ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿಗಳಿಂದ ಜಿಲ್ಲೆಗೆ ಒಟ್ಟು 80 ಕೋಟಿ ರು. ಹಣ ಸಂದಾಯವಾಗಿದೆ ಎಂದು ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಾನಂದಸ್ವಾಮಿ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಂಚ ಗ್ಯಾರಂಟಿಗಳನ್ನು ಶೇ. 96 ರಷ್ಟು ಅನುಷ್ಠಾನಗೊಳಿಸಿದ್ದು ರಾಜ್ಯದಲ್ಲಿ ಜಿಲ್ಲೆ 9ನೇ ಸ್ಥಾನದಲ್ಲಿದೆ ಎಂದರು.5 ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚ ಭಾಗ್ಯಗಳ ಅನುಷ್ಠಾನ ಪ್ರಾಧಿಕಾರ ರಚಿಸಿದ್ದು ಅದಕ್ಕೆ ಓರ್ವ ಅಧ್ಯಕ್ಷ, 5 ಮಂದಿ ಉಪಾಧ್ಯಕ್ಷರು, 15 ಮಂದಿ ಸದಸ್ಯರಿದ್ದು ಜಿಲ್ಲಾಡಳಿತ ದೊಂದಿಗೆ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ಅನುಷ್ಠಾನ ಮಾಡಿಸುವಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 244976 ಮಂದಿ ಫಲಾನುಭವಿಗಳಿಗೆ 49 ಕೋಟಿ ಹಣ ಈಗಾಗಲೇ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಯೋಜನೆಯಡಿ ವಿವಿಧ ಕಾರಣಗಳಿಂದ ವಿಲೇಯಾಗದೇ ಉಳಿದುಕೊಂಡಿದ್ದ 12 ಸಾವಿರ ಅರ್ಜಿಗಳ ಪೈಕಿ 11 ಸಾವಿರ ಅರ್ಜಿಗಳ ತಾಂತ್ರಿಕ ತೊಡಕು ನಿವಾರಿಸಿ ಅನುಮೋದನೆಗೆ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು ಉಳಿದ ಒಂದು ಸಾವಿರ ಫಲಾನುಭವಿಗಳಿಗೂ ಸಹ ಯೋಜನೆ ಕಲ್ಪಿಸಲು ಅನುಷ್ಠಾನ ಪ್ರಾಧಿಕಾರ ಕಾರ್ಯನಿರ್ವಹಿಸಲಿದೆ ಎಂದರು. ಶಕ್ತಿ ಯೋಜನೆಯಡಿ ಕಳೆದ 7 ತಿಂಗಳಿಂದ ಜಿಲ್ಲೆಯ 3 ಕೆ.ಎಸ್.ಆರ್.ಟಿ.ಸಿ ಘಟಕಗಳ ವ್ಯಾಪ್ತಿಯಲ್ಲಿ 1.53 ಕೋಟಿ ಮಹಿಳೆ ಯರು ಉಚಿತವಾಗಿ ಪ್ರಯಾಣಿಸಿದ್ದು ಆ ಬಾಬ್ತು 56 ಕೋಟಿಗಳನ್ನು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಿದೆ ಎಂದರು. ಬೆಳಕು ಯೋಜನೆಯಡಿ ಕಳೆದ 10 ತಿಂಗಳಿನಿಂದ ಜಿಲ್ಲೆಯ 2.39 ಲಕ್ಷ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಪೂರೈಸಿದ್ದು ಇದರಿಂದ 9 ಕೋಟಿ ಉಳಿತಾಯವಾಗಿದೆ ಎಂದರು. ಅನ್ನಭಾಗ್ಯ ಯೋಜನೆಯಡಿ 2.39 ಲಕ್ಷ ಫಲಾನುಭವಿಗಳಿಗೆ ಪಡಿತರ ತಲುಪಿಸಿದ್ದು 5 ಕೆಜಿ ಅಕ್ಕಿ ಬದಲಾಗಿ 12 ಕೋಟಿ ಹಣ ಸಂದಾಯ ಮಾಡಲಾಗಿದೆ ಎಂದು ಹೇಳಿದ ಅವರು, ಈ ಎಲ್ಲಾ ಯೋಜನೆಗಳ ಪೈಕಿ ಕೆಲವರಿಗೆ ತಾಂತ್ರಿಕ ಕಾರಣಗಳಿಂದ ಯೋಜನೆ ತಲುಪಿಲ್ಲ ಅವರನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಅನುಷ್ಠಾನ ಸಮಿತಿ ಸದಸ್ಯರು ಯೋಜನೆಯನ್ನು ತಲುಪಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಎಸ್.ಎಂ. ಮಂಜುನಾಥ್, ಷಡಕ್ಷರಿ, ಚಂದ್ರಮೌಳಿ ಇದ್ದರು.
14 ಕೆಸಿಕೆಎಂ 5ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆ ಅಧ್ಯಕ್ಷ ಶಿವಾನಂದಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.