ಕನ್ನಡಪ್ರಭ ವಾರ್ತೆ ಪಾವಗಡ
10 ತಿಂಗಳಲ್ಲಿ ವಿವಿಧ ಇಲಾಖೆಗಳ ಅಡಿಯಲ್ಲಿ ತಾಲೂಕಿಗೆ 75 ಕೋಟಿ ಅನುದಾನ ಗ್ಯಾರಂಟಿ ಯೋಜನೆಗಳ ಮೂಲಕ ತಂದಿದ್ದು, ಏಪ್ರಿಲ್ ನಂತರ ನೂರು ಕೋಟಿಗೂ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ಶಾಸಕ ಎಚ್.ವಿ.ವೆಂಕಟೇಶ್ ತಿಳಿಸಿದರು. ಮಂಗಳವಾರ ಪಾವಗಡ ತಾಲೂಕಿನ ಕೆ.ರಾಮಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ, ನೂತನ ಶಾಲಾ ಕೊಠಡಿ, ಅಡುಗೆ ಕೋಣೆ, ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಸಹಕಾರದಿಂದ ರೈತರಿಗೆ ಮೇವು ಮತ್ತು ಹನುಮನ ಬೆಟ್ಟ ನವಿಲುಧಾಮಕ್ಕೆ ಮೇವು, ನೀರು ಪೂರೈಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸದಾ ಒಂದಲ್ಲ ಒಂದು ಕಲಿಕಾ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾದ ಕೆ.ರಾಮಪುರ ಗ್ರಾಮ ನಮ್ಮ ತಂದೆಯವರಿಗೂ ತುಂಬಾ ಇಷ್ಟವಾದ ಗ್ರಾಮ. ಅವರೇ ಅನುದಾನ ನೀಡಿದ ಶಾಲಾ ಕೊಠಡಿ ನಾನು ಲೋಕಾರ್ಪಣೆ ಮಾಡಿದ್ದು ಅತೀವ ಸಂತಸ ತಂದಿದೆ ಎಂದರು.ಶಿಕ್ಷಣ ಇಲಾಖೆಗೆ ಹೆಚ್ಚು ಆದ್ಯತೆ ನೀಡಲು ಬಯಸಿದ್ದೇನೆ, ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮರಣ ಹೊಂದಿದ ಮೂವರು ಮಹಿಳೆಯರ ಪೈಕಿ ಒಬ್ಬರಿಗೆ ಪರಿಹಾರ ಬಿಡುಗಡೆಯಾಗಿದ್ದು, ಎರಡು ದಿನದಲ್ಲಿ ಇನ್ನಿಬ್ಬರಿಗೆ ಪರಿಹಾರ ವಿತರಿಸಲಾಗುತ್ತದೆ. ಇದೇ ಶಾಲೆಗೆ ಇನ್ನೊಂದು ಶಾಲಾ ಕೊಠಡಿ ಮೂಂಜೂರು ಮಾಡುತ್ತೇನೆ. ಬಹುದಿನಗಳ ಬೇಡಿಕೆಯಾಗಿದ್ದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಸಚಿವರಿಂದಲೇ ಭೂಮಿಪೂಜೆ ನೆರವೇರಲಿದೆ. ಬರದ ಹಿನ್ನೆಲೆಯಲ್ಲಿ ಪಟ್ಟಣದ ಬೀದಿಬದಿಯ ವ್ಯಾಪಾರಿಗಳ ಸುಂಕ ವಸೂಲಾತಿ ರದ್ದು ಮಾಡಲಾಗಿದೆ. ಈ ಭಾಗದ ಬಹುದಿನ ಬೇಡಿಕೆಯಾದ ತುಮಕೂರು ರಾಯದುರ್ಗ ರೈಲ್ವೆ ಯೋಜನೆ ಗಡಿಯ ಕೆ.ರಾಮಪುರಕ್ಕೆ ಪೂರ್ಣವಾಗಿದ್ದು, ಇನ್ಮುಂದೆ ಇಲ್ಲಿಂದ ತಿರುಪತಿ ಪ್ರಯಾಣಕ್ಕೆ ರೈಲು ಸಂಚರಿಸಲಿದೆ ಎಂದರು.
ಜಪಾನಂದ ಶ್ರೀಗಳು ಮಾತನಾಡಿ, ಕಳೆದ 5 ವರ್ಷಗಳಿಂದ ಈ ಗ್ರಾಮದ ಸರ್ಕಾರಿ ಶಾಲೆಗೆ ಲೇಖನ ಸಾಮಗ್ರಿ, ಸಮವಸ್ತ್ರ, ನವಿಲುಧಾಮಕ್ಕೆ ನೀರು ಮೇವು, ನೀಡಲಾಗುತ್ತಿದೆ. ಈ ಗ್ರಾಮ ಸಾಕ್ಷರತಾ ಕಾರ್ಯಕ್ರಮದಿಂದ ದೇಶದಲ್ಲೇ ಹೆಸರುವಾಸಿ ಗ್ರಾಮವಾಗಿದ್ದು, ದಾನಿಗಳು ಭೂಮಿ ನೀಡಿದರೆ ಉತ್ತಮ ಶಾಲೆಯನ್ನ ಭವಿಷ್ಯದ ದೇಶದ ಪ್ರಜೆಗಳಿಗೆ ಅನುಕೂಲವಾಗಲಿದೆ ಎಂದರು.ನಿಡಗಲ್ ಸಂಸ್ಥಾನದ ಪೀಠಾಧ್ಯಕ್ಷ ಸಂಜಯ್‌ಕುಮಾರ್ ಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಇಒ ಇಂದ್ರಾಣಮ್ಮ, ತಾಪಂ ಎಡಿ ರಂಗನಾಥ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಪುರಂ ನಾಗೇಶ್, ಇಂಜಿನಿಯರ್ ಬಸವಲಿಂಗಪ್ಪ, ಪುರಸಭೆ ಸದಸ್ಯರಾದ ಮೊಹಮ್ಮದ್ ಇಮ್ರಾನ್, ಪ್ರಾಂಶುಪಾಲರಾದ ಕಸ್ತೂರಿಕುಮಾರ್, ಮಾಜಿ ತಾಪಂ ಸದಸ್ಯರುಗಳಾದ ಮಾರಪ್ಪ, ದಿವಾಕರಪ್ಪ, ಗೋವಿಂದಪ್ಪ, ರಮೇಶ್.ಪಿ, ಆರ್.ಟಿ.ರಾಮಾಂಜಿ, ನರಸಿಂಹಮೂರ್ತಿ ಅಲ್ಕೂರಪ್ಪ, ಓ.ರಾಜು, ಎ.ಗೋಪಿ, ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ರೆಡ್ಡಿ, ಅತಿಥಿ ಶಿಕ್ಷಕರಾದ ಪ್ರತಿಭಾ, ರೂಪಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.