ಹರಪನಹಳ್ಳಿ: ಕಳೆದ ನಾಲ್ಕು-ಐದು ತಿಂಗಳಲ್ಲಿ ಹರಪನಹಳ್ಳಿ ತಾಲೂಕಿನಲ್ಲಿ ಏಳು ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಇನ್ನು ಅನೇಕ ಜನರು ಜ್ವರದಿಂದ ಬಳಲುತ್ತಿರುವುದು ಆತಂಕ ಉಂಟು ಮಾಡಿದೆ.
ಜೂನ್ ತಿಂಗಳಲ್ಲಿ ಪಟ್ಟಣದ ಬಾಣಗೇರಿ, ನೀಲಗುಂದದಲ್ಲಿ ತಲಾ ಒಂದೊಂದು ಡೆಂಘೀ ಪ್ರಕರಣ ಪತ್ತೆಯಾಗಿವೆ.ವಾರದ ಹಿಂದೆ ಜಿಲ್ಲಾಸ್ಪತ್ರೆಯಿಂದ ಡಾ.ಕಮಲಾ ಎಂಬುವವರು ಆಗಮಿಸಿ ಪಿಡಿಒಗಳಿಗೆ ಹಾಗೂ ಇಲ್ಲಿಯ ಆಶಾ ಕಾರ್ಯಕರ್ತರಿಗೆ ನಿಯಂತ್ರಣದ ಬಗ್ಗೆ ತರಬೇತಿ ನೀಡಿದ್ದಾರೆ.
ಪ್ರತಿ ಶುಕ್ರವಾರ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಸರ್ವೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಸರ್ವೆ ಕಾರ್ಯ ಮಾಡುತ್ತಿದ್ದು, 15 ದಿನದಲ್ಲಿ ಪೂರ್ಣಗೊಳಿಸಲು ತಾಲೂಕು ಆರೋಗ್ಯ ಇಲಾಖೆ ಸೂಚಿಸಿದೆ.ಗ್ರಾಮೀಣ ಭಾಗದಲ್ಲಿ ತಾಪಂ ಇಒ ಚಂದ್ರಶೇಖರ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಗ್ರಾಪಂ ಸಿಬ್ಬಂದಿಗೆ ಸೂಚಿಸಲಾಗಿದೆ. ಫಾಗಿಂಗ್, ಚರಂಡಿ ಸ್ವಚ್ಛತೆ, ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಜ್ವರದಿಂದ ಬಳಲುತ್ತಿದ್ದಾರೆ. ಹರಪನಹಳ್ಳಿ, ದಾವಣಗೆರೆ ಮುಂತಾದ ಕಡೆ ಆಸ್ಪತ್ರೆಗೆ ಚಿಕಿತ್ಸೆಗೆ ಜನರು ಲಗ್ಗೆ ಇಟ್ಟಿದ್ದಾರೆ.
ಡೆಂಘೀ ಆತಂಕದಿಂದ ಜನರು ಜೀವನ ಸಾಗಿಸುತ್ತಿದ್ದಾರೆ. ಆರೋಗ್ಯ ಇಲಾಖೆ, ತಾಲೂಕು ಆಡಳಿತ ಈ ಕುರಿತು ಇನ್ನು ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸಿ ಸರ್ವೆ, ರಕ್ತ ಪರೀಕ್ಷೆ ಮಾಡುವುದು ಹಾಗೂ ಜನರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಹಗಲು ಹೊತ್ತು ಕಚ್ಚುವ ಸೊಳ್ಳೆಗಳಿಂದ ಡೆಂಘೀ ಬರುತ್ತದೆ. ಈ ಸೊಳ್ಳೆ ಒಳ್ಳೆಯ ನೀರಿನಲ್ಲಿ ಬೆಳೆಯುತ್ತದೆ. ಜನರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಯಾವುದೇ ಜ್ವರದ ಲಕ್ಷಣ ಕಂಡು ಬಂದರೆ ನಿರ್ಲಕ್ಷಿಸದೇ ವೈದ್ಯರನ್ನು ಭೇಟಿ ಮಾಡಬೇಕು ಎನ್ನುತ್ತಾರೆ ಆರೋಗ್ಯಾಧಿಕಾರಿ ಹರಪನಹಳ್ಳಿ ಹಾಲಸ್ವಾಮಿ.
ಹರಪನಹಳ್ಳಿ ಪಟ್ಟಣದಲ್ಲಿ ಪುರಸಭಾ ವಾಹನದಲ್ಲಿ ಈ ಕುರಿತು ಅನೌನ್ಸ್‌ಮೆಂಟ್ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಪ್ರತಿ ವಾರ್ಡಿನಲ್ಲೂ ಫಾಗಿಂಗ್ ಮಾಡಿಸುತ್ತಿದ್ದೇವೆ. ಚರಂಡಿ ಸ್ವಚ್ಛತೆ ಕೈಗೊಂಡಿದ್ದೇವೆ ಎನ್ನುತ್ತಾರೆ ಹರಪನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ.ಹರಪನಹಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಗ್ರಾಪಂನಿಂದ ಫಾಗಿಂಗ್, ಚರಂಡಿ ಸ್ವಚ್ಛತೆ, ಪಿಡಿಒಗಳಿಗೆ ತರಬೇತಿ, ಜನರಿಗೆ ಜಾಗೃತಿ ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎನ್ನುತ್ತಾರೆ ಹರಪನಹಳ್ಳಿ ತಾಪಂ ಇಒ ಚಂದ್ರಶೇಖರ.