೮-೯ ತಿಂಗಳ ಕಬ್ಬು ಕಟಾವು: ಬನ್ನಾರಿ ಷುಗರ್ಸ್‌ಗೆ ಸಾಗಣೆ

KannadaprabhaNewsNetwork | Published : Mar 13, 2024 2:07 AM

ಸಾರಾಂಶ

ಸದ್ಯ ಕುಡಿಯುವ ನೀರನ್ನು ಪೂರೈಸುವುದಕ್ಕೆ ಹರಸಾಹಸ ನಡೆಸುತ್ತಿರುವ ರಾಜ್ಯ ಸರ್ಕಾರ ಬೆಳೆಗಳಿಗೆ ನೀರು ಹರಿಸಲಿದೆ ಎನ್ನುವುದು ದೂರದ ಮಾತಾಗಿ ಉಳಿದಿದೆ. ಮಳೆ ಬೀಳುವ ಆಶಾಭಾವ ಹಾಗೂ ಲೋಕಸಭೆ ಚುನಾವಣೆ ಕಾರಣದಿಂದಲಾದರೂ ಬೆಳೆಗಳಿಗೆ ನೀರು ಕೊಡಬಹುದೆಂಬ ಧೈರ್ಯದೊಂದಿಗೆ ಎಂಟು ತಿಂಗಳ ಹಿಂದೆ ರೈತರು ಕಬ್ಬು ನಾಟಿ ಮಾಡಿದರು. ಆದರೆ, ಮಳೆಯೂ ಕೈಕೊಟ್ಟಿತು. ಕೆಆರ್‌ಎಸ್ ಕೂಡ ಭರ್ತಿಯಾಗಲಿಲ್ಲ. ಪ್ರಸ್ತುತ ಬೆಳೆದು ನಿಂತಿರುವ ಕಬ್ಬಿಗೆ ನೀರನ್ನು ಒದಗಿಸುವುದಕ್ಕೂ ಸಾಧ್ಯವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯನೀರಿಲ್ಲದೆ ಕಬ್ಬು ಬೆಳೆ ಒಣಗುತ್ತಿರುವುದರಿಂದ ನಷ್ಟದ ಆತಂಕ ಎದುರಿಸುತ್ತಿರುವ ರೈತರು ೮ ಹಾಗೂ ೯ ತಿಂಗಳ ಕಬ್ಬನ್ನು ನಂಜನಗೂಡಿನ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಸಾಗಿಸಲಾರಂಭಿಸಿದ್ದಾರೆ. ಜಿಲ್ಲೆಯ ಯಾವುದೇ ಕಾರ್ಖಾನೆಗಳು ಪ್ರಸ್ತುತ ಕಬ್ಬು ಅರೆಯುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಕಬ್ಬಿನ ಕೊರತೆ ಎದುರಾಗುವ ಆತಂಕದಿಂದ ಅದನ್ನು ತಡೆಯುವುದಕ್ಕೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸದ್ಯ ಕುಡಿಯುವ ನೀರನ್ನು ಪೂರೈಸುವುದಕ್ಕೆ ಹರಸಾಹಸ ನಡೆಸುತ್ತಿರುವ ರಾಜ್ಯ ಸರ್ಕಾರ ಬೆಳೆಗಳಿಗೆ ನೀರು ಹರಿಸಲಿದೆ ಎನ್ನುವುದು ದೂರದ ಮಾತಾಗಿ ಉಳಿದಿದೆ. ಮಳೆ ಬೀಳುವ ಆಶಾಭಾವ ಹಾಗೂ ಲೋಕಸಭೆ ಚುನಾವಣೆ ಕಾರಣದಿಂದಲಾದರೂ ಬೆಳೆಗಳಿಗೆ ನೀರು ಕೊಡಬಹುದೆಂಬ ಧೈರ್ಯದೊಂದಿಗೆ ಎಂಟು ತಿಂಗಳ ಹಿಂದೆ ರೈತರು ಕಬ್ಬು ನಾಟಿ ಮಾಡಿದರು. ಆದರೆ, ಮಳೆಯೂ ಕೈಕೊಟ್ಟಿತು. ಕೆಆರ್‌ಎಸ್ ಕೂಡ ಭರ್ತಿಯಾಗಲಿಲ್ಲ. ಪ್ರಸ್ತುತ ಬೆಳೆದು ನಿಂತಿರುವ ಕಬ್ಬಿಗೆ ನೀರನ್ನು ಒದಗಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಇದರ ನಡುವೆ ಕಬ್ಬು ಬೆಳೆ ಒಣಗುತ್ತಿರುವುದನ್ನು ನೋಡಿಕೊಂಡು ರೈತರು ಸುಮ್ಮನೆ ಕೂರಲಾಗದೆ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಸಾಗಿಸಲಾರಂಭಿಸಿದ್ದಾರೆ.

ಐದು ತಾಲೂಕುಗಳಿಂದ ಸಾಗಣೆ:

ಮಳವಳ್ಳಿ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ೮ ರಿಂದ ೯ ತಿಂಗಳ ಕಬ್ಬನ್ನು ಬನ್ನಾರಿ ಸಕ್ಕರೆ ಕಾರ್ಖಾನೆಯವರು ಸ್ಥಳಕ್ಕೆ ಬಂದು ಕಟಾವು ಮಾಡಿಕೊಂಡು ಹೋಗುತ್ತಿದ್ದಾರೆ. ನಿತ್ಯ ೫೦ಕ್ಕೂ ಹೆಚ್ಚು ಲಾರಿಗಳಲ್ಲಿ ಕಬ್ಬು ಬನ್ನಾರಿ ಸಕ್ಕರೆ ಕಾರ್ಖಾನೆಯನ್ನು ಸೇರುತ್ತಿದೆ ಎಂದು ಹೇಳಲಾಗುತ್ತಿದೆ. ಸಂಜೆ ಕಬ್ಬು ಕಟಾವು ಮಾಡಿಕೊಂಡು ಹೋದ ಮರುದಿನವೇ ಕಡಗೂಲಿ ಮತ್ತು ಲಾರಿ ಬಾಡಿಗೆ ಕಳೆದು ಉಳಿದ ಕಬ್ಬಿನ ಹಣವನ್ನು ರೈತರ ಖಾತೆಗೆ ಜಮೆ ಮಾಡುತ್ತಿದ್ದಾರೆ. ಇದರಿಂದ ರೈತರು ನಷ್ಟದಿಂದ ಪಾರಾದೆವೆಂಬ ನಿಟ್ಟುಸಿರು ಬಿಡುತ್ತಿದ್ದಾರೆ. ಅಲ್ಲದೇ, ಒಣಗಿದ ಕಬ್ಬನ್ನು ತೆರವುಗೊಳಿಸಲು ಮಾಡಬೇಕಿದ್ದ ಖರ್ಚು ತಪ್ಪಿದಂತಾಗಿದೆ ಎಂದು ನಿರಾಳರಾಗಿದ್ದಾರೆ.

ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯಾಚರಣೆಗೆ ಇನ್ನೂ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ತಮಿಳುನಾಡಿನ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮಾತ್ರ ಕಬ್ಬು ಅರೆಯುವ ಕಾರ್ಯದಲ್ಲಿ ನಿರತವಾಗಿದೆ. ಇದು ಜಿಲ್ಲೆಯ ರೈತರಿಗೆ ಒಂದು ರೀತಿಯಲ್ಲಿ ವರದಾನವಾದಂತೆಯೂ ಆಗಿದೆ.

ತಡೆಯಲು ಜಿಲ್ಲಾಡಳಿತಕ್ಕೆ ಒತ್ತಡ:

ಈ ನಡುವೆ ಎನ್‌ಎಸ್‌ಎಲ್, ಚಾಂಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಯವರು ತಮ್ಮ ವ್ಯಾಪ್ತಿಯ ಕಬ್ಬು ತಮಿಳುನಾಡಿನ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಹೋಗುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಮುಂದಿನ ಸಾಲಿಗೆ ಕಬ್ಬಿನ ಕೊರತೆ ಎದುರಾಗಬಹುದೆಂಬ ಆತಂಕ ಅವರನ್ನು ಕಾಡಲಾರಂಭಿಸಿದೆ. ಅದಕ್ಕಾಗಿ ಜಿಲ್ಲಾಡಳಿತದ ಮೂಲಕ ನೆರೆ ರಾಜ್ಯಕ್ಕೆ ಹೋಗುವ ಕಬ್ಬನ್ನು ತಡೆಹಿಡಿಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.

ಪೂರ್ವ ಸಿದ್ಧತೆಯೇ ನಡೆದಿಲ್ಲ:

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಆರಂಭಗೊಳ್ಳುತ್ತವೆ. ಕಾರ್ಖಾನೆಗಳು ಆರಂಭವಾಗುವುದಕ್ಕೆ ಕನಿಷ್ಠ ಮೂರ್ನಾಲ್ಕು ತಿಂಗಳು ಬೇಕಿದೆ. ಪ್ರಸ್ತುತ ಕಬ್ಬು ಅರೆಯುವ ಸ್ಥಿತಿಯಲ್ಲಿ ಯಾವ ಸಕ್ಕರೆ ಕಾರ್ಖಾನೆಯೂ ಇಲ್ಲ ಹಾಗೂ ಪೂರ್ವ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಪರಿಸ್ಥಿತಿ ಹೀಗಿರುವಾಗ ಕಾರ್ಖಾನೆಗೆ ಚಾಲನೆ ನೀಡುವವರೆಗೆ ಕಬ್ಬನ್ನು ಉಳಿಸಿಕೊಳ್ಳುವುದಕ್ಕೆ ರೈತರಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ ೮ ಹಾಗೂ ೯ ತಿಂಗಳ ಕಬ್ಬನ್ನೇ ಮಾರಾಟ ಮಾಡುತ್ತಾ ಸಂಭವನೀಯ ನಷ್ಟದಿಂದ ಪಾರಾಗುತ್ತಿದ್ದಾರೆ.

ತಡೆಯುವುದಕ್ಕೂ ಸಾಧ್ಯವಿಲ್ಲ:

ಕೆಲವೊಂದು ಸಕ್ಕರೆ ಕಾರ್ಖಾನೆಗಳು ಜಿಲ್ಲಾಡಳಿತದ ಮೇಲೆ ಒತ್ತಡ ತಂದು ನಮ್ಮ ವ್ಯಾಪ್ತಿಯ ಕಬ್ಬನ್ನು ಉಳಿಸಿಕೊಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ರೈತರು ತಾವು ಬೆಳೆದ ಕಬ್ಬನ್ನು ಇಂತಹವರಿಗೇ ಕೊಡಬೇಕೆಂಬ ಕಾನೂನು ಎಲ್ಲಿಯೂ ಇಲ್ಲ. ಅವರು ಯಾರಿಗೆ ಬೇಕಾದರೂ ಕಬ್ಬು ಕೊಡುವುದಕ್ಕೆ ಸ್ವತಂತ್ರರಿರುತ್ತಾರೆ. ಹಾಗಾಗಿ ಜಿಲ್ಲಾಡಳಿತವೂ ಈ ವಿಷಯದಲ್ಲಿ ಮೌನ ವಹಿಸಿದೆ.

ಕಬ್ಬು ಮೂರ್ನಾಲ್ಕು ತಿಂಗಳ ಕಾಲ ಗದ್ದೆಯಲ್ಲೇ ಉಳಿಯಬೇಕಾದರೆ ನೀರು ಕೊಡಬೇಕು. ಅದನ್ನು ಕೊಡುವ ಪರಿಸ್ಥಿತಿಯಲ್ಲಿ ಸರ್ಕಾರವಿಲ್ಲ. ಕಾರ್ಖಾನೆ ಆರಂಭಿಸುವ ಸ್ಥಿತಿಯಲ್ಲಿ ಆಡಳಿತ ಮಂಡಳಿಗಳೂ ಇಲ್ಲ. ಇದರಿಂದಾಗಿ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವುದು ಕಬ್ಬು ಬೆಳೆಗಾರರಿಗೆ ಅಗತ್ಯ ಮತ್ತು ಅನಿವಾರ್ಯವಾಗಿದೆ.

ನಮಗೆ ರೈತರ ಹಿತವೇ ಮುಖ್ಯ. ಪ್ರಸ್ತುತ ಕಬ್ಬು ಬೆಳೆ ನೀರಿಲ್ಲದೆ ಒಣಗುತ್ತಿದೆ. ಕಬ್ಬಿಗೆ ನೀರು ಪೂರೈಸಲಾಗದೆ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸುತ್ತಿದೆ. ಕಬ್ಬು ಗದ್ದೆಯಲ್ಲೇ ಉಳಿದರೆ ಒಣಗಿ ಉರುವಲಾಗುತ್ತದೆ. ಅದನ್ನು ತೆರವುಗೊಳಿಸಲು ಸಾವಿರಾರು ರು. ಖರ್ಚಾಗುತ್ತದೆ. ಅದಕ್ಕಾಗಿ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವುದಕ್ಕೆ ಅವಕಾಶ ಮಾಡಿಕೊಟ್ಟು ರೈತರನ್ನು ನಷ್ಟದಿಂದ ಪಾರು ಮಾಡಬೇಕು.

- ಎಸ್.ಕೃಷ್ಣ, ಅಧ್ಯಕ್ಷರು, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘ

Share this article