ಬಸವರಾಜ ಹಿರೇಮಠ
ಧಾರವಾಡ:ಬರೋಬ್ಬರಿ ಐದ್ ವರ್ಷ ಆತ್ರಿ ನಾನು ತಹಸೀಲ್ದಾರ್ ಕಚೇರಿ, ವಕ್ಫ್ ಕಚೇರಿಗೆ ಅಡ್ಡಾಡಕತ್ತಿ. ಇವತ್ತಿನ ವರೆಗೂ ಯಾರೊಬ್ಬರೂ ಹೊಳ್ಳೆ ನೋಡಲಿಲ್ಲ. ನಮ್ಮ ಅಪ್ಪಾ, ಅಜ್ಜಾ, ಮುತ್ತಜ್ಜನ ಕಾಲದಿಂದಲೂ ಹೊಲಾ ಊಳಾಕತ್ತೈವಿ ಅಂತಾ ಹೇಳುದಲ್ಲದ, ಅವರು ಕೇಳಿದ ಎಲ್ಲ ದಾಖಲೆಪತ್ರ ಕೊಟ್ಟರೂ ಯಾವುದೇ ಪ್ರಯೋಜನಾ ಆಗಲಿಲ್ಲ. ನಿಮ್ಮು ಡಾಕುಮೆಂಟ್ ಎಲ್ಲ ಕರೆಕ್ಟ್ ಅದೈವು ಅಂತ ಬಾಯ್ ಮಾತನಾಗ ಹೇಳಿತಿದ್ರ ಹೊರತು ಉತಾರದಾಗ ವಕ್ಫ್ ಮಂಡಳಿ ಹೆಸರ್ ಮಾತ್ರ ಕಡಮಿ ಮಾಡಲಿಲ್ಲ...!
ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಮರಬಸಪ್ಪ ಮಸೂತಿ ಅವರ ಬೇಸರದ ಮಾತಿದು. ತಲೆತಲಾಂತರದಿಂದ ಬಂದ 3.13 ಎಕರೆ ಹೊಲವನ್ನು ಉಳುಮೆ ಮಾಡುತ್ತಿದ್ದ ಮರಬಸಪ್ಪ ಹಾಗೂ ಅವರ ಕುಟುಂಬಕ್ಕೆ 2019ರಲ್ಲಿಯೇ ಪಹಣಿಯ 11ನೇ ಕಾಲಂನಲ್ಲಿ ವಕ್ಫ್ ಮಂಡಳಿ ಹೆಸರು ಸೇರ್ಪಡೆಯಾಗಿದ್ದು ಅಚ್ಚರಿ ಮೂಡಿಸಿತ್ತು. ಅಂದಿನಿಂದ ಇಂದಿನ ವರೆಗೂ ಹೊಲದ ಕೆಲಸ ಬಿಟ್ಟು ತಹಸೀಲ್ದಾರ್ ಕಚೇರಿ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳ ಕಚೇರಿಗೆ ಅಡ್ಡಾಡಿದ್ದೇ ಬಂತು. ಸ್ಪಂದನೆ ಮಾತ್ರ ದೊರೆತಿಲ್ಲ ಎನ್ನುವುದು ಇನ್ನೂ ಬೇಸರದ ಸಂಗತಿ.ನಿರ್ಲಕ್ಷ್ಯದಿಂದ ಸೇರ್ಪಡೆ:
ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಏನಾದರೂ ತೊಂದರೆ ಆಗತೈತಿ ಅಂತಾ ಯಾರಿಗೂ ಹೇಳಿರಲಿಲ್ಲ. ತಹಸೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಹಾಗೂ ವಕ್ಫ್ ಮಂಡಳಿಗೆ ನಮ್ಮ ಹಿರಿಯರಿಂದ ಬಂದ ಆಸ್ತಿ ಎಂದು ಎಲ್ಲ ದಾಖಲೆ ನೀಡಿದಾಗ, ಎಲ್ಲರೂ ಹೌದು ಇದು ನಿಮ್ಮ ಆಸ್ತಿಯೇ ಎನ್ನುತ್ತಿದ್ದರೆ ಹೊರತು ಯಾರಿಂದಲೂ ಸಮಸ್ಯೆಗೆ ಪರಿಹಾರ ಒದಗಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಏತಕ್ಕಾಗಿ ಪಹಣಿಯಲ್ಲಿ ವಕ್ಫ್ ಹೆಸರು ನಮೂದು ಆಯ್ತು ಎಂದು ಹುಡುಕಿದಾಗ, ಹನುಮನಕೊಪ್ಪ, ಉಪ್ಪಿನಬೆಟಗೇರಿ ಹಾಗೂ ಸೈಬನಕೊಪ್ಪ ಮೂರು ಊರುಗಳು ಒಂದೆಡೆ ಇದ್ದು ಸೈಬನಕೊಪ್ಪದ ಸರ್ವೇ ನಂ. 29ರಲ್ಲಿ ದರ್ಗಾ ಇತ್ತು. ಆ ಸರ್ವೇ ನಂಬರ್ ಸೇರಿಸುವ ಬದಲು, ನಮ್ಮ ಅಡ್ಡಹೆಸರು ಮಸೂತಿ ಎಂದಿದ್ದು, ಇವರು ಮುಸ್ಲಿಂ ಇರಬೇಕೆಂದು ತಿಳಿದು ನಮ್ಮ ಹೊಲದ ಉತಾರದಲ್ಲಿ ವಕ್ಫ್ ಮಂಡಳಿ ಹೆಸರು ಸೇರಿದ್ದಾರೆ ಎಂದು ನಂತರದಲ್ಲಿ ತಿಳಿಯಿತು ಎಂದರು ಮರಬಸಪ್ಪ.ಬಾರಕೋಲ್ ತರತೇವಿ:
ಇನ್ನು, ಅದೇ ಗ್ರಾಮದ ಗಂಗಪ್ಪ ಜವಳಗಿ ಅವರ ಕುಟುಂಬದ 20 ಎಕರೆಯ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದು, ಗ್ರಾಮದಲ್ಲಿ ನಮ್ಮ ಮನೆತನಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಇಷ್ಟಾಗಿಯೂ ವಕ್ಫ್ ಹೆಸರು ಹೇಗೆ ಬಂತು? ವಕ್ಫ್ ಹೆಸರು ಸೇರಿಸುವಾಗ ರೈತರಿಗೆ ನೋಟಿಸ್ ನೀಡಬೇಕು ಎನ್ನುವ ಪ್ರಾಥಮಿಕ ತಿಳಿವಳಿಕೆಯೂ ಸರ್ಕಾರಕ್ಕೆ ಇಲ್ಲವೇ? ರೈತರು ಹೊಲ ಮಾರಿದಾಗ, ಮಕ್ಕಳಿಗೆ ಭಕ್ಷಿಸ್ ಕೊಟ್ಟಾಗ ಉತಾರದಲ್ಲಿ ಹೆಸರು ಸೇರ್ಪಡೆ ಮಾಡಲು ತಿಂಗಳಾನುಗಟ್ಟಲೇ ತೆಗೆದುಕೊಳ್ಳುವ ಕಂದಾಯ ಇಲಾಖೆ ಅಧಿಕಾರಿಗಳು, ತಮ್ಮದೇ ತಪ್ಪಿದ್ದಾಗ ಅದನ್ನು ಸರಿ ಮಾಡಲು ಮೀನಮೇಷ ಎನಿಸುತ್ತಿದ್ದಾರೆ. ಕಳೆದ ಆರು ತಿಂಗಳಿಂದ ವಕ್ಫ್ ಹೆಸರು ಕಡಿಮೆ ಮಾಡಿಸಲು ಓಡಾಡುತ್ತಿದ್ದು ಸರ್ಕಾರದಿಂದ ಯಾವುದೇ ಸ್ಪಂದನೆ ಏಕಿಲ್ಲ ಎಂದು ಕಾರವಾಗಿಯೇ ಪ್ರಶ್ನಿಸಿದರು.ಜತೆಗೆ ಇನ್ಮುಂದೆ ಯಾವುದೇ ಕಾರಣಕ್ಕೂ ನಾವು ತಹಸೀಲ್ದಾರ್ ಕಚೇರಿಗೆ ಬರೋದಿಲ್ಲ. ಮನವಿ ಕೊಡೋದಿಲ್ಲ. ಮೊದಲಿನಂತೆ ಪಹಣಿ ಸರಿಪಡಿಸಿ ಅವರೇ ಕೊಡಬೇಕು, ಇಲ್ಲದೇಹೋದಲ್ಲಿ ತಹಸೀಲ್ದಾರ್ ಕಚೇರಿಗೆ ಬಾಲಕೋಲ್‌ನೊಂದಿಗೆ ಬರಲಿದ್ದೇವೆ ಎಂಬ ಎಚ್ಚರಿಕೆಯನ್ನೂ ನೀಡಿದರು. ಸರ್ಕಾರದ ಯಾವ ಕಚೇರಿಯೂ ರೈತರನ್ನು, ಬಡವರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ನಾಲ್ಕೈದು ವರ್ಷಗಳಿಂದ ಈ ಕೆಲಸಕ್ಕೆ ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ವಕ್ಫ್ ಮಂಡಳಿಗೆ ಅಲೆದಾಡುತ್ತಿದ್ದೇನೆ. ಪ್ರಶ್ನೆ ಮಾಡಿದ್ದಕ್ಕೆ ಉಪ ವಿಭಾಗಾಧಿಕಾರಿಗಳು ನಿಂದಿಸಿ, ಗುಮಾಸ್ತನ ಮೂಲಕ ನನ್ನನ್ನು ಹೊರಗೆ ಕಳುಹಿಸಿದರು. ಈಗ ನಡೆಯುತ್ತಿರುವ ಹೋರಾಟದಿಂದ ಇನ್ನಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿ ಎಂದು ಮರಬಸಪ್ಪ ಮಸೂತಿ ಹೇಳಿದರು.