78 ಗ್ರಾಮಗಳು ನೀರಿನ ಸಮಸ್ಯಾತ್ಮಕ!

KannadaprabhaNewsNetwork | Published : Apr 4, 2025 12:45 AM

ಸಾರಾಂಶ

ಗ್ರಾಮಗಳಲ್ಲಿ ಸಮಸ್ಯೆ ಎದುರಾದರೆ ಖಾಸಗಿ ಕೊಳವೆ ಬಾವಿ ಮೂಲಕ ಪರಿಹಾರಈ ವರೆಗೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿಲ್ಲ

ಬಸವರಾಜ ಹಿರೇಮಠ ಧಾರವಾಡ

ಆಗಾಗ ಮುಂಗಾರು ಪೂರ್ವ ಮಳೆಯಾಗುತ್ತಿದ್ದರೂ ಜಿಲ್ಲೆಯಲ್ಲಿ ಮಧ್ಯಾಹ್ನದ ಹೊತ್ತು ಬಿಸಿಲಿನ ತಾಪ ಮಾತ್ರ ಕಡಿಮೆಯಾಗಿಲ್ಲ. ಬಿರು ಬೇಸಿಗೆಗೆ ಪದೇ ಪದೇ ಬಾಯಾರಿಕೆ. ಜೊತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿದೆ.

ಹು-ಧಾ ಅವಳಿ ನಗರದಲ್ಲಿ ಮಲಪ್ರಭಾ ಹಾಗೂ ನೀರಸಾಗರದಿಂದ ನೀರು ಪೂರೈಕೆ ಹಿನ್ನೆಲೆಯಲ್ಲಿ ಅಷ್ಟಾಗಿ ಕುಡಿಯುವ ನೀರಿನ ತೊಂದರೆ ಕಂಡು ಬರದೇ ಇದ್ದರೂ ಗ್ರಾಮೀಣ ಪ್ರದೇಶ ಅಲ್ಲಲ್ಲಿ ಕುಡಿಯುವ ನೀರಿನ ಕೊರತೆ ಪ್ರತಿ ಬಾರಿ ಕಂಡು ಬರುತ್ತದೆ. ಆದ್ದರಿಂದ ಈ ಹಿಂದಿನ ವರ್ಷಗಳ ಮಾಹಿತಿ ಹಾಗೂ ಅನುಭವದ ಆಧಾರದಲ್ಲಿ ಜಿಲ್ಲಾಡಳಿತ ಪ್ರಸಕ್ತ ಸಾಲಿಗೆ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ 78 ಗ್ರಾಮಗಳನ್ನು ಗುರುತಿಸಿದೆ. ಎಲ್ಲ ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಕುಡಿಯುವ ನೀರು, ಜಾನುವಾರು ಮೇವು ಸರಬರಾಜು ಕುರಿತ ದೂರುಗಳನ್ನು ಸ್ವೀಕರಿಸಿ, ತುರ್ತು ಕ್ರಮವಹಿಸಲು ಸಾಧ್ಯವಾಗುವಂತೆ ಸಹಾಯವಾಣಿ ಆರಂಭಿಸಲಾಗಿದೆ.

ಬೇಸಿಗೆ ಅವಧಿಯ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಧಾರವಾಡ ತಾಲೂಕಿನ 30 ಗ್ರಾಮಗಳಲ್ಲಿ, ಅಳ್ಳಾವರದ ನಾಲ್ಕು, ಹುಬ್ಬಳ್ಳಿ ತಾಲೂಕಿನ 19, ಕಲಘಟಗಿಯ 16, ಕುಂದಗೋಳದ 9 ಗ್ರಾಮಗಳು, ಹೀಗೆ ಮೂರು ತಿಂಗಳ ಅವಧಿಯಲ್ಲಿ ಯಾವ ಗ್ರಾಮಗಳಲ್ಲಿ ಯಾವ ತಿಂಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಅಂದಾಜಿಸಿ ಸಮೀಕ್ಷೆ ಮಾಡಿ ಒಟ್ಟು 78 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿ, ಕುಡಿಯುವ ನೀರು ಸರಬರಾಜುಗಾಗಿ ಖಾಸಗಿ ಕೊಳವೆಬಾವಿ ನೀರು ಸರಬರಾಜು ಸೇರಿದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ವರೆಗೂ ಟ್ಯಾಂಕರ್‌ ನೀರು ಪೂರೈಕೆ ಇಲ್ಲ

ಒಂದು ಸಮಾಧಾನದ ಸಂಗತಿ ಏನೆಂದರೆ ಈ ವರೆಗೂ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಬಹುತೇಕ ಗ್ರಾಮಗಳಲ್ಲಿ ಕೆರೆಗಳನ್ನು ತುಂಬಿಸಲಾಗಿದೆ. ಜಲಜೀವನ ಮಿಷನ್‌ ಅಡಿ ನಿರಂತರ ನೀರು ಪೂರೈಕೆಯಾಗುತ್ತಿದೆ. ಹು-ಧಾ ಅವಳಿ ನಗರದಲ್ಲೂ ಕುಡಿಯುವ ನೀರಿನ ಸಮಸ್ಯೆ ಮೊದಲಿನಂತಿಲ್ಲ. ಹೀಗಾಗಿ, ದಶಕದ ಹಿಂದೆ ಇದ್ದ ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಗೆ ಬಂದಿಲ್ಲ. ಆದರೆ, ಎರಡು ದಿನಗಳ ಹಿಂದಷ್ಟೇ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಕೊಳವೆ ಬಾವಿಯ ಸಮಸ್ಯೆಯಿಂದ ನೀರಿನ ಸಮಸ್ಯೆ ಹೊರತು ಪಡಿಸಿ ಮತ್ತಾವ ದೂರುಗಳು ಸಹಾಯವಾಣಿಗೆ ಬಂದಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಸ್ತುತ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕೆಲವು ವಾರ್ಡ್‌ಗಳಿಗೆ ಒಂದು ಖಾಸಗಿ ಕೊಳವೆಬಾವಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸಮಸ್ಯಾತ್ಮಕವೆಂದು ಗುರುತಿಸಿರುವ 78 ಗ್ರಾಮಗಳಲ್ಲಿ ಅಗತ್ಯಬಿದ್ದಾಗ ತಕ್ಷಣ ಕುಡಿಯುವ ನೀರು ಸರಬರಾಜು ಮಾಡಲು ಈಗಾಗಲೇ ಒಟ್ಟು 162 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ, ಕೊಳಬಾವಿ ಮಾಲೀಕರೊಂದಿಗೆ ಒಪ್ಪಂದ ಸಹ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಕುಡಿಯುವ ನೀರಿನ ಬಗ್ಗೆ ನಿಗಾವಹಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು.

ಜಿಲ್ಲೆಯ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಮತ್ತು ಕುಂದಗೋಳ ತಾಲೂಕಿನಲ್ಲಿ ಮಲಪ್ರಭಾ ಕಾಲುವೆಯ ಮುಖಾಂತರ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲಾಗಿದೆ. ನವಲಗುಂದ ತಾಲೂಕಿನ 37 ಕೆರೆಗಳು, ಅಣ್ಣಿಗೇರಿ ತಾಲೂಕಿನ 13 ಕೆರೆಗಳು, ಹುಬ್ಬಳ್ಳಿ ತಾಲೂಕಿನ ಏಳು ಕೆರೆಗಳು ಮತ್ತು ಕುಂದಗೋಳ ತಾಲೂಕಿನ 3 ಕೆರೆಗಳು ಸೇರಿ ಒಟ್ಟು 60 ಕುಡಿಯುವ ನೀರಿನ ಕೆರೆಗಳನ್ನು ಕಾಲುವೆ ನೀರಿನಿಂದ ತುಂಬಿಸಲಾಗಿದೆ. ಇವುಗಳಲ್ಲಿ ಏಪ್ರಿಲ್ ತಿಂಗಳಲ್ಲಿ 10 ಮತ್ತು ಮೇ ತಿಂಗಳಲ್ಲಿ 50 ಕೆರೆಗಳು ಬಳಕೆ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಸಹಾಯವಾಣಿ: ಕುಡಿಯುವ ನೀರಿನ ಸಮಸ್ಯೆಯ ಕುರಿತು ಸಾರ್ವಜನಿಕರಿಗೆ ಸಂಪರ್ಕಿಸಲು ಜಿಪಂ ಸಹಾಯವಾಣಿ 0836-2742221, ಮಹಾನಗರಪಾಲಿಕೆ -7996666247 ಹಾಗೂ ಜಿಲ್ಲಾಧಿಕಾರಿಗಳ ಕಚೇರಿ - 0836-2445508/1077 ಕೇಂದ್ರವನ್ನು ಸ್ಥಾಪಿಸಿ ದೂರಗಳನ್ನು ಸ್ವೀಕರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೂ ಹೇಳಿಕೊಳ್ಳುವ ಕುಡಿಯುವ ನೀರಿನ ಸಮಸ್ಯೆ ಬಂದಿಲ್ಲ. ಅಷ್ಟಾಗಿಯೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದ ಸಹಾಯವಾಣಿಗೆ 14 ಕರೆಗಳು ಹಾಗೂ ಜಿಪಂನಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಐದು ಕರೆಗಳು ಬಂದಿವೆ. ಅವುಗಳಿಗೆ ಪರಿಹಾರ ಸಹ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

Share this article