- ನಬಾರ್ಡ್ ಪಿಎಲ್‌ಪಿ ಕೈಪಿಡಿ ಲೋಕಾರ್ಪಣೆ । ಬ್ಯಾಂಕ್ ಅಧಿಕಾರಿಗಳ ತ್ರೈಮಾಸಿಕ ಸಮಾಲೋಚನಾ ಸಭೆ
ನಬಾರ್ಡ್ ಸ್ಥಳೀಯ ಕಚೇರಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ಸಿದ್ಧಪಡಿಸಿರುವ 7863.58 ಕೋಟಿ ರು.ಗಳ ಪಿಎಲ್‌ಪಿ ಕೈಪಿಡಿಯನ್ನು ಜಿಪಂ ಮುಖ್ಯ ಯೋಜನಾಧಿಕಾರಿ ಕರಿಗೌಡ ಲೋಕಾರ್ಪಣೆಗೊಳಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯ ಬ್ಯಾಂಕರ್‌ಗಳು ಹಾಗೂ ಅಭಿವೃದ್ಧಿ ಇಲಾಖೆ-ಸಂಸ್ಥೆ ಪ್ರತಿನಿಧಿಗಳ 3ನೆಯ ತ್ರೈಮಾಸಿಕ ಸಮಾಲೋಚನಾ ಸಭೆಯಲ್ಲಿ ಕೈಪಿಡಿ ಬಿಡುಗಡೆ ಮಾಡಿ ಜಿಲ್ಲೆಯ ಹಣಕಾಸು ಸಂಸ್ಥೆಗಳಿಗೆ ಇದೊಂದು ಅತ್ಯುತ್ತಮ ಮಾರ್ಗದರ್ಶಿ ಎಂದರು.ಆರ್ಥಿಕಾಭಿವೃದ್ಧಿಗೆ ಬ್ಯಾಂಕರ್‌ಗಳ ಕೊಡುಗೆ ಗಣನೀಯವಾಗಿದೆ. ಸರ್ಕಾರದ ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕ್‌ಗಳ ಪಾತ್ರ ಪ್ರಮುಖವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಸಹಿತ ಸಾಲ ನೀಡುವ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳು ಸಕಾರಾತ್ಮಕವಾಗಿ ವರ್ತಿಸಬೇಕು. ಸಂಬಂಧಪಟ್ಟ ಇಲಾಖೆಗಳ ಮೂಲಕ ಬಂದ ಅರ್ಜಿಯನ್ನು ವಿಳಂಬ ಮಾಡದೇ ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಸಹಕಾರ ನೀಡುವುದರೊಂದಿಗೆ ಜಿಲ್ಲೆಯ ಆರ್ಥಿಕ ಏಳಿಗೆಗೆ ನೆರವಾಗಬೇಕೆಂದು ಕರಿಗೌಡ ಮನವಿ ಮಾಡಿದರು.
ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಈ. ಪ್ರತಾಪ್ ಮಾತನಾಡಿ, ಮುಂದಿನ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ ನಡೆಸಬಹುದಾದ ಆರ್ಥಿಕ ಚಟುವಟಿಕೆಗಳನ್ನು ಗಮನಿಸಿ ಕೈಪಿಡಿಯನ್ನು ಪ್ರತಿವರ್ಷವೂ ನಬಾರ್ಡ್ ನಿಂದ ಸಿದ್ಧಪಡಿಸುವ ಪರಿಪಾಠವಿದೆ. ಇದನ್ನು ಆಧರಿಸಿ ವಿವಿಧ ಕ್ಷೇತ್ರಗಳ ಆದ್ಯತಾ ವಲಯ ಗಳನ್ನು ಗುರುತಿಸಬಹುದಾಗಿದೆ ಎಂದರು.
ಶಿಕ್ಷಣ ವಲಯದಲ್ಲಿ ಶೇ. 2.17, ಎಂಎಸ್‌ಎಂಇನಲ್ಲಿ ಶೇ.5, ಗೃಹ ನಿರ್ಮಾಣಕ್ಕಾಗಿ ಶೇ. 2.54, ನಿರಂತರ ಶಕ್ತಿ ಉತ್ಪಾದನೆಗೆ ಶೇ. 0.4, ಸಾಮಾಜಿಕ ಮೂಲಭೂತ ಸೌಕರ್‍ಯಕ್ಕಾಗಿ 53 ಕೋಟಿ ರು. ವಿನಿಯೋಗಿ ಸುವ ಅವಕಾಶವಿದೆ ಎಂದು ಕೈಪಿಡಿಯ ಪ್ರಮುಖಾಂಶಗಳನ್ನು ವಿವರಿಸಿದ ಪ್ರತಾಪ್, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಸಮರ್ಪಣಾ ಭಾವದಿಂದ ಕಾರ್‍ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಚಿಕ್ಕಮಗಳೂರಿನ ಲೀಡ್ ಬ್ಯಾಂಕ್‌ನಲ್ಲಿ ನಡೆದ ಅಧಿಕಾರಿಗಳ ತ್ರೈಮಾಸಿಕ ಸಮಾಲೋಚನಾ ಸಭೆಯಲ್ಲಿ ಕರಿಗೌಡ ನಬಾರ್ಡ್ ಪಿಎಲ್‌ಪಿ ಕೈಪಿಡಿ ಬಿಡುಗಡೆಗೊಳಿಸಿದರು.