680 ಕೋಟಿ ರು. ಕೃಷಿ ಉತ್ಪನ್ನ ಖರೀದಿಗೆ ಒಡಂಬಡಿಕೆ

KannadaprabhaNewsNetwork | Published : Feb 28, 2024 2:38 AM

ಸಾರಾಂಶ

ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳ ಖರೀದಿ ಮಾಡಿಕೊಳ್ಳುವ ಕುರಿತು ಕೊಪ್ಪಳದಲ್ಲಿ ನಡೆದ ರಫ್ತುದಾರರು, ಖರೀದಿದಾರರು ಹಾಗೂ ರೈತ ಮಾರಾಟಗಾರರ ಮೇಳದಲ್ಲಿ ಸುಮಾರು ₹680 ಕೋಟಿಯ ಹಣ್ಣು, ತರಕಾರಿ, ಮಿಲೆಟ್ ಖರೀದಿಗೆ ಸುಮಾರು 30ಕ್ಕೂ ಹೆಚ್ಚು ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ದೊಡ್ಡ ಕಂಪನಿಗಳು ತಮ್ಮ ವ್ಯಾಪಾರ ವಹಿವಾಟು ನಡೆಸಲು ಒಪ್ಪಂದ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಇಲ್ಲಿ ರೈತರ ಜತೆಗೆ ಕೃಷಿ ಉತ್ಪನ್ನಗಳ ನೇರ ಖರೀದಿಗೆ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ.

ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳ ಖರೀದಿ ಮಾಡಿಕೊಳ್ಳುವ ಕುರಿತು ಕೊಪ್ಪಳದಲ್ಲಿ ನಡೆದ ರಫ್ತುದಾರರು, ಖರೀದಿದಾರರು ಹಾಗೂ ರೈತ ಮಾರಾಟಗಾರರ ಮೇಳದಲ್ಲಿ ಸುಮಾರು ₹680 ಕೋಟಿಯ ಹಣ್ಣು, ತರಕಾರಿ, ಮಿಲೆಟ್ ಖರೀದಿಗೆ ಸುಮಾರು 30ಕ್ಕೂ ಹೆಚ್ಚು ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ.

ಕಂಪನಿಗಳೇ ಬಂದು, ರೈತರನ್ನು ರೌಂಡ್ ಟೇಬಲ್‌ನಲ್ಲಿ ಕೂಡಿಸಿಕೊಂಡು ಖರೀದಿ ಒಪ್ಪಂದ ಮಾಡಿಕೊಂಡಿರುವುದು ಈ ಮೇಳದ ವಿಶೇಷ. ರೈತರು ಬೆಳೆಯುವ ಉತ್ಪನ್ನಗಳನ್ನು ಖರೀದಿ ಮಾಡುವ ಕುರಿತು ಮೊದಲೇ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದರಿಂದ ರೈತರು ಇನ್ಮುಂದೆ ನಿರಾತಂಕವಾಗಿ ಬೆಳೆಯಬಹುದಾಗಿದೆ. ಕಂಪನಿಗಳು ಮತ್ತು ರೈತರ ನಡುವೆ ಮಧ್ಯವರ್ತಿಗಳು ಇಲ್ಲದೇ ನೇರವಾಗಿ ಸಂಪರ್ಕ ಸಾಧಿಸಲು ಸಹ ಸಾಧ್ಯವಾಗಿದೆ ಎನ್ನುವುದು ಗಮನಾರ್ಹ ಸಂಗತಿ.

ಕೇವಲ ಖರೀದಿ ಕುರಿತು ಒಪ್ಪಂದ ನಡೆಯುತ್ತದೆ. ದರ ನಿಗದಿ ಗುಣಮಟ್ಟವನ್ನು ಆಧರಿಸಿ ಇರುವುದರಿಂದ ರೈತರ ಉತ್ಪನ್ನಗಳನ್ನು ನೋಡಿದ ಮೇಲೆ ಅಂದಿನ ಮಾರುಕಟ್ಟೆಯ ದರವನ್ನಾಧರಿಸಿ ದರ ನಿಗದಿಯಾಗುತ್ತದೆ.

ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಕೊಪ್ಪಳ ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಏರ್ಪಡಿಸಿದ್ದ ರಫ್ತುದಾರರು, ಖರೀದಿದಾರರು ಹಾಗೂ ರೈತ ಮಾರಾಟಗಾರರ ಮೇಳದಲ್ಲಿ ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಖರೀದಿ ಪ್ರಕ್ರಿಯೆ ಇಂದಿನಿಂದಲೇ ಪ್ರಾರಂಭವಾಗಿದ್ದು, ಈಗ ಆಗಿರುವ ಒಪ್ಪಂದದ ಪ್ರಕಾರ ಪ್ರತಿ ವಾರ ₹13 ಕೋಟಿಯಂತೆ ಸುಮಾರು ವಾರ್ಷಿಕ ₹680 ಕೋಟಿಯ ರೈತ ಉತ್ಪನ್ನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ದರ ಅನುಸಾರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹಾಗೆಯೇ ಇನ್ನೂ ಒಪ್ಪಂದ ನಡೆಯುತ್ತಲೇ ಇರುವುದರಿಂದ ವಾರ್ಷಿಕ ಸಾವಿರ ಕೋಟಿ ರುಪಾಯಿಗೂ ಅಧಿಕವಾಗಲಿದೆ ಎನ್ನುತ್ತಾರೆ ಕೊಪ್ಪಳ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು.

ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ರಾಜ್ಯಾದ್ಯಂತ ವಿಭಾಗವಾರು ರಫ್ತುದಾರರು ಮತ್ತು ಮಾರಾಟಗಾರರ ಮೇಳ ಹಮ್ಮಿಕೊಳ್ಳಲಿದ್ದು, ಕೊಪ್ಪಳದಲ್ಲಿ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಬಂದಿದೆ ಎನ್ನಲಾಗಿದೆ.

ಎಲ್ಲಿಂದ ಬಂದಿದ್ದವು?:

ದೆಹಲಿ, ರಾಜಸ್ಥಾನ, ಮುಂಬೈ, ಪುಣೆ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಹಾಗೂ ಶ್ರೀಲಂಕಾ, ಬಾಂಗ್ಲಾದೇಶದ ಒಂದೊಂದು ಕಂಪನಿ ಸೇರಿದಂತೆ 30ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.

100ಕ್ಕೂ ಹೆಚ್ಚು ಒಪ್ಪಂದ:ಅನೇಕ ರೈತರು ಹಾಗೂ ರೈತರೇ ಇರುವ 100ಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಯಾವ ಯಾವ ಬೆಳೆ:ದ್ರಾಕ್ಷಿ, ಮಾವು, ಬಾಳೆ, ಪಪ್ಪಾಯಿ, ಸೀತಾಫಲ, ಪೇರಲ ಸೇರಿದಂತೆ ಹತ್ತು ಹಲವು ತೋಟಗಾರಿಕೆ ಉತ್ಪನ್ನಗಳು ಹಾಗೂ ಮಿಲೆಟ್ ಉತ್ಪನ್ನಗಳು

ಎಷ್ಟೆಷ್ಟು ಏರಿಯಾ?:ಕೊಪ್ಪಳ ಜಿಲ್ಲೆಯಲ್ಲಿ 18-20 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಇದ್ದು, 5 ಸಾವಿರಕ್ಕೂ ಅಧಿಕ ಹೆಕ್ಚೇರ್ ಮಿಲೆಟ್ ಉತ್ಪದನಾ ಕ್ಷೇತ್ರವಿದೆ. ಅದರಲ್ಲಿ ದಾಳಿಂಬೆ 5 ಸಾವಿರ ಹೆಕ್ಟೇರ್, ಮಾವು 5 ಸಾವಿರ ಹೆಕ್ಚೇರ್, ಬಾಳೆ 1300 ಹೆಕ್ಟೇರ್, ಪಪ್ಪಾಯಿ 1400 ಹೆಕ್ಟೇರ್ , ಪೇರಲ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಕೊಪ್ಪಳದಲ್ಲಿ ಪ್ರಥಮ ಬಾರಿ ರಫ್ತುದಾರರು, ಖರೀದಿದಾರರು ಹಾಗೂ ಮಾರಾಟಗಾರರ ಮೇಳವನ್ನು ರೈತರಿಗಾಗಿಯೇ ಏರ್ಪಡಿಸಿದ್ದು, ನಿರೀಕ್ಷೆ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಮಾರು ₹680 ಕೋಟಿಗೂ ಅಧಿಕ ಮೊತ್ತದ ಒಪ್ಪಂದವಾಗಿವೆ ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಡಿಡಿ ಕೃಷ್ಣ ಉಕ್ಕುಂದ ಹೇಳಿದರು.

ಇಷ್ಟೊಂದು ತೋಟಗಾರಿಕೆ ಬೆಳೆ ಬೆಳೆಯುವ ರೈತರು ಇಲ್ಲಿದ್ದಾರೆ ಅಂದುಕೊಂಡಿರಲಿಲ್ಲ. ನಮಗೆ ನಿರೀಕ್ಷೆ ಮೀರಿ ಸ್ಪಂದನೆ ವ್ಯಕ್ತವಾಗಿದೆ. ನಾವು ಸುಮಾರು 11 ರೈತ ಉತ್ಪಾದಕ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ, ಖರೀದಿಯನ್ನು ಪ್ರಾರಂಭಿಸಿದ್ದೇವೆ ಎಂದು ಗುಜರಾತ್ ಕಿಸಾನ್ ಮಿತ್ರ ಕಂಪನಿಯ ಪ್ರೇಮ ರಾಥೋಡ ಹೇಳಿದರು.

ನಮಗಂತೂ ತುಂಬಾ ಖುಷಿಯಾಗಿದೆ. ನಾವು ಬೆಳೆದ ಬೆಳೆಯನ್ನು ಖರೀದಿ ಮಾಡುವ ಕುರಿತು ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದು ನಾವು ತಿಳಿದಿರಲಿಲ್ಲ ಎಂದು ಮಾವು ಬೆಳೆಗಾರ ಶಿವರಾಮ ಗಬ್ಬೂರು ಸಂತಸ ವ್ಯಕ್ತಪಡಿಸಿದರು.

Share this article