ಕನ್ನಡಪ್ರಭ ವಾರ್ತೆ ಬೆಂಗಳೂರು
ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ ಐವರು ಗಾಯಗೊಂಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕುಮಾರಸ್ವಾಮಿ ಲೇಔಟ್‌ನ ಚಂದ್ರನಗರ ನಿವಾಸಿಗಳಾದ ರಾಕೇಶ್ (33), ಕೃಷ್ಣ (24), ಹರಿರಾಮ್ (28), ರಾಮ್‌ಧನ್ (28) ಹಾಗೂ ಅಶೋಕ್ (28) ಗಾಯಗೊಂಡವರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟು ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶ ಮೂಲದ ಗಾಯಾಳುಗಳು ಕೆಲ ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ನಿರ್ಮಾಣ ಹಂತದ ಕಟ್ಟಡಗಳಿಗೆ ಪಿಒಪಿ ಸೀಲಿಂಗ್ ಕೆಲಸ ಮಾಡುತ್ತಿದ್ದು, ಕುಮಾರಸ್ವಾಮಿ ಲೇಔಟ್‌ನ ಚಂದ್ರನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.ಚಪಾತಿ ಬೇಯಿಸುವಾಗ ಸ್ಫೋಟ:
ಮಂಗಳವಾರ ಬೆಳಗ್ಗೆ ಸುಮಾರು 8 ಗಂಟೆಗೆ ಕೆಲಸಕ್ಕೆ ತೆರಳಲು ಗ್ಯಾಸ್ ಸ್ಟೌವ್ ಹಚ್ಚಿ ಚಪಾತಿ ಬೇಯಿಸುತ್ತಿದ್ದರು. ಈ ವೇಳೆ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಏಕಾಏಕಿ ಸ್ಫೋಟಗೊಂಡಿದೆ. ಮನೆಗೆ ಶೀಟ್ ಚಾವಣಿ ಇದ್ದಿದ್ದರಿಂದ ಸ್ಫೋಟದ ರಭಸಕ್ಕೆ ಚಾವಣಿ ಹಾರಿ ಹೋಗಿದೆ. ಈ ವೇಳೆ ಕೆಲಸಕ್ಕೆ ಹೋಗಲು ಸಿದ್ಧರಾಗುತ್ತಿದ್ದ ಐವರೂ ಗಾಯಗೊಂಡಿದ್ದಾರೆ. ಈ ಸ್ಫೋಟದ ವೇಳೆ ಸೋಹೇಬ್ ಎಂಬಾತ ಶೌಚಾಲಯದಲ್ಲಿ ಇದ್ದಿದ್ದರಿಂದ ಆತ ಯಾವುದೇ ಗಾಯಗಳಾಗಿದೆ ಪಾರಾಗಿದ್ದಾನೆ. ಬಳಿಕ ಸ್ಥಳೀಯರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕಯ್ದೊಯ್ದಿದ್ದಾರೆ.ಸ್ಫೋಟದಲ್ಲಿ ಐವರಿಗೂ ಶೇ.30ರಷ್ಟು ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರ:-ಅಡುಗೆ ಅನಿಲ ಸೋರಿಕೆಯಾಗಿ ಸಂಭವಿಸಿದ ಸ್ಫೋಟದ ರಭಸಕ್ಕೆ ಮನೆಯ ಚಾವಣಿ ಕಿತ್ತಿರುವುದು.