೫೦೦ ಕೋಟಿ ರು. ವೆಚ್ಚದಲ್ಲಿ ಹೊಸ ಸಕ್ಕರೆ ಕಾರ್ಖಾನೆ: ಶಾಸಕ ಪಿ.ರವಿಕುಮಾರ್

KannadaprabhaNewsNetwork | Published : Feb 18, 2024 1:38 AM

ಸಾರಾಂಶ

ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸರ್ಕಾರದಿಂದ ೧೦೦ ಕೋಟಿ ರು.ಹಣವನ್ನು ಮೊದಲ ಹಂತದಲ್ಲಿ ನೀಡಲಾಗುವುದು. ಉಳಿದ ೪೦೦ ಕೋಟಿ ರು. ಹಣವನ್ನು ಸಾಲ ರೂಪದಲ್ಲಿ ಪಡೆಯಲಾಗುತ್ತದೆ. ಮೂರು ತಿಂಗಳೊಳಗೆ ಸಿಎಂ ಸಿದ್ದರಾಮಯ್ಯ ಅವರಿಂದ ಹೊಸ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯ ಆರ್ಥಿಕ ಜೀವನಾಡಿಯಾಗಿರುವ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ೫೦೦ ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಸಕ್ಕರೆ ಕಾರ್ಖಾನೆಯಾಗಿ ಪರಿವರ್ತಿಸಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಹೊಸ ಸಕ್ಕರೆ ಕಾರ್ಖಾನೆಗೆ ಸಾತನೂರು ಫಾರಂ ಹಾಗೂ ಈಗಿರುವ ಕಾರ್ಖಾನೆ ಸ್ಥಳ ಎರಡನ್ನೂ ಗುರುತಿಸಲಾಗಿದೆ. ೭೫ ಎಕರೆ ವಿಸ್ತೀರ್ಣದ ಸಾತನೂರು ಫಾರಂನಲ್ಲಿ ಕಾರ್ಖಾನೆ ನಿರ್ಮಿಸುವುದು ಉತ್ತಮ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಸ ಸಕ್ಕರೆ ಕಾರ್ಖಾನೆಗೆ ಸರ್ಕಾರದಿಂದ ೧೦೦ ಕೋಟಿ ರು.ಹಣವನ್ನು ಮೊದಲ ಹಂತದಲ್ಲಿ ನೀಡಲಾಗುವುದು. ಉಳಿದ ೪೦೦ ಕೋಟಿ ರು. ಹಣವನ್ನು ಸಾಲ ರೂಪದಲ್ಲಿ ಪಡೆಯಲಾಗುತ್ತದೆ. ಮೂರು ತಿಂಗಳೊಳಗೆ ಸಿಎಂ ಸಿದ್ದರಾಮಯ್ಯ ಅವರಿಂದ ಹೊಸ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಮೈಷುಗರ್ ಕಾರ್ಖಾನೆ ಮಂಡ್ಯ ಜಿಲ್ಲೆಯ ಜನರ ಅಸ್ಮಿತೆಯ ಸಂಕೇತ. ಮಹಾರಾಜರು ನೀಡಿರುವ ಕೊಡುಗೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ಪ್ರತಿ ಮನೆಯಿಂದ ಮಣ್ಣನ್ನು ಸಂಗ್ರಹಿಸುವ ಅಭಿಯಾನ ಹಮ್ಮಿಕೊಂಡು ಕಾರ್ಖಾನೆ ನಮ್ಮದು ಎಂಬ ಭಾವನೆ ಮೂಡುವಂತೆ ಮಾಡಲಾಗುವುದು ಎಂದರು.

ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಕಳೆದ ಸಾಲಿನಲ್ಲಿ ರಾಜ್ಯ ಸರ್ಕಾರ ಮೈಷುಗರ್ ಕಾರ್ಯಾರಂಭಕ್ಕೆ ೫೦ ಕೋಟಿ ರು. ಹಣ ನೀಡಿತು. ಇದರಿಂದ ದಾಖಲೆಯ ೨.೫೦ ಲಕ್ಷ ಟನ್ ಕಬ್ಬು ಅರೆದು ಕಾರ್ಯಾಚರಣೆ ಯಶಸ್ವಿಯಾಗಿದೆ. ಸಹ ವಿದ್ಯುತ್ ಘಟಕ ಕಾರ್ಯಾರಂಭವಾಗಿದೆ. ಹೊಸ ಕಾರ್ಖಾನೆ ನಿರ್ಮಾಣವಾದಲ್ಲಿ ಮೈಷುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರಿಗೆ ಶಾಶ್ವತ ಪರಿಹಾರ ದೊರಕಲಿದೆ ಎಂದರು.

ಚುನಾವಣೆಗೂ ಮುನ್ನ ಜಿಲ್ಲೆಯ ಜನರಿಗೆ ನೀಡಿದ ಆಶ್ವಾಸನೆಯಂತೆ ಹೊಸ ಸಕ್ಕರೆ ಕಾರ್ಖಾನೆ ನಿರ್ಮಿಸುವುದಾಗಿ ಘೋಷಿಸಲಾಗಿದೆ. ನುಡಿದಂತೆ ನಡೆಯುವವರು ನಾವು. ಬೇರೆ ಪಕ್ಷದವರಂತೆ ಘೋಷಣೆ ಮಾಡಿ ಜನರಿಗೆ ಮೋಸ ಮಾಡುವುದಿಲ್ಲ. ಆದಷ್ಟು ಬೇಗ ಕಾರ್ಖಾನೆ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.

ಕಾರ್ಖಾನೆ ಆಸ್ತಿ ಸಂಪೂರ್ಣವಾಗಿ ರಕ್ಷಣೆ ಮಾಡಲಾಗುವುದು. ಎಲ್ಲಿಯೂ ಒತ್ತುವರಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಹಕರಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ತಿಳಿಸಿದ ಶಾಸಕ ಪಿ.ರವಿಕುಮಾರ್, ಹಾಲಿ ಮೈಷುಗರ್ ಕಾರ್ಖಾನೆ ಇರುವ ಸ್ಥಳದಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಿಸುವ ಕನಸಿದೆ. ಇದರಿಂದ ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವುದರೊಂದಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು.

ವಿ.ಸಿ.ಫಾರಂನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿಯೂ ಬಜೆಟ್‌ನಲ್ಲಿ ಘೋಷಿಸಿರುವುದು ಸಂತಸದ ವಿಚಾರವಾಗಿದೆ. ಕೃಷಿ ವಿಶ್ವವಿದ್ಯಾಲಯದಿಂದ ಶಿಕ್ಷಣದ ಬೆಳವಣಿಗೆ ಜೊತೆಗೆ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕ ಅವಕಾಶಗಳು, ಅನುಕೂಲಗಳು ದೊರೆಯಲಿವೆ ಎಂದರು.

ಮುಂದಿನ ನಾಲ್ಕೈದು ತಿಂಗಳಲ್ಲಿ ನಗರದ ಚಿತ್ರಣ ಸಂಪೂರ್ಣವಾಗಿ ಬದಲಾವಣೆಯಾಗುವಂತೆ ಯೋಜನೆ ರೂಪಿಸಲಾಗಿದೆ. ಬೆಂಗಳೂರು ಮಾದರಿಯಲ್ಲಿ ರಸ್ತೆಗಳು, ವಾರ್ಡ್‌ಗಳು, ವೃತ್ತಗಳ ನಾಮಫಲಕಗಳು ತಲೆಎತ್ತಲಿವೆ. ಮೈಷುಗರ್ ವೃತ್ತ, ಮಹಾವೀರ ವೃತ್ತ, ಜಯಚಾಮರಾಜೇಂದ್ರ ಒಡೆಯರ್ ವೃತ್ತಗಳನ್ನು ಆಕರ್ಷಣೀಯವಾಗಿ ಅಭಿವೃದ್ಧಿಪಡಿಸಲಾಗುವುದು. ರಸ್ತೆಗಳು, ಚರಂಡಿಗಳ ನಿರ್ಮಾಣಕ್ಕೆ ಸದ್ಯ ಪ್ರಾಮುಖ್ಯತೆ ನೀಡಲಾಗಿದೆ. ಹಂತ ಹಂತವಾಗಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಶ್ರೀಧರ್, ರುದ್ರಪ್ಪ, ಜಿ.ಸಿ.ಆನಂದ್, ರಾಮೇಗೌಡ ಇತರರಿದ್ದರು.

Share this article