ಒಂದೂವರೆ ವರ್ಷದಲ್ಲಿ 800 ಕೋಟಿ ಅನುದಾನ: ಶಾಸಕ

KannadaprabhaNewsNetwork | Published : Oct 10, 2024 2:25 AM

ಸಾರಾಂಶ

ರಾಮನಗರ: ನಾನು ಶಾಸಕನಾದ ಒಂದೂವರೆ ವರ್ಷದಲ್ಲಿ ರಾಮನಗರ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು 800 ಕೋಟಿ ರುಪಾಯಿ ಅನುದಾನ ತಂದಿರುವುದಾಗಿ ಶಾಸಕ ಇಕ್ಬಾಲ್ ಹೇಳಿದರು.

ರಾಮನಗರ: ನಾನು ಶಾಸಕನಾದ ಒಂದೂವರೆ ವರ್ಷದಲ್ಲಿ ರಾಮನಗರ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಸುಮಾರು 800 ಕೋಟಿ ರುಪಾಯಿ ಅನುದಾನ ತಂದಿರುವುದಾಗಿ ಶಾಸಕ ಇಕ್ಬಾಲ್ ಹೇಳಿದರು.

ತಾಲೂಕಿನ ಕಾಳೇಗೌಡನದೊಡ್ಡಿ ಗ್ರಾಮದಲ್ಲಿ ಕಸಬಾ ಮತ್ತು ಕೂಟಗಲ್ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕಾಳೇಗೌಡನದೊಡ್ಡಿ ಏತನೀರಾವರಿ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಳೇಗೌಡನದೊಡ್ಡಿ ಯೋಜನೆಗೆ 28 ಕೋಟಿ ಹಾಗೂ ರಾಮನಗರ ಟೌನ್ ನಲ್ಲಿ 70 ಕೋಟಿ ಸೇರಿ ಒಟ್ಟು 100 ಕೋಟಿ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡುತ್ತಿದ್ದೇನೆ. ನನಗೆ ಸಿಕ್ಕ ಅವಕಾಶವನ್ನು ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ‌ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಕಾಳೇಗೌಡನದೊಡ್ಡಿ ಏತನೀರಾವರಿ ಯೋಜನೆ ಬಹು ವರ್ಷಗಳ ಬೇಡಿಕೆ ಆಗಿತ್ತು. ರೈತರಿಗೆ ಅನುಕೂಲವಾಗುವ ಅವಶ್ಯಕವಾದ ಕಾರ್ಯಕ್ರಮ ಕಾರ್ಯಗತ ಆಗುತ್ತಿದೆ. ಈ ಯೋಜನೆಯಿಂದ ಕಸಬಾ ಮತ್ತು ಕೂಟಗಲ್ ಹೋಬಳಿ ಭಾಗದ ಕೆರೆ ಕಟ್ಟೆ ತುಂಬಿ ಅಂತರ್ಜಲ ವೃದ್ಧಿಯಾಗಲಿದೆ. ಸುಮಾರು 16.5 ಕಿ.ಮೀ ವರೆಗೆ ಪೈಪ್ ಲೈನ್ ಮೂಲಕ ಕೆರೆ ಕಟ್ಟೆಗಳಿಗೆ ನೀರು ಹರಿಯಲಿದೆ. ರೈತರು ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದರು.

ಈ ಯೋಜನೆ ಕಾರ್ಯಗತಗೊಳ್ಳಲು ಡಿ.ಕೆ.ಸುರೇಶ್ ಕಾರಣೀಭೂತರು. ಅವರು ನಮ್ಮೊಂದಿಗೆ ಸಂಸದರಾಗಿ ಇಲ್ಲದಿರುವುದು ನಮ್ಮ ದುರ್ದೈವ. ಅವರು ನಮ್ಮೊಂದಿಗೆ ಸಂಸದರಾಗಿದ್ದರೆ ಇಂತಹ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದಿತ್ತು. ಜನರು ಅಥವಾ ದೇವರ ಇಚ್ಛೆಯೊ ಗೊತ್ತಿಲ್ಲ. ನಾವೆಲ್ಲರು ಆ ಶಕ್ತಿಯನ್ನು ಕಳೆದುಕೊಂಡು ಕೆಲಸ ಮಾಡುವ ಸ್ಥಿತಿ ಬಂದಿದೆ ಎಂದು ಗದ್ಗದಿತರಾದರು.

ನಾವು ಕೊಟ್ಟ ಮಾತಿನಂತೆ 24 ಗಂಟೆ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಒಂದಲ್ಲ ಎರಡಲ್ಲ ಸಾಕಷ್ಟು ಕೆಲಸ ಇದೆ.

ಮಂಚನಬೆಲೆ ಎಡ ಮತ್ತು ಬಲ ಕಾಲುವೆ ನೀರು ಹರಿಸಿದರೆ ರೈತರ ಬದುಕು ಹಸನಾಗಲಿದೆ. ಅದರ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ನಾವು ಅದಕ್ಕೂ ಮರು ಜೀವ ಕೊಡುವ ಕೆಲಸ ಮಾಡುತ್ತಿದ್ದೇವೆ. 20 ಕಿ.ಮೀ ಕಾಲುವೆ ದುರಸ್ಥಿ ಮಾಡಿ ನೀರು ಹರಿಸಲು ಕ್ರಮ ವಹಿಸಿದ್ದೇವೆ ಎಂದು ಹೇಳಿದರು.

ರಾಮನಗರ ಕ್ಷೇತ್ರಕ್ಕೆ 5 ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರಾಗಿದ್ದು, 12 ಕೋಟಿ ವೆಚ್ಚದಲ್ಲಿ ಪಂಚಾಯಿತಿಗೊಂದು ಶಾಲೆ ನಿರ್ಮಿಸಲಾಗುತ್ತಿದೆ. ಸುಗ್ಗನಹಳ್ಳಿ ಹಾಗೂ ಹರೀಸಂದ್ರ ಸೇತುವೆ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು. ಸಿ.ಎಂ.ಲಿಂಗಪ್ಪರವರ ನಂತರ ಶಾಸಕರಾದವರು ಒಂದೇ ಒಂದು ಸಾಗುವಳಿ ಚೀಟಿ ಕೊಡಲಿಲ್ಲ. ರೈತರು ಸಾಗುವಳಿ ಜಮೀನಿಗೆ ಕಾದು ಉಸಿರು ಬಿಟ್ಟಿದ್ದಾರೆ. ಅವರ ಮಕ್ಕಳು ಜಮೀನಿಗಾಗಿ ಕಾಯುತ್ತಿದ್ದಾರೆ. ಒಂದೊಂದು ಹೋಬಳಿಯಲ್ಲಿ ಬಾಕಿಯಿರುವ 500 -1000 ಸಾಗುವಳಿ ಚೀಟಿಯನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ರೈತರಿಗೆ ನ್ಯಾಯ ಒದಗಿಸುತ್ತೇನೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತನಾಡಿ, ನಾನು ಶಾಸಕನಾಗಿದ್ದಾಗ ಈ ಭಾಗದ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಬಿಳಗುಂಬ ಗ್ರಾಮದಲ್ಲಿ ಒಂದು ಬಾರಿ ನೀರಿಲ್ಲದ ಕಾರಣ ಯುಗಾದಿ ಹಬ್ಬವನ್ನೇ ಆಚರಿಸಲಿಲ್ಲ. ಅರ್ಕಾವತಿ ನದಿ ಪಕ್ಕದಲ್ಲಿ ಎತ್ತರದ ಪ್ರದೇಶದಲ್ಲಿರುವ ಈ 11 ಗ್ರಾಮಗಳಲ್ಲಿ ಅಂತರ್ಜಲ ‌ಮಟ್ಟ ಕುಸಿದು ಸಾವಿರಾರು ಅಡಿ ಆಳಕ್ಕೆ ಬೋರ್ ವೆಲ್ ಕೊರೆದರೂ ಹನಿ ನೀರು ಸಿಗದಂತಾಗಿತ್ತು. ಈ ಯೋಜನೆ ಇಲ್ಲಿನ ಜನರ ಬದುಕು ಸುಧಾರಿಸಲಿದೆ ಎಂದರು.

ಮಾಜಿ ಸಂಸದ ಸುರೇಶ್ ಅವರು 8 ವಿಧಾನಸಭಾ ಕ್ಷೇತ್ರದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಗ್ರಾಪಂ ಸದಸ್ಯನ ರೀತಿಯಲ್ಲಿ ಕೆಲಸ ಮಾಡಿದರು. ಯಾವ ತಪ್ಪು ಮಾಡಿದೇವು ಗೊತ್ತಿಲ್ಲ. ಜನರು ಸುರೇಶ್ ಅವರನ್ನು ಸೋಲಿಸಿದರು. ದೊಡ್ಡಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಬೆಂಗಳೂರು - ಮೈಸೂರು ಹೆದ್ದಾರಿ ಹಾದು ಹೋಗಿದ್ದಕ್ಕೆ ಜಯಪುರ , ವಿಜಯಪುರ ರೈತರಿಗೆ ಪರಿಹಾರ ಸಿಗುವಂತೆ ಮಾಡಿದರು. ಇದ್ಯಾವುದನ್ನು ಜನರು ಪರಿಗಣಿಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಹರೀಸಂದ್ರ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯೆ ರೂಪಾ, ಬಿಳಗುಂಬ ಗ್ರಾಪಂ ಅಧ್ಯಕ್ಷ ನವೀನ್, ಮಾಜಿ ಅಧ್ಯಕ್ಷ ಪ್ರಭಣ್ಣ, ಮುಖಂಡರಾದ ದೊಡ್ಡವೀರೇಗೌಡ, ಸಿ.ರಾಮಯ್ಯ, ಚಿಕ್ಕಸ್ವಾಮಿ, ಆಂಜನಪ್ಪ, ರಾಮಚಂದ್ರ, ಅರೇಹಳ್ಳಿ ಗಂಗಾಧರ್, ವೀರಭದ್ರ ಸ್ವಾಮಿ, ರವಿ, ಎಇಇ ಕೊಟ್ರೇಶ್ ಉಪಸ್ಥಿತರಿದ್ದರು.

ಬಾಕ್ಸ್‌...............ಸುಳ್ಳು ಸ್ವಾಮಿಗೆ ನಾಚಿಕೆ ಆಗಬೇಕು: ಎಂಎಲ್ಸಿ ರವಿ ವಾಗ್ದಾಳಿ

ರಾಮನಗರ: ದೆಹಲಿಯಲ್ಲಿ ಕೆಲಸ ಮಾಡದೆ ವಾರಕ್ಕೆ ಎರಡು ಮೂರು ದಿನ ಇಲ್ಲಿಗೆ ಬಂದು ಬಾಯಿಗೆ ಬಂದಂತೆ ಡಿ.ಕೆ.ಶಿವಕುಮಾರ್ ಅವರನ್ನು ಟೀಕೆ ಮಾಡುವ ಸುಳ್ಳು ಸ್ವಾಮಿಗೆ ನಾಚಿಕೆ ಆಗಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಸ್.ರವಿ ವಾಗ್ದಾಳಿ ನಡೆಸಿದರು.

ತಾಲೂಕಿನ ಕಾಳೇಗೌಡನದೊಡ್ಡಿ ಗ್ರಾಮದಲ್ಲಿ ಕಸಬಾ ಮತ್ತು ಕೂಟಗಲ್ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕಾಳೇಗೌಡನದೊಡ್ಡಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಅವರ ತಂದೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದವರು. ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಇಂತಹ ಜನೋಪಯೋಗಿ ಕೆಲಸಗಳನ್ನು ಏಕೆ ಮಾಡಲಿಲ್ಲ. ಇಂತವರಿಗೆ ಜನರು ಮನ್ನಣೆ ಹಾಕುತ್ತಿರುವುದು ದೌರ್ಭಾಗ್ಯ. ಸುಳ್ಳಿನ ಸ್ವಾಮಿಗೆ ಸತ್ತೆಗಾಲ ಎಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ಡಿ.ಕೆ.ಸುರೇಶ್ ಅವರ ಪರಿಶ್ರಮದಿಂದ ಕಾಮಗಾರಿಗೆ ಚಾಲನೆ ಸಿಕ್ಕಿತು. ವರ್ಷಪೂರ್ತಿ ಅರ್ಕಾವತಿ ನದಿಯಲ್ಲಿ ನೀರು ಹರಿಯಬೇಕು ಎಂಬ ಸಂಕಲ್ಪದಿಂದ ಅವರು ಈ ಯೋಜನೆ ರೂಪಿಸಿದರು. ಮುಂದಿನ ದಿನಗಳಲ್ಲಿ ಅರ್ಕಾವತಿ ಜೀವ ನದಿಯಾಗಲಿದೆ ಎಂದರು.

ನಮ್ಮ ಬಲಬುಜ ಮುರಿದಿದೆ:

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ನಾವು ಒಪ್ಪಲೇಬೇಕು. ಆದರೆ, ಡಿ.ಕೆ.ಸುರೇಶ್ ಅವರು ಸೋತಿರುವುದು ನಮಗೆ ಬಲಬುಜ ಮುರಿದಂತಾಗಿದೆ. ಅವರು ಯಾವ ಶಾಸಕರು ಇಲ್ಲದೇ ಇದ್ದರೂ ಯೋಜನೆಗಳನ್ನು ಮಂಜೂರು ಮಾಡಿಸುತ್ತಿದ್ದರು. ಸಾಕಷ್ಟು ಅಭಿವೃದ್ಧಿ ಕೆಲಸ‌ ಮಾಡಿದ್ದಾರೆ. ಆದರೆ, ದುಡಿದ ಎತ್ತಿಗೆ ಹುಲ್ಲುಹಾಕದೆ ಕಳ್ಳ‌ ಎತ್ತಿಗೆ ಮಾನ್ಯತೆ ನೀಡಿದರೆ ಮುಂದೆ ಇದೇ ಕೆಲಸವಾಗುತ್ತದೆ ಎಂದು ಜನತೆ ತಿಳಿಯಬೇಕೆಂದು ಡಿ.ಕೆ.ಸುರೇಶ್ ಅವರ ಸೋಲಿನ ಬಗ್ಗೆ ವ್ಯಾಖ್ಯಾನಿಸಿದರು.

ಇಂದು ಗೆದ್ದಿರುವ ಸಂಸದರ ಬಳಿ ನಾವೇನು ಕೇಳಲು ಸಾಧ್ಯ. ಆರೋಗ್ಯ ಕೆಟ್ಟರೆ ಔಷಧ ಕೇಳಬೇಕು. ಜನತೆ ಜಾತಿ ಧರ್ಮದ ವ್ಯಾಮೋಹ ಬಿಟ್ಟು ಕೆಲಸ ಮಾಡುವವರಿಗೆ ಮತಹಾಕಿ. ಅಭಿವೃದ್ಧಿ ಕೆಲಸ ಮಾಡುವವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಶಾಸಕ ಇಕ್ಬಾಲ್ ಹುಸೇನ್ ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮೊದಲು ರಾಮನಗರ ಕ್ಷೇತ್ರದ ಜನರು ವರ್ಷಕ್ಕೊಮ್ಮೆ ಶಾಸಕರನ್ನು ನೋಡುತ್ತಿದ್ದರು. ಈಗ ಪ್ರತಿನಿತ್ಯ ಶಾಸಕರು ಕೈಗೆ ಸಿಗುತ್ತಾರೆ. ಅವರ ಮಗ ಸಭೆಯಲ್ಲಿ‌ ಅಳುತ್ತಾರೆ ನನ್ನನ್ನು ಜನ ಸೋಲಿಸಿ ಬಿಟ್ಟರು ಎಂದು, ಏನು ಮಾಡಿದ್ದಾರೆ ಎಂದು ಜನ ಮತ ಹಾಕಬೇಕಿತ್ತು ಎಂದು ಪ್ರಶ್ನಿಸಿದರು.

ಈಗಲಾದರು ಜನರು ಎಚ್ಚೆತ್ತು ಕೊಳ್ಳಬೇಕು. ಸುಳ್ಳು, ಮೋಸ, ಜಾತಿ ಮುಖ್ಯವಾದರೆ ಹೊಟ್ಟೆ ತುಂಬುವುದಿಲ್ಲ. ಕೆರೆ ಕಟ್ಟೆ ತುಂಬ ಬೇಕು, ಬೆಳೆಗಳಿಗೆ ಬೆಲೆ ಸಿಗಬೇಕು. ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಉಪಕಾರ ಸ್ಮರಣೆ ಇರಬೇಕು. ಆದರೆ, ಡಿ.ಕೆ.ಸುರೇಶ್ ಅವರಿಗೆ ಅನ್ಯಾಯ ಮಾಡಿದ್ದು ಧರ್ಮ ಅಲ್ಲರ ಎಂದು ಎಸ್. ರವಿ ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಮಾತನಾಡಿ, ಯೋಗ ಇದ್ದು, ಯೋಗ್ಯತೆ ಇಲ್ಲದಿದ್ದರು ಅಧಿಕಾರ ಸಿಗುತ್ತದೆ ಎನ್ನುವುದಕ್ಕೆ ಕುಮಾರಸ್ವಾಮಿ ಸಾಕ್ಷಿಯಾಗಿದ್ದಾರೆ. ರಾಜ್ಯದಲ್ಲಿ ತಾವೊಬ್ಬರೆ ಸತ್ಯ ಹರಿಶ್ಚಂದ್ರರು, ಬೇರೆಯವರೆಲ್ಲರು ದಗಾ ಕೋರರು ಎಂಬಂತೆ ಮಾತನಾಡುತ್ತಾರೆ. ಅಷ್ಟಕ್ಕೂ ಮಣ್ಣಿನ ಮಕ್ಕಳು ಹತ್ತಾರು ಸಾವಿರ ಕೋಟಿ ಒಡೆಯರಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.

ರಾಮನಗರಕ್ಕೆ ಅವರು ಬಂದಾಗ ಪರಿಸ್ಥಿತಿ ಹೇಗಿತ್ತು. ಈಗ ಇಕ್ಬಾಲ್ ಹುಸೇನ್ ಶಾಸಕರಾದ ಮೇಲೆ ಕ್ಷೇತ್ರದ ಪರಿಸ್ಥಿತಿ ಏನಾಗಿದೆ ಎಂಬುದನ್ನು ಜನರು ಗಮನಿಸಬೇಕು. ಅವರ ಭಾವನಾತ್ಮಕ, ಬೂಟಾಟಿಕೆ ಮಾತುಗಳಿಗೆ ಮರಳಾಗಬೇಡಿ ಎಂದು ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

9ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಕಾಳೇಗೌಡನದೊಡ್ಡಿ ಗ್ರಾಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಕಸಬಾ ಮತ್ತು ಕೂಟಗಲ್ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕಾಳೇಗೌಡನದೊಡ್ಡಿ ಏತನೀರಾವರಿ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

Share this article