ಡೆಂಘೀ ಸ್ವಚ್ಛತೆ ನಿರ್ಲಕ್ಷ್ಯಕ್ಕೆ ₹50 ದಂಡ: ಬಿಬಿಎಂಪಿ

KannadaprabhaNewsNetwork | Updated : Jul 05 2024, 10:37 AM IST

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾರ್ವಾ ಉತ್ಪತ್ತಿಯಾಗದಂತೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರೂ ನಿರ್ಲಕ್ಷ್ಯ ವಹಿಸಿದವರಿಗೆ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾರ್ವಾ ಉತ್ಪತ್ತಿಯಾಗದಂತೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರೂ ನಿರ್ಲಕ್ಷ್ಯ ವಹಿಸಿದವರಿಗೆ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಈವರೆಗೆ 2,500ಕ್ಕೂ ಅಧಿಕ ಡೆಂಘೀ ಪ್ರಕರಣ ದೃಢಪಟ್ಟಿದ್ದು, ಒಬ್ಬರು ಡೆಂಘೀಯಿಂದ ಮೃತಪಟ್ಟಿದ್ದಾರೆ. ಬಿಬಿಎಂಪಿಯಿಂದ ಡೆಂಘೀ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಡೆಂಘೀ ಸಂಖ್ಯೆ ಹೆಚ್ಚಾಗುತ್ತಿದ್ದರೂ ಹಲವರು ನಿರ್ಲಕ್ಷ್ಯ ವಹಿಸುತ್ತಿರುವ ಹಿನ್ನೆಲೆಯಲ್ಲಿ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ.

ತಲಾ 50 ರು ದಂಡ

ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಕರ್ನಾಟಕ ಮುನ್ಸಿಪಲ್‌ ಕಾಯ್ದೆ ಪ್ರಕಾರ 50 ರು. ದಂಡ ವಿಧಿಸಲು ನಿರ್ಧರಿಸಲಾಗಿದೆ. ಆದರೂ ಎಚ್ಚೆತ್ತುಕೊಳ್ಳದಿದ್ದರೆ ದಿನಕ್ಕೆ 15 ರು. ನಂತೆ ದಂಡ ವಿಧಿಸಬಹುದು. ಡೆಂಘೀ ಕುರಿತು ಸಭೆಯಲ್ಲಿ ಕಾಯ್ದೆ ಪ್ರಕಾರ ದಂಡ ವಿಧಿಸುವಂತೆ ಆರೋಗ್ಯ ಸಚಿವರು ಸೂಚಿಸಿದ್ದಾರೆ. ಹೀಗಾಗಿ, ಬಿಬಿಎಂಪಿ ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ದಂಡ ಯಾರಿಗೆ ಮತ್ತು ಯಾವಾಗ?

ಸ್ವಚ್ಛತೆ ಕುರಿತಂತೆ ಬಿಬಿಎಂಪಿಯ ಆರೋಗ್ಯ ಸಿಬ್ಬಂದಿ ತಂಡ ಮನೆ ಮನೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ನಿರ್ಲಕ್ಷ್ಯ ವಹಿಸುವವರಿಗೆ ಒಂದು ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಪುನಃ ಪರಿಶೀಲನೆ ವೇಳೆ ಲಾರ್ವಾ ಕಂಡು ಬಂದರೆ, ಸ್ವಚ್ಛತೆ ಇರದಿದ್ದರೆ ಆರೋಗ್ಯ ವಿಭಾಗದ ಅಧಿಕಾರಿ ಸಿಬ್ಬಂದಿ ದಂಡ ವಿಧಿಸಲಿದ್ದಾರೆ.

ದಂಡ ಮೊತ್ತ ಹೆಚ್ಚಳಕ್ಕೂ ಚಿಂತನೆ?

ಸದ್ಯ ಮೊದಲ ಬಾರಿಗೆ 50 ರು ದಂಡ ವಿಧಿಸುವುದು. ನಿರ್ಲಕ್ಷ್ಯ ವಹಿಸುವುದು ಮುಂದುವರೆದರೆ ದಿನಕ್ಕೆ 15 ರು. ನಂತೆ ದಂಡ ವಿಧಿಸಲು ಅವಕಾಶವಿದೆ. ಹಾಗಾಗಿ ದಂಡ ಮೊತ್ತ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಈ ಬಗ್ಗೆ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳಿದ್ದಾರೆ.

ಮಂಗಳೂರು ಮಾದರಿ:

ಖಾಸಗಿ ಸ್ವತ್ತುಗಳಲ್ಲಿ ಈ ರೀತಿ ದಂಡ ವಿಧಿಸುವ ಪ್ರಕ್ರಿಯೆ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ.

Share this article