- ಭವಿಷ್ಯದಲ್ಲಿ ಪೆಟ್ರೋಲ್ ಪಂಪ್, ನೀರು ಪೂರೈಕೆ ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ: ಕೆ.ಮಹೇಶ್ವರಪ್ಪ ಉಪನ್ಯಾಸ
- ಡಾ.ಸದ್ಯೋಜಾತ ಸ್ವಾಮಿಗಳ ಹಿರೇಮಠದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭ - - - ಕನ್ನಡಪ್ರಭ ವಾರ್ತೆ ದಾವಣಗೆರೆಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 56 ಉಪ ಕ್ರಮಗಳನ್ನು ರೂಪಿಸಿದೆ. ತಂತ್ರಾಂಶದಿಂದ ಹಿಡಿದು, ಪೆಟ್ರೋಲ್ ಪಂಪ್ ಸ್ಥಾಪಿಸುವವರೆಗೂ ಹಲವಾರು ವಿಷಯಗಳಲ್ಲಿ ನೆರವು ನೀಡುತ್ತಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕ ಕೆ.ಮಹೇಶ್ವರಪ್ಪ ಹೇಳಿದರು.
ನಗರದ ಡಾ.ಸದ್ಯೋಜಾತ ಸ್ವಾಮಿಗಳ ಹಿರೇಮಠದಲ್ಲಿ ಗುರುವಾರ ಬೆಂಗಳೂರಿನ ರಾಜ್ಯ ಸಹಕಾರ ಮಹಾ ಮಂಡಳ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಹಾಗೂ ವಿವಿಧ ಸಹಕಾರ ಸಂಘಗಳ ಒಕ್ಕೂಟ ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ "ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿಯನ್ನು ಬಲಪಡಿಸುವುದು " ವಿಷಯವಾಗಿ ಅವರು ಉಪನ್ಯಾಸ ನೀಡಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ಕೇಂದ್ರ ಸಾಕಷ್ಟು ಮಾರ್ಗದರ್ಶನ, ನೆರವು ನೀಡುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ಗಳಿಗೆ ಮಾದರಿ ಬೈಲಾಗಳನ್ನು ರೂಪಿಸಿದೆ. ಇದರಿಂದಾಗಿ ಸಹಕಾರ ಸಂಘಗಳು ಆರ್ಥಿಕವಾಗಿ ಪಾರದರ್ಶಕ ಹಾಗೂ ಶಕ್ತಿಯುತವಾಗಲು ಸಹಕಾರಿಯಾಗಲಿದೆ. ದೇಶಾದ್ಯಂತ ಇರುವ ಪ್ಯಾಕ್ಸ್‌ಗಳಿಗೆ ಒಂದೇ ರೀತಿ ತಂತ್ರಾಂಶ ಅಳವಡಿಸಲಾಗುತ್ತಿದೆ. ₹2,516 ಕೋಟಿ ವೆಚ್ಚದಲ್ಲಿ 67 ಸಾವಿರಕ್ಕೂ ಹೆಚ್ಚು ಪ್ಯಾಕ್ಸ್‌ಗಳು ಒಂದೇ ರೀತಿ ಸಾಫ್ಟ್‌ವೇರ್ ಹೊಂದಲಿವೆ. ಇದು ಮುಂದಿನ ದಿನಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯ 126 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಸಾಕಷ್ಟು ಸಂಘಗಳಲ್ಲಿ ಉಪಕ್ರಮ ಪಾಲನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಗ್ರಾಮೀಣ ನೀರು ಪೂರೈಕೆ, ನಿರ್ವಹಣೆಯೂ ಪ್ರಾರಂಭವಾಗಲಿದೆ. ಸಂಘಗಳ ಸಮಗ್ರ ಅಭಿವೃದ್ಧಿಗಾಗಿ ಏಕರೂಪದ ಬೈಲಾ ತರಲಾಗಿದೆ. ದೇಶದಲ್ಲಿ ಇರುವಂತಹ 67,009 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕಾಗಿಯೇ ₹2516 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.ದೇಶದ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಂದೇ ಮಾದರಿಯ ಸಾಫ್ಟ್‌ವೇರ್, ಹಾರ್ಡ್‌ವೇರ್ ಅಳವಡಿಸಲಾಗುವುದು. ಇದರಿಂದ ಒಂದೇ ಕಡೆ ನಿರ್ವಹಣೆ, ನಿಯಂತ್ರಣ ಸಾಧ್ಯವಾಗಲಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣದ ಧಾನ್ಯ ಸಂಗ್ರಹ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮದೇ ಗೋದಾಮು ಹೊಂದಲಿವೆ. ರೈತರು ತಮ್ಮ ಉತ್ಪನ್ನಗಳ ದಾಸ್ತಾನು ಮಾಡಬಹುದು ಎಂದು ಮಾಹಿತಿ ನೀಡಿದರು.
ಪತ್ತಿನ ಸಹಕಾರ ಸಂಘಗಳ ಮೂಲಕ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ವಿತರಣೆ ಪ್ರಾರಂಭವಾಗಲಿದೆ. ಅಷ್ಟೇ ಅಲ್ಲ, ಸಾಮಾನ್ಯ ಸೇವಾ ಕೇಂದ್ರ, ಜನೌಷಧಿ ಕೇಂದ್ರವೂ ಆರಂಭವಾಗುತ್ತದೆ. ಸಂಘಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮೃದ್ಧ ಕೇಂದ್ರವಾಗಿಸುವ ಮೂಲಕ ನಿಗದಿತ ಕಾಲದಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ರಸಗೊಬ್ಬರ ಪೂರೈಸುವ ಚಿಂತನೆ ಇದೆ ಎಂದು ವಿವರಿಸಿದರು.ಬ್ಯಾಂಕ್ ಮಿತ್ರ ಯೋಜನೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ವಿತ್ ಡ್ರಾ, ಕೆವೈಸಿ, ಜೀವನ ಪ್ರಮಾಣಪತ್ರ ಒದಗಿಸಲಾಗುವುದು. ಮೈಕ್ರೋ ಎಟಿಎಂ ಪ್ರಾರಂಭವಾಗಲಿವೆ. ಪ್ರಧಾನಮಂತ್ರಿ ಕುಸುಮ್ ಯೋಜನೆ ಮೂಲಕ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡುವ ಮೂಲಕ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ನಿವಾರಿಸಲು ಹೆಜ್ಜೆ ಇಡಲಾಗಿದೆ. ಒಟ್ಟಾರೆ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ಆಗುವುದಂತೂ ಸ್ಪಷ್ಟ ಎಂದು ಕೆ.ಮಹೇಶ್ವರಪ್ಪ ತಿಳಿಸಿದರು.
- - -ಬಾಕ್ಸ್
* ಸಹಕಾರ ಸಂಘ ಸ್ಥಾಪನೆ ನಿಬಂಧನೆ ಸಡಿಸಲು ಒತ್ತಾಯ - ಕಠಿಣ ಷರತ್ತು, ನೀತಿ, ನಿಯಮ ಸರಳೀಕರಿಸಲು ಕೇಂದ್ರಕ್ಕೆ ಜೆ.ಆರ್.ಷಣ್ಮುಖಪ್ಪ ಮನವಿಕನ್ನಡಪ್ರಭ ವಾರ್ತೆ ದಾವಣಗೆರೆ
ದೇಶದಲ್ಲಿ ಇಂದು ಸಹಕಾರಿ ಕ್ಷೇತ್ರದ ವ್ಯಾಪ್ತಿ ಮತ್ತು ಉದ್ದೇಶ ವಿಸ್ತಾರಗೊಳ್ಳುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ, ಹಿರಿಯ ಸಹಕಾರಿ ಧುರೀಣ ಜೆ.ಆರ್. ಷಣ್ಮುಖಪ್ಪ ಹೇಳಿದರು.ನಗರದ ಹಿರೇಮಠದಲ್ಲಿ ಗುರುವಾರ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಗ್ರಾಮ ಅಥವಾ ಗ್ರಾಪಂ ವ್ಯಾಪ್ತಿಯಲ್ಲಿ ಸಹಕಾರ ಸಂಘ ಸ್ಥಾಪಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ ಎಂದರು.
ಪ್ರತಿ ಗ್ರಾಮ, ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಸಹಕಾರ ಸಂಘ ಸ್ಥಾಪಿಸಲು ಕೇಂದ್ರವು ಕೆಲ ನೀತಿ, ನಿಯಮ ತಿಳಿಸಿದೆ. ಆದರೆ, ಸಂಘಗಳ ಸ್ಥಾಪನೆಗೆ ವಿಧಿಸಿರುವ ಕೆಲ ನಿಬಂಧನೆಗಳು ಕಠಿಣವಾಗಿದ್ಣು, ಅವುಗಳನ್ನು ಸರಳೀಕರಣಗೊಳಿಸಿದರೆ ಕೇಂದ್ರದ ಉದ್ದೇಶ ಈಡೇರುತ್ತದೆ. ಈಗಾಗಲೇ ಸಂಘಗಳು ಪಡಿತರ ಧಾನ್ಯ ವಿತರಣೆ, ಸಾರಿಗೆ, ಆಸ್ಪತ್ರೆ ಸೇರಿದಂತೆ ಅನೇಕ ಕ್ಷೇತ್ರಕ್ಕೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಭವಿಷ್ಯದಲ್ಲಿ ಸಹಕಾರಿ ಕ್ಷೇತ್ರ ದೇಶದ ಪ್ರಮುಖ ಆರ್ಥಿಕ ವಲಯವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶ್ ಮಾತನಾಡಿ, ದೇಶದ ಎಲ್ಲ ಸಹಕಾರ ಸಂಘಗಳು ಶೀಘ್ರವೇ ಗಣಕೀಕರಣ ವ್ಯವಸ್ಥೆಗೆ ಒಳಪಡಲಿವೆ. ಮುಂದಿನ 3 ತಿಂಗಳಲ್ಲಿ ಎಲ್ಲ ಸಹಕಾರಿ ಸಂಸ್ಥೆಗಳು ಒಂದೇ ತಂತ್ರಾಂಶದ ಮೂಲಕ ವ್ಯವಹರಿಸಬೇಕಾಗುತ್ತದೆ. ಈ ಮೂಲಕ ಸಹಕಾರ ಸಂಸ್ಥೆಗಳಿಗೆ ಮಹತ್ವ ಬರಲಿದೆ. ಸಹಕಾರ ಕ್ಷೇತ್ರದಲ್ಲೂ ಹೊಸತನ, ಬದಲಾವಣೆಯಾಗುತ್ತಿದೆ. ಅದನ್ನು ಸ್ವೀಕರಿಸಲು ಸಹಕಾರ ಕ್ಷೇತ್ರದ ನಾವು, ನೀವೆಲ್ಲರೂ ಸಹ ಸಜ್ಜಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ 1508 ವಿವಿಧ ಸಹಕಾರ ಸಂಘಗಳಿವೆ. ಇದರಲ್ಲಿ 1256 ಸಕ್ರಿಯವಾಗಿದ್ದು, 96 ನಷ್ಟದಲ್ಲಿವೆ. 560 ಸಂಘ ಲಾಭದಲ್ಲಿವೆ. ಸಹಕಾರಿ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಹೊಂದಲು ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಪಡೆದುಕೊಂಡು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಸಂಘಗಳು ಮತ್ತಷ್ಟು ಜನಪರ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಶಿಚಿದಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಎಚ್.ಕೆ.ಬಸಪ್ಪ, ಬಿ.ಜಿ.ಬಸವರಾಜಪ್ಪ, ಬಿ.ಶೇಖರಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಎಸ್.ಬಿ.ಶಿವಕುಮಾರ, ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ಅಧ್ಯಕ್ಷ ಜಿ.ಡಿ.ಗುರುಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್. ಸ್ವಾಮಿ ಮಾತನಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಜಿ. ಶ್ರೀನಿವಾಸಮೂರ್ತಿ, ಹರಿಹರದ ಡಿ.ಕುಮಾರ, ಹಾಲು ಒಕ್ಕೂಟ ಉಪಾಧ್ಯಕ್ಷ ಚೇತನ್ ಎಸ್. ನಾಡಿಗರ, ವೃತ್ತಿಪರ ನಿರ್ದೇಶಕ ಎಂ.ಎಂ. ಹಾಲಸ್ವಾಮಿ, ಒಕ್ಕೂಟದ ನಿರ್ದೇಶಕಿ ಶಿವಗಂಗಮ್ಮ, ಅನ್ನಪೂರ್ಣ, ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ನಂಜುಂಡೇಗೌಡ ಇತರರು ಇದ್ದರು.ಒಕ್ಕೂಟದ ಸಿಇಒ ಹಾಲಪ್ಪ ಕೋಡಿಹಳ್ಳಿ, ಜಿಲ್ಲಾ ಸಹಕಾರ ಶಿಕ್ಷಕ ಕೆ.ಎಚ್. ಸಂತೋಷಕುಮಾರ, ವ್ಯವಸ್ಥಾಪಕ ಕೆ.ಎಂ.ಜಗದೀಶ ಕುರುಡಿಮಠ, ಸಿಬ್ಬಂದಿ ರಂಗನಾಥ್ ಕಾರ್ಯಕ್ರಮ ನಡೆಸಿಕೊಟ್ಟರು.
- - - -14ಕೆಡಿವಿಜಿ3, 4:ದಾವಣಗೆರೆ ಹಿರೇಮಠದಲ್ಲಿ ಗುರುವಾರ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಉದ್ಘಾಟಿಸಿದರು.