ಗಣೇಶ್ ತಮ್ಮಡಿಹಳ್ಳಿ
ಶಿವಮೊಗ್ಗ : ಬೀದಿಗೆ ಒಂದರಂತೆ ಖಾಸಗಿ ಶಾಲೆಗಳು ತಲೆ ಎತ್ತಿದ್ದು, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆಯುತ್ತಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ.
ಜಿಲ್ಲೆಯಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೋವಿಡ್ ಸಮಯದಲ್ಲಿ ಏರಿಕೆ ಕಂಡಿದ್ದ ದಾಖಲಾತಿ ಪ್ರಮಾಣವು ಈಚೆಗಿನ ಎರಡು ವರ್ಷಗಳಿಂದ ಇಳಿಕೆಯತ್ತ ಸಾಗಿದೆ. ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳ ಕಡೆ ಮಕ್ಕಳು, ಪೋಷಕರು ಆಸಕ್ತಿ ತೋರುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯ ಇಲ್ಲದಿರುವುದು ಮಕ್ಕಳನ್ನು ಪೋಷಕರು ಈ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುವಂತೆ ಮಾಡಿದೆ. ಗುಣಮಟ್ಟದ ಶಿಕ್ಷಣ, ಕಟ್ಟಡ, ಗ್ರಂಥಾಲಯ, ಆಟದ ಮೈದಾನ ಒಳಗೊಂಡಂತೆ ಹಲವು ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ಕಾಣೆಯಾಗಿವೆ. ಸಾಕಷ್ಟು ಕಡೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ, ಮತ್ತೆ ಹಲವೆಡೆ ಶಾಲೆಗಳಿಗೆ ಅಗತ್ಯವಾಗಿ ಬೇಕಾದ ಕಟ್ಟಡಗಳೇ ಇಲ್ಲ. ಈ ಎಲ್ಲ ಸಮಸ್ಯೆಗಳಿಂದಾಗಿ ತಂದೆ–ತಾಯಂದಿರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಆಸಕ್ತಿ ತೋರುತ್ತಿಲ್ಲ.
ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು ಎಂಬ ಉದ್ದೇಶದಿಂದ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಸರ್ಕಾರ ನಾನಾ ಪ್ರಯತ್ನ ನಡೆಸುತ್ತಿದ್ದರೂ ಇರುವ ಮಕ್ಕಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂಬ ಮಾತು ಶಿಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ.
ಕೋವಿಡ್ ಸಮಯದಲ್ಲಿ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚಿನ ಜನರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದ್ದರು. ನಗರ ಬಿಟ್ಟು ಗ್ರಾಮಾಂತರ ಪ್ರದೇಶ ಸೇರಿದ ಹಲವು ಕುಟುಂಬಗಳು ಮತ್ತೆ ಸರ್ಕಾರಿ ಶಾಲೆಗಳತ್ತ ದೃಷ್ಟಿ ನೆಟ್ಟಿದ್ದವು. ಕೋವಿಡ್ ಪರಿಸ್ಥಿತಿ ತಿಳಿಯಾದ ತರುವಾಯ ಶಾಲೆಗಳ ಸ್ಥಿತಿ ಮತ್ತೆ ಶೋಚನೀಯವಾಗಿದೆ.
89 ಸರ್ಕಾರಿ ಶಾಲೆಯಲ್ಲಿ 5ಕ್ಕಿಂತ ಕಡಿಮೆ ಮಕ್ಕಳು :ಚುನಾವಣೆಯ ಸಮಯದಲ್ಲಿ ಮತದಾನಕ್ಕೆ ಮಾತ್ರ ಶಾಲೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ನಂತರ ದಿನಗಳಲ್ಲಿ ಶಾಲೆಗಳ ಅಭಿವೃದ್ಧಿಗೆ ಪೂರಕವಾಗಿ ಯಾವುದೇ ಯೋಜನೆ ರೂಪಿಸುವುದಿಲ್ಲ. ಇದರಿಂದಾಗಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆಯಲ್ಲಿ ಕುಸಿತ ಕಾಣುತ್ತಿದೆ. ಜಿಲ್ಲೆಯಲ್ಲಿ 89 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 5ಕ್ಕಿಂತ ಕಡಿಮೆ ಇದೆ.ಭದ್ರಾವತಿ ತಾಲೂಕಿನ 11 ಸರ್ಕಾರಿ ಶಾಲೆಗಳು, ಹೊಸನಗರ ತಾಲೂಕಿನಲ್ಲಿ 15 ಶಾಲೆಗಳು, ಸಾಗರ ತಾಲೂಕಿನಲ್ಲಿ 21 ಶಾಲೆಗಳು, ಶಿಕಾರಿಪುರ ತಾಲೂಕಿನಲ್ಲಿ 6 ಶಾಲೆಗಳು, ಶಿವಮೊಗ್ಗ ತಾಲೂಕಿನಲ್ಲಿ 5 ಶಾಲೆಗಳು, ಸೊರಬ ತಾಲೂಕಿನ 10 ಶಾಲೆಗಳು, ತೀರ್ಥಹಳ್ಳಿ ತಾಲೂಕಿನ 21 ಸರ್ಕಾರಿ ಶಾಲೆಗಳಲ್ಲಿ ಬೆರಳಿಕೆಯಷ್ಟು ಮಾತ್ರ ಉಳಿದುಕೊಂಡಿದ್ದಾರೆ. ಇನ್ನು 187 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10ಕ್ಕಿಂತ ಕಡಿಮೆ ಇದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಇಲಾಖೆಯಿಂದ ನಾನಾ ಪ್ರಯತ್ನ ಮಾಡಲಾಗುತ್ತಿದೆ. ಆದರೂ ಕೆಲ ಕಡೆ ಪೋಷಕರು ಪ್ರತಿಷ್ಠೆಗಾಗಿ ಹಾಗೂ ಇಂಗ್ಲಿಷ್ ವ್ಯಾಮೋಹದಿಂದ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಸರ್ಕಾರವೂ ಬಡವರ್ಗದ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ಅನೇಕ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿದೆ. ಮುಂದಿನ ದಿನದಲ್ಲಿ ಇವುಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಎಲ್ಲಿಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಅಲ್ಲಿ ಶಿಕ್ಷಕರು ವಿಶೇಷ ದಾಖಲಾತಿ ಅಭಿಯಾನವನ್ನು ಮಾಡುವ ಮೂಲಕ ಪೋಷಕರ ಮನವೊಲಿಸುವ ಪ್ರಯತ್ನ ಮಾಡಲಾಗುವುದು.- ಮಂಜುನಾಥ್, ಡಿಡಿಪಿಐ.