ನಾಗಮಂಗಲ : ಕೇಂದ್ರ ಸರ್ಕಾರದ ನಬಾರ್ಡ್ ಬ್ಯಾಂಕ್ ಪ್ರತಿವರ್ಷ ಕೊಡುತ್ತಿದ್ದ ಸಾಲದ ಒಟ್ಟು ಮೊತ್ತದ ಪೈಕಿ ಶೇ.50ರಷ್ಟು ಕಡಿತಗೊಳಿಸುವ ಮೂಲಕ ರಾಜ್ಯದ ರೈತರಿಗೆ ದ್ರೋಹವೆಸಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ತಾಲೂಕಿನ ಚಿಣ್ಯ ಗ್ರಾಮದಲ್ಲಿ ಹೊಣಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಂಎಸ್‌ಸಿ ಯೋಜನೆಯಡಿ ನಿರ್ಮಿಸಿರುವ ನೂತನ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಸಮಾನತೆಯಿಂದ ಕಾಣಬೇಕು. ಆದರೆ, ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಿಗೆ ಮಾತ್ರ ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಖಂಡಿಸಿದರು.
ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ನಬಾರ್ಡ್ ಬ್ಯಾಂಕ್ ಕಳೆದ ಸಾಲಿನಲ್ಲಿ ಸಹಕಾರ ಸಂಘಗಳಿಗೆ 5.5 ಸಾವಿರಕ್ಕೂ ಹೆಚ್ಚು ಕೋಟಿ ಹಣವನ್ನು ಸಾಲದ ರೂಪದಲ್ಲಿ ಬಿಡುಗಡೆ ಮಾಡಿತ್ತು. ಆ ಹಣವನ್ನು ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ರೈತರಿಗೆ ಬಡ್ಡಿರಹಿತ ಸಾಲ ನೀಡಿ ನಬಾರ್ಡ್ ಬ್ಯಾಂಕ್‌ನ ಸಾಲದ ಹಣಕ್ಕೆ ರಾಜ್ಯ ಸರ್ಕಾರ ಬಡ್ಡಿ ಪಾವತಿಸುತ್ತಿತ್ತು ಎಂದರು.
ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಸಹಿಸಿಕೊಳ್ಳದ ಕೇಂದ್ರ ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಬಿಡುಗಡೆ ಮಾಡುತ್ತಿದ್ದ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಚಿಣ್ಯ ಗ್ರಾಮದಲ್ಲಿ ಎಂಡಿಸಿಸಿ ಬ್ಯಾಂಕ್ ಸ್ಥಾಪಿಸುವಂತೆ ಈ ಭಾಗದ ಜನರಿಂದ ಒತ್ತಾಯ ಕೇಳಿಬರುತ್ತಿದೆ. ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಹೊಸದಾಗಿ ಬ್ಯಾಂಕ್ ತೆರೆಯಲು ರಿಸರ್ವ್ ಬ್ಯಾಂಕ್ ಅನುಮತಿ ನೀಡುತ್ತಿಲ್ಲ. ಆರ್ಥಿಕ ಸಮಸ್ಯೆಯಿಂದ ಮುಚ್ಚುವ ಸ್ಥಿತಿ ತಲುಪುವ ಜಿಲ್ಲೆಯ ಯಾವುದಾದರೂ ಎಂಡಿಸಿಸಿ ಬ್ಯಾಂಕ್ ಶಾಖೆಯನ್ನು ಚಿಣ್ಯ ಗ್ರಾಮಕ್ಕೆ ವರ್ಗಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಮಾತನಾಡಿದರು. ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎಸ್.ನರಸಿಂಹಯ್ಯ, ಕೆ.ವಿ.ದಿನೇಶ್, ಚಂದ್ರಶೇಖರ್, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್, ಸಂಘದ ಅಧ್ಯಕ್ಷ ಎಚ್.ಎಂ.ಚಿಕ್ಕಣ್ಣ, ಮಾಜಿ ಅಧ್ಯಕ್ಷರಾದ ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಎಚ್.ಜಯರಾಮು, ಎಚ್.ಜೆ.ಬಸವರಾಜು, ಆರ್.ಕೃಷ್ಣೇಗೌಡ, ನಿರ್ದೇಶಕರಾದ ವೆಂಕಟೇಶಶೆಟ್ಟಿ, ಕಮಲಮ್ಮ, ಟಿ.ಡಿ.ಅನಿತಾ, ಅಶೋಕ್, ಚಂದ್ರಶೇಖರ್, ಮೇಲ್ವಿಚಾರಕ ಪ್ರಕಾಶ್, ಸಂಘದ ಸಿಇಓ ಪಿ.ಶೋಭ ಸೇರಿದಂತೆ ಹಲವರು ಇದ್ದರು.