ಮಂಡ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Dec 20, 2024, 12:49 AM ISTUpdated : Dec 20, 2024, 04:51 AM IST
Mandya

ಸಾರಾಂಶ

ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ನಗರ ಸರ್ವ ರೀತಿಯಲ್ಲೂ ಸಜ್ಜುಗೊಂಡಿದ್ದು, ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

  ಮಂಡ್ಯ : ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ನಗರ ಸರ್ವ ರೀತಿಯಲ್ಲೂ ಸಜ್ಜುಗೊಂಡಿದ್ದು, ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಸಮ್ಮೇಳನದ ಹಿನ್ನೆಲೆಯಲ್ಲಿ ವೇದಿಕೆ, ಮಹಾಮಂಟಪ, ಮಹಾದ್ವಾರ, ಪ್ರವೇಶದ್ವಾರಕ್ಕೆ ಮಹನೀಯರ ಹೆಸರನ್ನು ಇಡಲಾಗಿದೆ. ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಪ್ರಧಾನ ವೇದಿಕೆಗೆ, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಮಹಾ ಮಂಟಪಕ್ಕೆ ಯಕ್ಷಕವಿ ಕೆಂಪಣ್ಣಗೌಡ ಮತ್ತು ಉಭಯ ಕವಿತಾ ವಿಶಾರದ ಷಡಕ್ಷರದೇವ ಹೆಸರನ್ನು ಮಹಾದ್ವಾರ ಹಾಗೂ ಶ್ರೇಷ್ಠ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಮತ್ತು ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಪ್ರವೇಶ ದ್ವಾರಕ್ಕೆ ಇಡಲಾಗಿದೆ.

ಬೆಳಗ್ಗೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ರಾಷ್ಟ್ರ ಧ್ವಜಾರೋಹಣ, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಪರಿಷತ್ತಿನ ಧ್ವಜಾರೋಹಣ ಹಾಗೂ ಮಂಡ್ಯ ಜಿಲ್ಲಾ ಕಸಾಪ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ನಾಡಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ರಾಜಮಾತೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಚಾಲನೆ:

ಬೆಳಗ್ಗೆ 7 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ಪ್ರಾರಂಭವಾಗಿ ಮೈಸೂರು- ಬೆಂಗಳೂರು ರಸ್ತೆ ಮಾರ್ಗವಾಗಿ ಸ್ಯಾಂಜೋ ಆಸ್ಪತ್ರೆ ಹಾಗೂ ಹೋಟೆಲ್ ಅಮರಾವತಿ ಹಿಂಭಾಗ ಸಮ್ಮೇಳನದ ವೇದಿಕೆಗೆ ತಲುಪಲಿದೆ. ಮೆರವಣಿಗೆಯನ್ನು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಉದ್ಘಾಟಿಸುವರು.

ಸಮ್ಮೇಳನ ಉದ್ಘಾಟಿಸಲಿರುವ ಸಿಎಂ:

ಬೆಳಗ್ಗೆ 10.30 ಗಂಟೆಗೆ ವೇದಿಕೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ದೊಡ್ಡ ರಂಗೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಗೌರವ ಕಾರ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಉಪಸ್ಥಿತರಿರುವರು.

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ, ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಮಹದೇವಪ್ಪ ಪಟ್ಟಣ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಹನಮಗೌಡ ಪಾಟೀಲ, ವಿಪಕ್ಷ ನಾಯಕ ಆರ್.ಅಶೋಕ್ ಉಪಸ್ಥಿತರಿರುವರು.

ಅತಿಥಿ, ವಿಶೇಷ ಆಹ್ವಾನಿತರಾಗಿ ಜಿಲ್ಲೆಯ ಶಾಸಕರು, ಸ್ಥಳೀಯ ಸಂಸ್ಥೆ, ನಿಗಮ ಮಂಡಳಿ ಅಧ್ಯಕ್ಷರು, ಸರ್ಕಾರ ಮಟ್ಟದ ಅಧಿಕಾರಿಗಳು ಭಾಗವಹಿಸುವರು. ಇದೇ ವೇಳೆ ಜಿಲ್ಲೆಯ 87 ಕಲಾವಿದರಿಂದ ನಾಡಗೀತೆ ಮತ್ತು ರೈತ ಗೀತೆ, ಡೀಸಿ ಡಾ.ಕುಮಾರ ಸ್ವಾಗತ ಭಾಷಣ, ಸಚಿವ ಚಲುವರಾಯಸ್ವಾಮಿ ಅವರಿಂದ ಮೊದಲ ಮಾತು, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಆಶಯ ನುಡಿಗಳನ್ನಾಡುವರು.

ಪ್ರವೇಶದ್ವಾರ, ಮಹಾಮಂಟಪ, ಮಳಿಗೆಗಳ ಉದ್ಘಾಟನೆ:

ವಿವಿಧ ವೇದಿಕೆಗಳನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಮಹಾ ಮಂಟಪವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಹಾದ್ವಾರಗಳನ್ನು ಶಾಸಕ ಪಿ.ರವಿಕುಮಾರ್, ಪ್ರವೇಶ ದ್ವಾರಗಳನ್ನು ಶಾಸಕ ರಮೇಶ ಬಂಡಿಸಿದ್ದೇಗೌಡ, ಪುಸ್ತಕ ಮಳಿಗೆಗಳನ್ನು ಶಾಸಕ ಎಚ್.ಟಿ.ಮಂಜು, ವಾಣಿಜ್ಯ ಮಳಿಗೆಗಳನ್ನು ಶಾಸಕ ಕೆ. ವಿವೇಕಾನಂದ, ವಸ್ತು ಪ್ರದರ್ಶನ ಮಳಿಗೆಗಳನ್ನು ಶಾಸಕ ಮಧು ಜಿ.ಮಾದೇಗೌಡ, ಪುಸ್ತಕವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಜಿಲ್ಲಾ ಪುಸ್ತಕಗಳನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸ್ಮರಣ ಸಂಚಿಕೆಯನ್ನು ಶಾಸಕ ಕೆ.ಎಂ.ಉದಯ್, ವಿಶೇಷ ಅಂಚೆ ಲಕೋಟೆಯನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಮಹದೇವಪ್ಪ ಪಟ್ಟಣ್ ಹಾಗೂ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಹನುಮಗೌಡ ಪಾಟೀಲ ಬಿಡುಗಡೆ ಮಾಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಗಣ್ಯರ ಭಾಷಣ ನಂತರ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅವರು ಧ್ವಜ ಹಸ್ತಾಂತರ ಮತ್ತು ಶುಭನುಡಿಯಲಿದ್ದಾರೆ. ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು. ಚನ್ನಬಸಪ್ಪ ಪ್ರಧಾನ ಭಾಷಣ ಮಾಡುವರು. ಸಾನಿದ್ಯ ವಹಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಆಶೀರ್ವಚನ ನೀಡುವರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ