ಜುಲೈ 22ರಂದು ಧಾರವಾಡ ಐಐಟಿ 5ನೇ ಘಟಿಕೋತ್ಸವ

KannadaprabhaNewsNetwork | Updated : Jul 20 2024, 12:53 AM IST

ಸಾರಾಂಶ

ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಷನ್‌, ಕಂಪ್ಯೂಟರ್‌ ಸೈನ್ಸ, ಮೆಕ್ಯಾನಿಕಲ್‌ ವಿಭಾಗದಲ್ಲಿ 154 ಬಿ.ಟೆಕ್‌ ಪದವಿ, 36 ವಿದ್ಯಾರ್ಥಿಗಳಿಗೆ ಎಂಟೆಕ್‌ ಸೇರಿದಂತೆ ಒಟ್ಟು 190 ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ ಮೂವರಿಗೆ ಬೆಳ್ಳಿ ಪದಕ, ಒಬ್ಬರಿಗೆ ರಾಷ್ಟ್ರಪತಿ ಚಿನ್ನದ ಪದಕ, ಮತ್ತೊಬ್ಬರಿಗೆ ಐಐಟಿ ನಿರ್ದೇಶಕರ ಚಿನ್ನದ ಪದಕ ಪ್ರದಾನ ನಡೆಯಲಿದೆ.

ಧಾರವಾಡ:

ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) 5ನೇ ಘಟಿಕೋತ್ಸವ ಜು. 22ರಂದು ಮಧ್ಯಾಹ್ನ 3.30ಕ್ಕೆ ಆವರಣದ ಕೇಂದ್ರೀಯ ಕಲಿಕಾ ಸಭಾಗ್ರಹದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೂಲತಃ ಹುಬ್ಬಳ್ಳಿಯವರಾದ ಹಾಗೂ ಸದ್ಯ ಕ್ಯಾಲಿಫೋರ್ನಿಯಾದಲ್ಲಿ ಖಗೋಳಶಾಸ್ತ್ರಜ್ಞ ಹಾಗೂ ಗ್ರಹ ವಿಜ್ಞಾನಿಯಾಗಿರುವ ಪ್ರೊ. ಶ್ರೀನಿವಾಸ ರಾಮಚಂದ್ರ ಕುಲಕರ್ಣಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.

ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯೂನಿಕೇಷನ್‌, ಕಂಪ್ಯೂಟರ್‌ ಸೈನ್ಸ, ಮೆಕ್ಯಾನಿಕಲ್‌ ವಿಭಾಗದಲ್ಲಿ 154 ಬಿ.ಟೆಕ್‌ ಪದವಿ, 36 ವಿದ್ಯಾರ್ಥಿಗಳಿಗೆ ಎಂಟೆಕ್‌ ಸೇರಿದಂತೆ ಒಟ್ಟು 190 ಪದವಿ ಪ್ರದಾನ ಮಾಡಲಾಗುತ್ತಿದೆ. ಈ ಪೈಕಿ ಮೂವರಿಗೆ ಬೆಳ್ಳಿ ಪದಕ, ಒಬ್ಬರಿಗೆ ರಾಷ್ಟ್ರಪತಿ ಚಿನ್ನದ ಪದಕ, ಮತ್ತೊಬ್ಬರಿಗೆ ಐಐಟಿ ನಿರ್ದೇಶಕರ ಚಿನ್ನದ ಪದಕವನ್ನು ಅತಿಥಿಗಳು ಪ್ರದಾನ ಮಾಡಲಿದ್ದಾರೆ ಎಂದು ಹೇಳಿದ ಅವರು, ₹ 50 ಕೋಟಿ ವೆಚ್ಚದಲ್ಲಿ ಇಲ್ಲಿಯ ವರೆಗೆ ಐಐಟಿ ಹತ್ತು-ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಹಂತ-ಹಂತವಾಗಿ ಅವುಗಳನ್ನು ಜಾರಿಗೊಳಿಸಲಾಗುತ್ತಿದೆ.

₹ 10 ಕೋಟಿ ಸಿಎಸ್‌ಆರ್‌ ಅನುದಾನ ಮತ್ತು ₹ 4 ಕೋಟಿ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳಿಂದ ಬಂದಿದ್ದು, ಸಂಶೋಧನೆ ಹಾಗೂ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿದೆ. 2030ರ ವರೆಗೆ ಧಾರವಾಡ ಐಐಟಿಯನ್ನು ಶೂನ್ಯ ತ್ಯಾಜ್ಯ, ಶೂನ್ಯ ಇಂಧನ ಹಾಗೂ ಶೂನ್ಯ ನೀರು ಕ್ಯಾಂಪಸ್‌ನ್ನಾಗಿ ಮಾಡಲು ಪಣತೊಟ್ಟಿದ್ದೇವೆ. ಜತೆಗೆ ಇದು ಹಸಿರು ಐಐಟಿ ಎಂಬ ಖ್ಯಾತಿ ಸಹ ಪಡೆಯಲು ಬೇಕಾದ ಪ್ರಯತ್ನಗಳು ನಡೆದಿವೆ ಎಂದು ಪ್ರೊ. ವಂಕಪ್ಪಯ್ಯ ಮಾಹಿತಿ ನೀಡಿದರು.

ಐಐಟಿ ಸಂಶೋಧನೆ:

ಧಾರವಾಡದಲ್ಲಿ ಐಐಟಿ ಮುಗಿಸಿದ ಪದವೀಧರರೆಲ್ಲರೂ ನೌಕರಿ ಮಾಡುತ್ತಿಲ್ಲ. ಶೇ. 73.5ರಷ್ಟು ಉದ್ಯೋಗವಕಾಶ ಪಡೆದಿದ್ದು, ಉಳಿದವರು ಉನ್ನತ ಶಿಕ್ಷಣ ಹಾಗೂ ಇನ್ನುಳಿದವರು ಸ್ವಯಂ ಉದ್ಯೋಗದತ್ತ ತೊಡಗಿದ್ದಾರೆ. ರಾಜ್ಯದ ಪೈಕಿ ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಗಲು ಪ್ರಮುಖ ಕಾರಣ ಕೃಷಿ ಪ್ರಧಾನ ಪ್ರದೇಶ. ಇಲ್ಲಿಯ ರೈತರಿಗೆ ಪ್ರತಿ ಮಳೆ ಹನಿಯನ್ನು ಕೃಷಿಗೆ ಉಳಿಸಿಕೊಳ್ಳಲು ತಂತ್ರಜ್ಞಾನದ ಸಂಶೋಧನೆ ನಡೆದಿದೆ. ಇದಕ್ಕಾಗಿ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ಸಹಕಾರ ಸಹ ಪಡೆಯಲಾಗುತ್ತಿದೆ ಎಂದರು.

8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯವನ್ನು ಕನ್ನಡಕ್ಕೆ ಅನುವಾದ ಮಾಡುವ ತಂತ್ರಜ್ಞಾನದ ಸಂಶೋಧನೆ ಪ್ರಗತಿಯಲ್ಲಿದೆ ಎಂದು ಐಐಟಿಯಲ್ಲಿ ಆಗುತ್ತಿರುವ ಸಂಶೋಧನೆಗಳ ಮಾಹಿತಿ ನೀಡಿದರು.

ಅಧ್ಯಾಪಕರು, ವಿದ್ಯಾರ್ಥಿಗಳು ಸ್ಮಾರ್ಟ್‌ ಕೃಷಿಗಾಗಿ ಡ್ರೋನ್‌ ವಿನ್ಯಾಸಗೊಳಿಸುತ್ತಿದ್ದಾರೆ. ಕೀಟನಾಶಕ ಬಳಕೆ ಕಡಿಮೆ ಮಾಡಲು ಮತ್ತು ಮಣ್ಣಿನ ಮಾಲಿನ್ಯ ಕಡಿಮೆ ಮಾಡುವ ತಂತ್ರಜ್ಞಾನ, ಬೆಳೆ ಆರೋಗ್ಯ, ಮಾರುಕಟ್ಟೆ ವ್ಯವಸ್ಥೆ, ರೋಗ ಮತ್ತು ಕೀಟ ಪತ್ತೆ ಅಂತಹ ವೈಶಿಷ್ಟ್ಯಗಳನ್ನು ಒಳಗೊಂಡ ಅಂಡ್ರಾಯ್ಡ್ ಆಧಾರಿಕ ಅಪ್ಲಿಕೇಶನ್‌ ರಚಿಸುವಲ್ಲಿ ಐಐಟಿ ಕಾರ್ಯ ಮಾಡುತ್ತಿದೆ. ಬಾಯಿ ಮತ್ತು ಅಂಡಾಶದ ಕ್ಯಾನ್ಸರ್‌ ಪತ್ತೆ ಹಚ್ಚಲು ಪೋರ್ಟಬಲ್‌ ಸಾಧನ ವಿನ್ಯಾಸಗೊಳಿಸಲಾಗಿದೆ. ಕಟ್ಟಡಗಳಿಗೆ ಬೆಂಕಿ ಹತ್ತಿದಾಗ ಅಗ್ನಿಶಾಮಕ ದಳಕ್ಕೆ ಸಹಾಯವಾಗುವ ಡ್ರೋನ್‌ ವಿನ್ಯಾಸಗೊಳಿಸಿದ್ದು ಹೆಚ್ಚಿನ ತಾಪಮಾನ ತಡೆಯುವ ಡ್ರೋನ್‌ ಸೇರಿದಂತೆ ಹಲವು ಸಂಶೋಧನೆಯಲ್ಲಿ ಐಐಟಿ ತೊಡಗಿದೆ ಎಂದು ಪ್ರೊ. ವೆಂಕಪ್ಪಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ಡೀನ್ ಪ್ರೊ. ನಾರಾಯಣ ಪುಣೇಕರ್‌, ಐಐಟಿ ಕುಲಸಚಿವ ಸಂದೀಪ ಪರೀಕ್‌, ಡೀನ್‌ ಎಸ್‌.ಎಂ. ಶಿವಪ್ರಸಾದ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

Share this article