ಇಂದಿನಿಂದ 7ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Mar 10, 2024, 01:31 AM IST
ಡಿ9-ಬಿಡಿವಿಟಿ1ಭದ್ರಾವತಿಯ ಪತ್ರಿಕಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಹಾಗೂ ಕದಳಿ ವೇದಿಕೆ ಆಶ್ರಯದಲ್ಲಿ ಮಾ.10, 11ರಂದು ಶ್ರೀ ಬಸವೇಶ್ವರ ಸಭಾ ಭವನದಲ್ಲಿ 7ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಭದ್ರಾವತಿ ತಾಲೂಕು ಅಧ್ಯಕ್ಷ ಎನ್.ಎಸ್. ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಭದ್ರಾವತಿ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಹಾಗೂ ಕದಳಿ ವೇದಿಕೆ ಆಶ್ರಯದಲ್ಲಿ ಮಾ.10, 11ರಂದು ಶ್ರೀ ಬಸವೇಶ್ವರ ಸಭಾ ಭವನದಲ್ಲಿ 7ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾ.10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಳಗ್ಗೆ 8.30ಕ್ಕೆ ತಹಸೀಲ್ದಾರ್ ಕೆ.ಆರ್ ನಾಗರಾಜು ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಹಿರಿಯ ಪತ್ರಕರ್ತ ಎನ್.ಬಾಬು ನಾಡಧ್ವಜಾರೋಹಣ ನೆರವೇರಿಸುವರು. ಪರಿಷತ್ತಿನ ಧ್ವಜಾರೋಹಣವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎನ್.ಎಸ್.ಮಲ್ಲಿಕಾರ್ಜುನಯ್ಯ ನೆರವೇರಿಸುವರು.

9.30ಕ್ಕೆ ಪರಿಷತ್ತಿನ ಯುವ ವೇದಿಕೆ ಸಹಯೋಗದಲ್ಲಿ "ಸಂಘಟನೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ " ವಿಷಯ ಕುರಿತು ಸಂವಾದ ನಡೆಯಲಿದೆ. ಸಂಜೆ 3.30ಕ್ಕೆ "ಪರಿಷತ್ತಿನ ಸಂಘಟನೆ ಹಾಗೂ ಶರಣ ಸಾಹಿತ್ಯ ಸಂಸ್ಕೃತಿಯ ಪ್ರಚಾರ " ಕುರಿತು ಸಂವಾದ ನಡೆಯಲಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಷ್ಟ್ರೀಯ ಅಧ್ಯಕ್ಷ ಡಾ.ಸಿ ಸೋಮಶೇಖರ್ ಮಾರ್ಗದರ್ಶನ ನೀಡಲಿದ್ದಾರೆ. ಜಿಲ್ಲಾಧ್ಯಕ್ಷ ಎಚ್.ಎನ್. ಮಹಾರುದ್ರ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಿ ಪಾಟೀಲ್ ಸೇರಿದಂತೆ ವಿವಿಧ ತಾಲೂಕು ಅಧ್ಯಕ್ಷರು ಉಪಸ್ಥಿತರಿರಲಿದ್ದಾರೆ.

ಸಂಜೆ 5.30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಷ್ಟ್ರೀಯ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಬಿ.ಕೆ. ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾ.11ರಂದು ಬೆಳಗ್ಗೆ 7 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ, 8.30ಕ್ಕೆ ಧ್ವಜಾರೋಹಣ, ಸಂಜೆ 4 ಗಂಟೆಗೆ ಸಂವಾದ, ಸಂಜೆ 5.30ರಿಂದ "ಆರ್ಥಿಕ ಅಭಿವೃದ್ಧಿ- ವಚನಕಾರರ ಮಾರ್ಗ " ಕುರಿತು ಅನುಭವ ಮಂಟಪ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಿಕಾರಿಪುರ ವಿರಕ್ತ ಮಠದ ಮ.ನಿ.ಪ್ರ. ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಎನ್.ಎಸ್. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಶುಭ ಮರವಂತೆ ಸಮಾರೋಪ ನುಡಿ ನುಡಿಯಲಿದ್ದಾರೆ. ಸಮ್ಮೇಳನದ ಅಧ್ಯಕ್ಷ ಡಾ. ಬಿ.ಜಿ. ಧನಂಜಯ, ಶಾಸಕ ಬಿ.ಕೆ. ಸಂಗಮೇಶ್ವರ್, ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಮಾತನಾಡಿ, 12ನೇ ಶತಮಾನದ ಚಿಂತನೆಗಳು ಮತ್ತು ಕೊಡುಗೆಗಳನ್ನು ತಿಳಿಯಲು ಶರಣ ಸಾಹಿತ್ಯ ಸಮ್ಮೇಳನ ಉಪಯುಕ್ತವಾಗಿದೆ. ಆದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಶರಣ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಕವಿ, ಕೋಶಾಧ್ಯಕ್ಷ ಜಿ.ಎಂ. ಮಲ್ಲಿಕಾರ್ಜುನ, ಸಮಾಜದ ಪ್ರಮುಖರಾದ ಬಾರಂದೂರು ಪ್ರಕಾಶ್, ಕತ್ತಲಗೆರೆ ತಿಮ್ಮಪ್ಪ, ವಿರೂಪಾಕ್ಷಪ್ಪ, ರಾಜಶೇಖರ್, ಕದಳಿ ವೇದಿಕೆ ಅಧ್ಯಕ್ಷೆ ಮಲ್ಲಿಕಾಂಬ ವಿರೂಪಾಕ್ಷಪ್ಪ ಇನ್ನಿತರರು ಉಪಸ್ಥಿತರಿದ್ದರು.

- - - ಬಾಕ್ಸ್‌ ಡಾ. ಬಿ.ಜಿ. ಧನಂಜಯ ಸಮ್ಮೇಳನಾಧ್ಯಕ್ಷ

ಸಮ್ಮೇಳನಾಧ್ಯಕ್ಷರಾಗಿ ಭದ್ರಾವತಿ ನಿವಾಸಿ ಹಾಗೂ ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ. ವೀಣಾಭಟ್, ವಿಶೇಷ ಆಹ್ವಾನಿತರಾಗಿ ಸಂಸದ ಬಿ.ವೈ ರಾಘವೇಂದ್ರ, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತು ಸದಸ್ಯ ಎಸ್.ರುದ್ರೇಗೌಡ, ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ತಹಸೀಲ್ದಾರ್ ಕೆ.ಆರ್ ನಾಗರಾಜ್, ಡಿವೈಎಸ್ಪಿ ನಾಗರಾಜ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಸಂಜೆ 7.30ರಿಂದ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯ ಕುರಿತು ಡಾ.ಅವಿನಾಶ್ ಕವಿ ಉಪನ್ಯಾಸ ನೀಡಲಿದ್ದಾರೆ.- - -

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ