ಕನ್ನಡಪ್ರಭ ವಾರ್ತೆ ಹಾಸನ ಕನ್ನಡ ಶಾಲೆಗೆ ಪ್ರಾಧ್ಯಾನತೆ ಕೊಡುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ೫೦೦ರಿಂದ ೬೦೦ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ ಮಾಡಲಾಗುವುದು. ಆದರೆ ಕಾಂಗ್ರೆಸ್ ಸರ್ಕಾರದ ೫ ಗ್ಯಾರಂಟಿಗಳಿಗೂ ಶಾಲೆಗಳ ಅಭಿವೃದ್ಧಿಗೂ ಯಾವ ಸಂಬಂಧವೂ ಇಲ್ಲ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಆದ ಮೆಲೆ ರಾಜ್ಯ ಓಬಿಸಿ ಅಧ್ಯಕ್ಷರಾಗಿ ಹಾಸನ ನಗರದಲ್ಲಿ ಓಬಿಸಿ ಸಭೆ ನಡೆಸಬೇಕಿತ್ತು. ಕಾರಣಾಂತರದಿಂದ ಹಾಸನ ಸೇರಿದಂತೆ ನಾನು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಓಬಿಸಿ ಸಭೆ ಮಾಡಲಾಗಲಿಲ್ಲ. ಶಿಕ್ಷಣ ಇಲಾಖೆ ಎಂದರೇ ಬಹಳ ದೊಡ್ಡ ಇಲಾಖೆ ಸಮಸ್ಯೆಗಳು ಹೆಚ್ಚು ಇದೆ. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ೫೩ ಸಾವಿರ ಶಿಕ್ಷಕ ಹುದ್ದೆಗಳು ಖಾಲಿ ಇದ್ದು, ೧೩ ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಂಡಿದ್ದೇವೆ. ಇನ್ನೂ ೨೦ ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಶಿಥಿಲಗೊಂಡಿರುವ ಶಾಲೆ ಕಟ್ಟಡ ದುರಸ್ತಿ ಮಾಡಿಸಿಕೊಡಲಾಗುವುದು. ಪ್ರಸ್ತುತ ಕರ್ನಾಟಕ ಪಬ್ಲಿಕ್ ಶಾಲೆಗಳು ಬಹಳ ಅವಶ್ಯಕತೆ ಇದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ೫೦೦-೬೦೦ ಕರ್ನಾಟಕ ಪಬ್ಲಿಕ್ ಸ್ಕೂಲ್ ಸ್ಥಾಪನೆ ಮಾಡಲಾಗುವುದು. ಪ್ರತಿ ವಿಧಾನಸಭೆ ಸದಸ್ಯರಿಗೆ ಶಾಸಕರಿಗೆ ೫-೬ ಶಾಲೆ ಕೊಡಲಾಗುವುದು ಎಂದರು.
ಜಾತಿ ಗಣತಿ ವರದಿ ಅದಷ್ಟು ಶೀಘ್ರ ಬಿಡುಗಡೆಯಾಗಲೇಬೇಕು. ಮಾಹಿತಿ ಸೋರಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸೋರಿಕೆ ಆಗಿದ್ದರೆ, ಕಳೆದು ಹೋಗಿದ್ದರೆ ಅದರ ಬಗ್ಗೆ ತನಿಖೆ ನಡೆಯಲಿ. ಡಿ.ಕೆ. ಶಿವಕುಮಾರ್ ಪ್ರಕರಣ ವಾಪಸ್ ತೆಗೆದುಕೊಳ್ಳಬಾರದು ಎಂದು ಕಾನೂನು ಇಲ್ಲ. ವಿರೋಧ ಪಕ್ಷದ ಟೀಕೆ ಟಿಪ್ಪಣಿಗೆ ಉತ್ತರ ಕೊಡುವುದಿಲ್ಲ. ಜನರು ತಿರ್ಮಾನ ಮಾಡಲು ನಮಗೆ ಮತ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಆಗಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಮಾಡಲು ಮೈತ್ರಿಯಾಗಿದ್ದರೊ ಅಥವಾ ಯಾವ ಕಾರಣಕ್ಕೆ ಗೊತ್ತಿಲ್ಲ. ಇದನ್ನು ನೋಡಿ ನಾನು ಶಿವಲಿಂಗೇಗೌಡ ಪಕ್ಷ ಬಿಟ್ಟು ಬಂದಿರುವುದಾಗಿ ತಿಳಿಸಿದರು. ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯದಿಂದ ೪ ಲಕ್ಷ ಕೋಟಿ ಹಣ ತೆರಿಗೆ ನೀಡಲಾಗುತ್ತದೆ. ಅದರಲ್ಲಿ ಕೇಂದ್ರ ಸರ್ಕಾರ ನಮಗೆ ಕೇವಲ ೫೦ ಸಾವಿರ ಕೋಟಿ ಹಣ ಕೊಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಎಂ.ಪಿ. ಚುನಾವಣೆಗೆ ತಯಾರಾಗುವುದಾಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಪಕ್ಷದ ಮುಖಂಡ ಬನವಾಸೆ ರಂಗಸ್ವಾಮಿ, ಎಚ್.ಪಿ. ಮೋಹನ್, ಎಚ್.ಕೆ. ಜವರೇಗೌಡ, ಪಟೇಲ್ ಶಿವಪ್ಪ, ಶ್ರೇಯಸ್ ಪಟೇಲ್, ತಾರಾ ಚಂದನ್, ಅಶೋಕ್, ದಿನೇಶ್ ಭೈರೇಗೌಡ, ಆದಿಲ್, ಶಿವಕುಮಾರ್, ಲಕ್ಷ್ಮಣ್, ಇತರರು ಹಾಜರಿದ್ದರು.