7ನೇ ವೇತನ ಜಾರಿ, ಹಳೆ ಪಿಂಚಣಿ ವ್ಯವಸ್ಥೆ ತನ್ನಿ: ಸಿ.ಎಸ್‌.ಷಡಕ್ಷರಿ

KannadaprabhaNewsNetwork |  
Published : Jan 12, 2024, 01:46 AM IST
11ಕೆಡಿವಿಜಿ8, 9-ದಾವಣಗೆರೆಯಲ್ಲಿ ಗುರುವಾರ ಸಚಿವರು, ಶಾಸಕರಿಗೆ ಮನವಿ ಅರ್ಪಿಸಲು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಸಂಘದ ಪದಾಧಿಕಾರಿಗಳು, ಸದಸ್ಯರ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಜುಲೈ 2022ರಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಆಗಬೇಕಿತ್ತು. ಶೇ.40 ಮೂಲ ವೇತನ ಹೆಚ್ಚಿಸಬೇಕೆಂಬ ಬೇಡಿಕೆಗೆ ಸರ್ಕಾರ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ಮಾತ್ರ ಹೆಚ್ಚಿಸಿದ್ದು, ಉಳಿದ ಶೇ.23ರಷ್ಟು ಹೆಚ್ಚಿಸಬೇಕು. 2006 ಏ.1ರ ನಂತರ ಸರ್ಕಾರಿ ಸೇವೆಗೆ ಸೇರ್ಪಡೆಯಾದವರ ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕೆಂಬುದು ನಮ್ಮ ಬೇಡಿಕೆ.

ಉಸ್ತುವಾರಿ ಸಚಿವ, ಶಾಸಕರು, ವಿಧಾನಪರಿಷತ್‌ ಸದಸ್ಯರ ಮೂಲಕ ಸಿಎಂಗೆ ಮನವಿ, ಸ್ಪಂದಿಸದಿದ್ದರೆ ಹೋರಾಟ

ಕನ್ನಡಪ್ರಭ ವಾರ್ತೆ ದಾವಣಗೆರೆ

ಏಳನೇ ವೇತನ ಜಾರಿ, ಹಳೆ ಪಿಂಚಣಿ ಯೋಜನೆ ಮರು ಜಾರಿ, ಆರೋಗ್ಯ ಸಂಜೀವಿನಿ ಸೇರಿ ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಸಲು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರಿಗೆ ಮನವಿ ಸಲ್ಲಿಸಲಿದ್ದು, ಮುಖ್ಯಮಂತ್ರಿಯವರು ಸ್ಪಂದಿಸದಿದ್ದರೆ ಹೋರಾಟ ಸೇರಿ ಮುಂದಿನ ಹಂತದ ಕ್ರಮಗಳತ್ತ ಸಂಘ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜುಲೈ 2022ರಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಆಗಬೇಕಿತ್ತು. ಶೇ.40 ಮೂಲ ವೇತನ ಹೆಚ್ಚಿಸಬೇಕೆಂಬ ಬೇಡಿಕೆಗೆ ಸರ್ಕಾರ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ಮಾತ್ರ ಹೆಚ್ಚಿಸಿದ್ದು, ಉಳಿದ ಶೇ.23ರಷ್ಟು ಹೆಚ್ಚಿಸಬೇಕು. 2006 ಏ.1ರ ನಂತರ ಸರ್ಕಾರಿ ಸೇವೆಗೆ ಸೇರ್ಪಡೆಯಾದವರ ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕೆಂಬುದು ನಮ್ಮ ಬೇಡಿಕೆ. ಈಗಾಗಲೇ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, 11,366 ನೌಕರರ ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸುವ ಕೆಲಸ ಸಾಗಿದೆ. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲೇ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ ಬಗ್ಗೆ ಭರವಸೆ ನೀಡಿತ್ತು ಎಂದು ತಿಳಿಸಿದರು.

ಸರ್ಕಾರ ಎಲ್ಲಾ ಭಾಗ್ಯಗಳ ನೀಡಿದಂತೆ ಸರ್ಕಾರಿ ನೌಕರರಿಗೂ 7ನೇ ವೇತನ ಹಾಗೂ ಹಳೆ ಪಿಂಚಣಿ ವ್ಯವಸ್ಥೆ ಭಾಗ್ಯ ನೀಡಬೇಕು. ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದಾಗಲೇ ಸರ್ಕಾರಿ ನೌಕರರು ವೇತನ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆಂಬ ಆಕ್ಷೇಪಣೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ವಾಸ್ತವವಾಗಿ ಜುಲೈ 2022ರಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳ್ಳಬೇಕಿತ್ತು ಎಂದರು.

ರಾಜ್ಯದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಪಿಯು ಉಪನ್ಯಾಸಕರಾಗಿ ಮುಂಬಡ್ತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಪಿಯು ಶಿಕ್ಷಣ ಮಂಡಳಿ ಅಧಿಕಾರಿಗಳೊಂದಿಗೆ ಇದೇ ವಿಚಾರದ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಷಡಕ್ಷರಿ ಹೇಳಿದರು.

ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಎಂ.ವಿ.ರುದ್ರಪ್ಪ, ಬಸವರಾಜ, ಖಜಾಂಚಿ ಸಿದ್ದರಾಮಪ್ಪ, ಜಿಲ್ಲಾಧ್ಯಕ್ಷ ವೀರೇಶ ಒಡೇನಪುರ, ನಿಕಟ ಪೂರ್ವ ಅಧ್ಯಕ್ಷ ಬಿ.ಪಾಲಾಕ್ಷಿ, ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ, ಖಜಾಂಚಿ ಬಿ.ಆರ್‌. ತಿಪ್ಪೇಸ್ವಾಮಿ, ರಾಜ್ಯ ಪರಿಷತ್‌ನ ಸದಸ್ಯೆ ಮಂಜಮ್ಮ, ಎನ್‌ಪಿಎಸ್‌ ನೌಕರರ ಸಂಘದ ಮೋಹನ್ ಇತರರಿದ್ದರು. ..................................................

ಬಾಕ್ಸ್..ಭ್ರಷ್ಟಾಚಾರ, ವರ್ಗಾವಣೆ ದಂಧೆಯ ಅವಶ್ಯಕತೆ ನನಗಿಲ್ಲ: ಸಿ.ಎಸ್‌.ಷಡಕ್ಷರಿ

ಭ್ರಷ್ಟಾಚಾರ, ವರ್ಗಾವಣೆ ದಂಧೆಯನ್ನಾಗಲೀ ನಡೆಸುವ ಅವಶ್ಯಕತೆ, ಅನಿವಾರ್ಯತೆ ನನಗಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಹೇಳಿದ್ದಾರೆ. ಸಂಘದ ರಾಜ್ಯಾಧ್ಯಕ್ಷನಾಗಿ ಅಧಿಕಾರಿ, ನೌಕರರ ವರ್ಗಾವಣೆಗೆ ಸಂಬಂಧಿಸಿ ಒಂದೇ ಒಂದು ಶಿಫಾರಸ್ಸು ಪತ್ರ ನೀಡಿದ್ದು ತೋರಿಸಲಿ ನೋಡೋಣ. ಲಕ್ಷಾಂತರ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ನಾನು ಭ್ರಷ್ಟಾಚಾರ, ವರ್ಗಾವಣೆ ದಂಧೆ ಮಾಡಿದರೆ ನನ್ನನ್ನು ಕೇಳುವವರಿದ್ದಾರೆ. ಭ್ರಷ್ಟಾಚಾರ ಮಾಡಿದ್ದರೆ ಸಂಘದಲ್ಲಿ 22 ಕೋಟಿ ರು. ಹಣ ಉಳಿಸಲು ಆಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ಮೇಲಿನ ಭ್ರಷ್ಟಾಚಾರದ ಆರೋಪ ಗಾಳಿಯಲ್ಲಿ ಗುಂಡು ಹೊಡೆದಂತೆ ಅಷ್ಟೇ. ಚುನಾವಣಾ ವರ್ಷವೆಂಬ ಕಾರಣಕ್ಕೆ ಆರೋಪ ಮಾಡುತ್ತಿರುತ್ತಾರೆ. ಅಂತಹವರು ನನ್ನ ಮೇಲೆ ದಾಖಲೆ ಸಹಿತ ಭ್ರಷ್ಟಾಚಾರದ ಆರೋಪ ಸಾಬೀತುಪಡಿಸಲಿ. ಒಂದು ಕ್ಷಣವೂ ಈ ಹುದ್ದೆಯಲ್ಲಿ ನಾನು ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನನ್ನನ್ನು ವರ್ಗಾವಣೆ ಮಾಡಿರುವುದೂ 2013ರ ವರ್ಗಾವಣೆ ಕಾಯ್ದೆಗೆ ವಿರುದ್ಧ. ಮೊದಲ ಬಾರಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಆದವರನ್ನು ವರ್ಗಾವಣೆ ಮಾಡುವಂತಿಲ್ಲ. ಎರಡನೇ ಬಾರಿಗೆ ಪದಾಧಿಕಾರಿಯಾದರೆ ವರ್ಗಾವಣೆ ಮಾಡಬಹುದು. ಆದರೆ, ನಾನು ಮೊದಲ ಸಲ ಸಂಘದ ರಾಜ್ಯಾಧ್ಯಕ್ಷನಾಗಿದ್ದರೂ ಸಹ ವರ್ಗಾವಣೆ ಮಾಡಿರುವುದು ತಪ್ಪು ಎಂಬುದಾಗಿ ನ್ಯಾಯಾಲಯವೇ ಹೇಳಿದೆ ಎಂದು ತಿಳಿಸಿದರು.

............................................

ಕೋಟ್‌..ದೇಣಿಗೆ ನೀಡಲು ಸಿದ್ಧ

ಒಂದು ವೇಳೆ ಸರ್ಕಾರ ನಿರೀಕ್ಷಿಸಿದರೆ ಸಂಘದಿಂದ ಬರ ಪರಿಹಾರ ನಿಧಿಗೆ ದೇಣಿಗೆ ನೀಡಲಾಗುವುದು. ಈ ಹಿಂದೆ ಅತಿವೃಷ್ಟಿ, ಅನಾವೃಷ್ಟಿ, ಕೊರೋನಾ, ಪ್ರವಾಹ, ಪುಣ್ಯಕೋಟಿ ಯೋಜನೆಗೆ ಸಂಘದಿಂದ ದೇಣಿಗೆ ನೀಡಲಾಗಿದೆ. ನಾನೂ ಅಧ್ಯಕ್ಷನಾದ ನಂತರ 1 ಸಾವಿರ ಕೋಟಿ ರು.ಗಳಷ್ಟು ದೇಣಿಗೆಯನ್ನು ಸಂಘದಿಂದ ನೀಡಲಾಗಿದೆ.

ಸಿ.ಎಸ್‌.ಷಡಕ್ಷರಿ,ರಾಜ್ಯಾಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

.....................11ಕೆಡಿವಿಜಿ8, 9-

ದಾವಣಗೆರೆಯಲ್ಲಿ ಗುರುವಾರ ಸಚಿವರು, ಶಾಸಕರಿಗೆ ಮನವಿ ಅರ್ಪಿಸಲು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಸಂಘದ ಪದಾಧಿಕಾರಿಗಳು, ಸದಸ್ಯರ ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ