2 ವರ್ಷದಲ್ಲಿ ಬಾಗಲಕೋಟೆಗೆ 800 ಕೋಟಿ ಅನುದಾನ

KannadaprabhaNewsNetwork | Published : May 23, 2025 1:02 AM
ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆದ ಸಂದರ್ಭದಲ್ಲಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಘೋಷಿಸಿದ್ದರು. ಸದ್ಯ ಅದಕ್ಕೆ ಅನುಮತಿ ದೊರೆತಿದ್ದು, ಅದರ ಕಟ್ಟಡ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಲಿದ್ದಾರೆ.
Follow Us

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕ್ಷೇತ್ರದ ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಉದ್ದೇಶದಿಂದ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಜಾತ್ಯಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಎಚ್.ವೈ.ಮೇಟಿ ತಿಳಿಸಿದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಚೇರಿ ಎದುರು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕಾಂಗ್ರೆಸ್ ಸರಕಾರದ 2ನೇ ವರ್ಷದ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಎಲ್ಲ ವಿಭಾಗಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷದಲ್ಲಿ ಅಂದಾಜು ₹800 ಕೋಟಿ ಅನುದಾನವನ್ನು ಬಾಗಲಕೋಟೆಗೆ ತರಲಾಗಿದೆ. ನಾವು ಕೇಳಿರುವ ಎಲ್ಲ ಕೆಲಸಗಳನ್ನು ಸಿಎಂ ಸಿದ್ದರಾಮಯ್ಯ ಅವರು ಮಾಡಿಕೊಡುತ್ತಿರುವುದರಿಂದ ಕ್ಷೇತ್ರದಲ್ಲಿ ಇಷ್ಟೊಂದು ಅಭಿವೃದ್ಧಿ ಕೈಗೊಳ್ಳಲು ಸಹಾಯವಾಗಿದೆ ಎಂದರು.

ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಬೇಕಿರುವ ಕಿಮೋಥೆರಪಿ ಚಿಕಿತ್ಸಾ ಘಟಕ, 10 ಹೊಸ ಡಯಾಲಿಸಸ್ ಯಂತ್ರಗಳು ಸೇರಿದಂತೆ ನಮ್ಮ ಜನರು ಎಂಆರ್‌ಐಗಾಗಿ ವಿಜಯಪುರಕ್ಕೆ ತೆರಳುತ್ತಿದ್ದಾರೆ. ಅದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಘಟಕ ಸ್ಥಾಪನೆಗೆ ಕ್ರಮ ಕೈಗೊಂಡಿದ್ದು, ಇದಕ್ಕೆ ತೀವ್ರಗತಿಯಲ್ಲಿ ಮಂಜೂರಾತಿ ದೊರೆಯಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಡಿದ ಪಕ್ಷವಲ್ಲ. ದೇಶದ ಪ್ರತಿಯೊಬ್ಬ ಜನರಿಗೆ ಆಳುವ ಸ್ವಾತಂತ್ರ್ಯ ಕೊಟ್ಟ ಪಕ್ಷ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣ, ಉಳುವವನೇ ಭೂಮಿ ಒಡೆಯ, ಜನತಾ ಮನೆಗಳನ್ನು (ಆಶ್ರಯ ಮನೆ) ನೀಡಿ ದೇಶದ ಪ್ರತಿಯೊಬ್ಬ ಜನರ ಜೀವನ ಮಟ್ಟ ಸುಧಾರಣೆಗೆ ಶ್ರಮಿಸಿದ್ದು ಕಾಂಗ್ರೆಸ್ ಎಂದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿತ್ತು. ಅಧಿಕಾರಕ್ಕೆ ಬಂದು ಎರಡು ವರ್ಷಗಳವರೆಗೆ ಘೋಷಿಸಿದ್ದ ಗ್ಯಾರಂಟಿಗಳನ್ನು ಬಹಳ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದು ಮುಂದುವರೆಸಿಕೊಂಡು ಹೋಗುತ್ತಿದೆ. ಮುಂದೆ ಕೂಡ ಇದೇ ರೀತಿಯಾಗಿ ಮುಂದುವರೆಯಲಿವೆ. ವಿರೋಧ ಪಕ್ಷದವರು ಹೇಳಿದಂತೆ ರಾಜ್ಯ ಸರಕಾರಕ್ಕೆ ಹಣದ ಕೊರತೆಯಾಗಿಲ್ಲ. ಈ ಗ್ಯಾರಂಟಿಗಳ ಯಶಸ್ಸನ್ನು ಪ್ರತಿಯೊಬ್ಬ ಕಾರ್ಯಕರ್ತರು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವಾಗಬೇಕು ಎಂದರು.

ಮುಖಂಡ ಪರಶುರಾಮ ಮಹಾರಾಜನವರ ಮಾತನಾಡಿ, ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳಿಂದ ರಾಜ್ಯದ ಹೆಣ್ಣು ಮಕ್ಕಳ ಆರ್ಥಿಕ ಸ್ಥಿತಿ ಸುಧಾರಿಸಿದೆ. ಸಿಎಂ ಸಿದ್ದರಾಮಯ್ಯ ಅವರು, ಮಾಜಿ ಸಿಎಂ ದೇವರಾಜ್ ಅರಸ್ ಅವರ ಸಾಧನೆ ಮುರಿಯುವಷ್ಟರ ಮಟ್ಟಿಗೆ ಸಿಎಂ ಕೆಲಸ ಮಾಡುತ್ತಿದ್ದಾರೆ. ಅವರು ರಾಜ್ಯದ ಸಿಎಂ ಆಗಿ 7 ವರ್ಷ ಪೂರೈಸಿದ ಸಂಭ್ರಮ ಕೂಡ ಕಾರ್ಯಕರ್ತರಲ್ಲಿದೆ ಎಂದರು.

ಗ್ಯಾರಂಟಿಗಳನ್ನು ಟೀಕಿಸಿದ್ದ ವಿರೋಧ ಪಕ್ಷದವರ ಎದುರೇ ರಾಜ್ಯ ಸರಕಾರ ಅವುಗಳನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಗ್ಯಾರಂಟಿಗಳ ಯಶಸನ್ನು ಜನರಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಾಗಲಕೋಟೆ ಮತಕ್ಷೇತ್ರಕ್ಕೆ ತಂದಿರುವ ಅನುದಾನದ ಮಾಹಿತಿಯ ಕುರಿತ ಕಿರು ಹೊತ್ತಿಗೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಮುಖಂಡರಾದ ಸಂತೋಷ ಹೊಕ್ರಾಣಿ, ಚಂದ್ರಶೇಖರ ರಾಠೋಡ, ರಾಜು ಮನ್ನಿಕೇರಿ, ಸಿಕಂದರ್ ಅಥಣಿ, ಹೊಳಬಸು ಶೆಟ್ಟರ, ದ್ಯಾಮಣ್ಣ ಗಾಳಿ, ನಾಗರಾಜ ಹದ್ಲಿ, ಎಸ್.ಎನ್.ರಾಂಪೂರ, ಅಶೋಕ ಲಾಗಲೋಟಿ, ಆನಂದ ಜಿಗಜಿನ್ನಿ, ರಜಾಕ್ ಬೇನೂರ್, ಮಲ್ಲು ಮೇಟಿ, ಉಮೇಶ ಮೇಟಿ ಸೇರಿದಂತೆ ಇತರರಿದ್ದರು.