ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ವ್ಯಾಪ್ತಿಯಲ್ಲಿ 2024-25ನೇ ಸಾಲಿನ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇಕಡ 5ರಷ್ಟು ರಿಯಾಯಿತಿಯನ್ನು ಜುಲೈ ಅಂತ್ಯದವರೆಗೆ ನೀಡಲಾಗಿದೆ.
ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಏಪ್ರಿಲ್ ತಿಂಗಳಲ್ಲಿ ಮಾತ್ರ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಮೇ ತಿಂಗಳಲ್ಲಿ ಯಾವುದೇ ದಂಡ ವಿಧಿಸದೆ ಪೂರ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಸುವಂತೆ ಸೂಚಿಸಲಾಗುತ್ತಿತ್ತು. ನಂತರದ ತಿಂಗಳಲ್ಲಿ ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ಬಡ್ಡಿ ಪಾವತಿ ಮಾಡಬೇಕಾಗಿತ್ತು.
ಆದರೆ, ಈ ಬಾರಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ತೊಡಗಿಕೊಳ್ಳುವುದರಿಂದ ತೆರಿಗೆ ಪಾವತಿಗೆ ಚಲನ್ ಸೃಷ್ಟಿ ಹಾಗೂ ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಗೆ ಸೂಕ್ತ ಮಾರ್ಗದರ್ಶನ ಕಷ್ಟವಾಗುತ್ತದೆ. ಜತೆಗೆ ಏಪ್ರಿಲ್ ತಿಂಗಳಲ್ಲಿ ಬಹುತೇಕ ಸಾರ್ವತ್ರಿಕ ರಜೆ ದಿನಗಳಿದ್ದು, ಈ ದಿನಾಂಕಗಳಂದು ಆಸ್ತಿ ತೆರಿಗೆ ಪಾವತಿ ಸಾಧ್ಯವಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗಲು ಹಾಗೂ ಸಮರ್ಪಕವಾಗಿ ಆಸ್ತಿ ತೆರಿಗೆ ಸಂಗ್ರಹದ ದೃಷ್ಟಿಯಿಂದ ಏಪ್ರಿಲ್ ತಿಂಗಳು ಮಾತ್ರವಲ್ಲದೆ, ಮೇ 1ರಿಂದ ಜುಲೈ 31ರವರೆಗೂ ರಿಯಾಯಿತಿ ನೀಡಿ ಆಸ್ತಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.