ ಆನೆ ಕಂದಕವನ್ನು ಇಲ್ಲಿಂದ ಮುಂದಿನ ಭಾಗವಾದ ಕುಂಟಾಡಿತನಕವು ವಿಸ್ತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕುಂಟಾಡಿ ತನಕ ಆನೆ ಕಂದಕ ನಿರ್ಮಾಣಗೊಂಡರೆ ಗ್ರಾಮದ ಉಳಿದ ಪ್ರದೇಶಗಳಿಗೂ ಆನೆಗಳ ಹಾವಳಿ ಕಡಿಮೆಯಾಗಲಿದೆ. ದುರಸ್ತಿಗಿಲ್ಲ ಅನುದಾನ: ಅರಣ್ಯ ಇಲಾಖೆ ನೂತನ ಆನೆ ಕಂದಕ ನಿರ್ಮಾಣಕ್ಕೆ ಅಗತ್ಯತೆಗೆ ತಕ್ಕಂತೆ ಅನುದಾನ ನೀಡುತ್ತಿದೆ.ಆದರೆ ಮುಂಡಾಜೆ, ಚಾರ್ಮಾಡಿ,ಚಿಬಿದ್ರೆ, ಕಡಿರುದ್ಯಾವರ ಗ್ರಾಮಗಳಲ್ಲಿ ಅನೇಕ ವರ್ಷಗಳ ಹಿಂದೆ ನಿರ್ಮಿಸಲಾದ ಆನೆ ಕಂದಕಗಳು ನಿಷ್ಪ್ರಯೋಜಕವಾಗಿವೆ. ಮಳೆಗಾಲದಲ್ಲಿ ಆನೆ ಕಂದಕ ಇರುವ ಪ್ರದೇಶಗಳಲ್ಲಿ ಮಣ್ಣು ಕುಸಿದು ಕಂದಕಗಳು ಮುಚ್ಚಿ ಹೋಗಿದ್ದು ಗಿಡ,ಮರಗಳು ಬೆಳೆದಿವೆ ಈ ಕಂದಕಗಳ ಮೂಲಕ ಆನೆಗಳು ಸುಲಭವಾಗಿ ದಾಟುತ್ತಿವೆ.ಇಲ್ಲಿನ ಆನೆ ಕಂದಕಗಳನ್ನು ದುರಸ್ತಿ ಪಡಿಸುವ ಅಗತ್ಯ ಇದೆ. ಆದರೆ ಆನೆ ಕಂದಕಗಳ ದುರಸ್ತಿಗೆ ಇಲಾಖೆಯ ಬಳಿ ಅನುದಾನ ಇಲ್ಲದಿರುವುದು ವಿಪರ್ಯಾಸವಾಗಿದೆ. ಈ ಹಿಂದೆ ನಿರ್ಮಾಣವಾಗಿರುವ ಆನೆ ಕಂದಕಗಳನ್ನು ವ್ಯವಸ್ಥಿತವಾಗಿ ದುರಸ್ತಿ ಪಡಿಸಲು ಭಾರಿ ಮೊತ್ತದ ಅನುದಾನದ ಅಗತ್ಯವೂ ಇಲ್ಲ. ಹಲವು ಸಾವಿರ ರೂ.ಗಳನ್ನು ವ್ಯಯಿಸಿದರೆ ಅವು ಪರಿಣಾಮಕಾರಿಯಾಗಬಲ್ಲವು ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿನ ಮೃತ್ಯುಂಜಯ ನದಿ ಸಮೀಪದ ನಳಿಲು ಪ್ರದೇಶದಲ್ಲಿ ನೆರೆ ಸಮಯ ಮುಚ್ಚಿ ಹೋಗಿರುವ ಆನೆ ಕಂದಕವನ್ನು ಮರು ನಿರ್ಮಿಸುವ ಅಗತ್ಯವಿದೆ. ಬಾರೆಯಲ್ಲಿ ಆನೆ ಹಾವಳಿ: ತೋಟತ್ತಾಡಿ ಗ್ರಾಮದ ದಿವಾಕರ ಎಂಬವರ ತೋಟಕ್ಕೆ ಕಳೆದ ನಾಲ್ಕು ದಿನಗಳ ಹಿಂದೆ ಒಂಟಿ ಸಲಗ ದಾಳಿ ನಡೆಸಿ 8 ತೆಂಗಿನ ಮರಗಳನ್ನು ಪುಡಿಗೈದಿದೆ.ತೋಟಕ್ಕೆ ಹತ್ತಿ ಬರುವ ವೇಳೆ ದರೆಯನ್ನು ಜರಿದು ಹಾಕಿದೆ. ಮನೆಗಳ ಹತ್ತಿರದವರೆಗೂ ಸುಳಿದಾಡಿರುವ ಸಲಗ ಬಳಿಕ ಅರಣ್ಯದ ಕಡೆ ಹೋಗಿರುವ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.