ಕನ್ನಡಪ್ರಭ ವಾರ್ತೆ ಮೈಸೂರು
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ತಂಡದ ಸಹಕಾರದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಎಂಡಿಎ) ಅಧಿಕಾರಿಗಳು ಸುಮಾರು 5000 ಕೋಟಿ ರು. ಅವ್ಯವಹಾರ ನಡೆಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಯತೀಂದ್ರ ಬುದ್ಧಿವಂತನೋ, ದಡ್ಡನೋ ಒಂದು ಗೊತ್ತಾಗುತ್ತಿಲ್ಲ. ಆತನನ್ನು ಮುಂದೆ ಇಟ್ಟುಕೊಂಡು ದಂಧೆ ಮಾಡಲಾಗುತ್ತಿದೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಿಂಡಿಕೇಟ್ ಒಂದನ್ನು ರಚಿಸಿಕೊಂಡಿದ್ದಾರೆ. ಇದರ ಮೂಲಕ ಅವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.
ಈ ಸಿಂಡಿಕೇಟ್ ನಲ್ಲಿ ಎಂಡಿಎ ಆಯುಕ್ತ ದಿನೇಶ್ ಕುಮಾರ್, ಶಾಸಕ ಕೆ.ಹರೀಶ್ ಗೌಡ, ಜಿಪಂ ಮಾಜಿ ಸದಸ್ಯ ರಾಕೇಶ್ ಪಾಪಣ್ಣ, ಎಂಡಿಎ ಅಧ್ಯಕ್ಷ ಕೆ. ಮರೀಗೌಡ, ಹಿಂದಿನ ಅಧ್ಯಕ್ಷ ಎಚ್.ವಿ. ರಾಜೀವ್, ಹಿಂದಿನ ಆಯುಕ್ತ ನಟೇಶ್, ಮರಿತಿಬ್ಬೇಗೌಡರ ಸಂಬಂಧಿ ಸುದೀಪ್, ದಲ್ಲಾಳಿಗಳಾದ ಉತ್ತಮಗೌಡ, ಮೋಹನ್, ಎಂಡಿಎ ಆಯುಕ್ತರ ಬಾಮೈದ ತೇಜಸ್ ಗೌಡ, ರೆಕಾರ್ಡ್ ರೂಂ ಅಧಿಕಾರಿ ತ್ರಿಶೂಲ್ ಮತ್ತಿತರರು ಭಾಗಿಯಾಗಿದ್ದಾರೆ ಎಂದರು.ಕುಲಗೆಡಿಸಿದ ಬೈರತಿ ಸುರೇಶ್:
ಅವ್ಯವಹಾರದ ವಿಚಾರ ಹೊರಗೆ ಬರುತ್ತಿರುತ್ತಿದ್ದಂತೆ ಭಾನುವಾರವಾದರೂ ಅಧಿಕಾರಿಗಳು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅಣತಿ ಮೇರೆಗೆ ಎಂಡಿಎ ಕಡತಗಳನ್ನು ದೊಡ್ಡ ದೊಡ್ಡ ಸೂಟ್ ಕೇಸ್ ಗಳಲ್ಲಿ ಬೆಂಗಳೂರಿಗೆ ತಗೆದುಕೊಂಡು ಹೋಗಿದ್ದಾರೆ. ಅಲ್ಲಿ ಏನನ್ನೋ ಸರಿ ಮಾಡುತ್ತಾರೋ ನೋಡಬೇಕು. ರಿಯಲ್ ಎಸ್ಟೇಟ್ ನಡೆಸುತ್ತಿದ್ದವನಿಗೆ ತಮ್ಮ ಶಿಷ್ಯ ಎನ್ನುವ ಕಾರಣಕ್ಕಾಗಿ ಸಿದ್ದರಾಮಯ್ಯ ನಗರಾಭಿವೃದ್ಧಿ ಖಾತೆ ಕೊಟ್ಟರೆ, ಆತ ಎಲ್ಲವನ್ನೂ ಕುಲಗೆಡಿಸಿ ಬಿಟ್ಟಿದ್ದಾನೆ ಎಂದು ಕಿಡಿಕಾರಿದರು.ಎಂಡಿಎ ಆಯುಕ್ತ, ಅಧ್ಯಕ್ಷರಿಗಿಂತ ಹೆಚ್ಚು ಸಚಿವರ ಜೊತೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಎಂಡಿಎ ದಲ್ಲಾಳಿಗಳ, ಏಜೆಂಟರ ಅಡ್ಡೆಯಾಗಿ ಪರಿವರ್ತನೆಯಾಗಿದೆ. ಅಲ್ಲಿ ಜನರ ಹಿತ ಚಿಂತನೆ ಇಲ್ಲವಾಗಿದೆ. ಸಂಪುಟ ದರ್ಜೆಯ ಸಚಿವರು ಎಂದರೆ ಸರ್ಕಾರ. ಆದ್ದರಿಂದ ಸರ್ಕಾರವೇ ಈ ಅವ್ಯವಹಾರದಲ್ಲಿ ಮುಳುಗಿ ಹೋಗಿದೆ ಎಂದರು.
ಎಂಡಿಎ ಸಭೆಯಲ್ಲಿ ಏನಾಗುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ. ಯಾವ ಅಜೆಂಡಾವೂ ಇರುವುದಿಲ್ಲ. ಯಾವ ವಿಷಯವನ್ನು ತರುತ್ತಾರೆ, ಯಾವ ವಿಷಯ ಚರ್ಚೆಯಾಗುತ್ತದೆ ಎನ್ನುವುದು ಕೂಡಾ ತಿಳಿಯುವುದಿಲ್ಲ. ವಿಷಯಗಳು ಹೊರಗೆ ಬರುವುದೇ ಇಲ್ಲ. ಆದರೆ ರೆಕಾರ್ಡ್ ಆಗಿರುತ್ತದೆ. ಇದಕ್ಕಾಗಿಯೇ ಕೆಲವು ಶಾಸಕರು, ಎಂಎಲ್ಸಿಗಳು ಇದ್ದಾರೆ ಎಂದರು.ನಾನು ಈಗಿನ ಅವ್ಯವಹಾರ ಕುರಿತು ಎಂಡಿಎ ಆಯುಕ್ತರಿಗೆ ಪತ್ರ ಬರೆದು ಬಹಳ ದಿನವಾಗಿದೆ. ಇಲ್ಲಿಯವರೆಗೂ ವಾಪಸ್ ಪ್ರತಿ ಉತ್ತರ ಬಂದಿಲ್ಲ. ಜುಲೈನಲ್ಲಿ ನಡೆಯುವ ಎಂಡಿಎ ಸಭೆಯಲ್ಲಿ ಕೆಲವೊಂದು ವಿಚಾರಗಳನ್ನು ಸೇರ್ಪಡೆಗೊಳಿಸಲು ಟಿಪ್ಪಣಿಯನ್ನು ಕಳುಹಿಸಿದ್ದೇನೆ. ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸುತ್ತೇನೆ. ಆದರೆ, ನಮ್ಮ ಕೆಲವು ಜನಪ್ರತಿಧಿಗಳಿಗೆ ಎಂಡಿಎ ಬೇಕಾಗಿಲ್ಲ. ಅವರ ಅಭಿವೃದ್ಧಿಯಾದರೇ ಸಾಕು ಎಂದು ಕಿಡಿಕಾರಿದರು.
50:50 ಅನುಪಾತದ ವಿಚಾರ ಸಭೆಯಲ್ಲಿ ಚರ್ಚೆಯಾಗಿತ್ತೇ ವಿನಹ ನಿರ್ಣಯವಾಗಿರಲಿಲ್ಲ. ಆದರೆ, ಎಂಡಿಎ ಅಧಿಕಾರಿಗಳು ನಿರ್ಣಯವಾಗಿದೆ ಎಂದು ಹೇಳಿ 40- 50 ವರ್ಷದ ಹಿಂದಿನ ಲೇಔಟ್ ಗಳಿಗೂ ಇದನ್ನು ಅನ್ವಯ ಮಾಡಿ, ಅಂದಿನವರಿಗೆಲ್ಲ ಪರಿಹಾರ ನೀಡಿ, ಒಬ್ಬೊಬ್ಬರಿಗೆ 20- 30 ಸೈಟ್‌ಗಳನ್ನು ನೀಡಿದ್ದಾರೆ ಎಂದರು.ಪ್ರಾಧಿಕಾರವು ಒಳಸಂಚಿನಿಂದ ಯಾರ- ಯಾರ ಆಸ್ತಿಯನ್ನು ಬಳಸಿಕೊಂಡು ಪರಿಹಾರಗಳನ್ನು ಸಂಬಂಧಿಸಿದವರಿಗೆ ತಿಳಿಯದಂತೆ ತಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಸೋದರ ಸಂಬಂಧಿ ಮಲ್ಲಣ್ಣ ಎಂಬುವವರ ಕೆಸರೆಯ 464ನೇ ಸರ್ವೇ ನಂಬರಿನ 3.16 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಮಲ್ಲಣ್ಣ ಪಾರ್ವತಮ್ಮ ಅವರಿಗೆ ಆ ಜಮೀನನ್ನು ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು. ಎಂಡಿಎ ಇವರ ಹೆಸರಿನಲ್ಲೂ ಪರಿಹಾರವನ್ನು ತಗೆದುಕೊಂಡಿದ್ದಾರೆ. ಈ ರೀತಿಯಾಗಿ ಇನ್ನೂ ಎಷ್ಟು ಅವ್ಯವಹಾರ ಮಾಡಿರಬೇಕು ಎಂದು ಅವರು ಪ್ರಶ್ನಿಸಿದರು.
ಸಿಬಿಐ ತನಿಖೆ ಆಗಬೇಕು:ಎಂಡಿಎ ಅವ್ಯವಹಾರ ವಿಚಾರವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು. ಎಸ್‌ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಸಲು ಆಗುವುದಿಲ್ಲ. ಏಕೆಂದರೆ ಅದು ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಮೇಲ್ನೋಟಕ್ಕೆ ತಪ್ಪಿತಸ್ಥರು ಎಂದು ಕಂಡು ಬಂದವರನ್ನು ಅವರು ಯಾರೇ ಆಗಿರಲಿ ತಕ್ಷಣವೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.ಎಂಎಲ್ಸಿ ಮಂಜೇಗೌಡ ಅಟೆಂಡರ್
ಎಂಡಿಎ ಅವ್ಯವಹಾರದಲ್ಲಿ ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕೂಡಾ ಶಾಮೀಲಾಗಿದ್ದಾರೆ. ಮಂಜೇಗೌಡ ಎಂಎಲ್ಸಿ ಅಲ್ಲ. ಅವರೊಬ್ಬ ಎಂಡಿಎ ಅಟೆಂಡರ್. ಯಾವಾಗಲೂ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಫೈಲ್ ಗಳನ್ನು ಹಿಡಿದುಕೊಂಡು ಓಡಾಡುತ್ತಾರೆ. ಮಲಗುವುದು ಅಲ್ಲೆ, ಬೆಳಗ್ಗೆ ಎದ್ದು ಮುಖ ತೊಳೆಯುವುದು ಅಲ್ಲೆ. ನಾಷ್ಟ- ತಿಂಡಿ ಎಲ್ಲಾ ಅಲ್ಲೇ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ವ್ಯಂಗ್ಯವಾಡಿದರು.ಎಂಡಿಎ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಳ ಕಾಳಜಿ ಇತ್ತು. ಬದ್ಧತೆಯನ್ನು ಹೊಂದಿದ್ದರು. ಈಗ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಅವರಿಗೆ ಗೊತ್ತಿದೇಯೋ ಅಥವಾ ಗೊತ್ತಿಲ್ಲವೋ ತಿಳಿಯುತ್ತಿಲ್ಲ. ಆದರೆ, ಅವರ ಹೆಸರನ್ನು ಬಳಸಿಕೊಂಡು ದೊಡ್ಡ ಮಟ್ಟದ ದರೋಡೆಯನ್ನು ಮಾಡುತ್ತಿದ್ದಾರೆ.- ಎಚ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ