ಲೋಕಸಭೆ ಚುನಾವಣೆಗೆ ಖರ್ಚು 95 ಲಕ್ಷ ರು. ನಿಗದಿ

KannadaprabhaNewsNetwork |  
Published : Feb 23, 2024, 01:46 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಗರಿಷ್ಠ 95 ಲಕ್ಷ ರು.ಗಳ ವೆಚ್ಚ ಮಿತಿ ನಿಗದಿಪಡಿಸಲಾಗಿದೆ.

ಚಿತ್ರದುರ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಗರಿಷ್ಠ 95 ಲಕ್ಷ ರು.ಗಳ ವೆಚ್ಚ ಮಿತಿ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ಖರ್ಚು ವೆಚ್ಚದ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ರಾಜಕೀಯ ಪಕ್ಷ, ಅಭ್ಯರ್ಥಿಗಳು ಚುನಾವಣೆ ಖರ್ಚು ವೆಚ್ಚಗಳ ನಿಖರ ಮಾಹಿತಿ ನೀಡಲೇಬೇಕು. ಈ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಮರ್ಪಕವಾಗಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಮಾಡಿದ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೆಚ್ಚದ ಮಿತಿ ಮೀರಿದಲ್ಲಿ, ಅಭ್ಯರ್ಥಿ ತನ್ನ ಅಭ್ಯರ್ಥಿತನವನ್ನೇ ಕಳೆದುಕೊಳ್ಳುತ್ತಾರೆ. ಹಾಗಾಗಿ ಚುನಾವಣಾ ಖರ್ಚು-ವೆಚ್ಚಕ್ಕೆ ಸಂಬಂಧಿಸಿದಂತೆ ಹೆಚ್ಚು ನಿಗಾವಹಿಸಬೇಕು. ರಾಜಕೀಯ ಪಕ್ಷಗಳ ಸಲಹೆ ಪಡೆದುಕೊಂಡು, ಚುನಾವಣೆಗಳ ಖರ್ಚಿನ ಪಟ್ಟಿಯ ದರವನ್ನು ನಿಗದಿ ಮಾಡಲಾಗಿದೆ. ನಂತರದಲ್ಲಿ ಅಭ್ಯರ್ಥಿಗಳು ಹಾಗೂ ಪಕ್ಷಗಳು ದರಪಟ್ಟಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಅವಕಾಶವಿರುವುದಿಲ್ಲ. ಖರ್ಚು ವೆಚ್ಚದ ಬಗ್ಗೆ ಚುನಾವಣೆ ಆಯೋಗಕ್ಕೆ ಕಡ್ಡಾಯವಾಗಿ ಲೆಕ್ಕ ಒಪ್ಪಿಸಬೇಕು. ತಪ್ಪಿದ್ದಲ್ಲಿ ಅಭ್ಯರ್ಥಿಗಳು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಗೆದ್ದ ಅಭ್ಯರ್ಥಿಯು ನಿಗದಿತ ಕಾಲಮಿತಿಯಲ್ಲಿ ವೆಚ್ಚದ ಲೆಕ್ಕ ನೀಡದಿದ್ದರೆ, ಸದಸ್ಯತ್ವದಿಂದಲೇ ಅನರ್ಹಗೊಳ್ಳುವ ಸಂಭವವಿರುತ್ತದೆ ಎಂದರು.

ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಜಾಹೀರಾತು, ಹೋರ್ಡಿಂಗ್ಸ್, ಪೋಸ್ಟರ್, ಬ್ಯಾನರ್ಸ್, ಬಂಟಿಂಗ್ಸ್‌ಳನ್ನು ನಗರ ಸ್ಥಳೀಯ ಸಂಸ್ಥೆಯವರು ಹಾಗೂ ಗ್ರಾಮ ಪಂಚಾಯಿತಿಯವರು ನಿಗದಿಪಡಿಸಿದ ಸ್ಥಳಗಳಲ್ಲಿಯೇ ಜಾಹೀರಾತು ಹಾಕಬೇಕು. ನಿಗದಿತ ಸ್ಥಳಗಳನ್ನು ಹೊರತುಪಡಿಸಿ ಜಾಹೀರಾತು ಹಾಕಿದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ನಿಗದಿಗೊಳಿಸದೇ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೇ ಪ್ರಚಾರ ಮಾಡಿದರೆ ಪ್ರಕರಣ ದಾಖಲಿಸಲಾಗುವುದು. ಧಾರ್ಮಿಕ ಕೇಂದ್ರಗಳಾದ ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಚುನಾವಣಾ ಪ್ರಚಾರ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಜಾತ್ರೆ, ಉತ್ಸವಗಳ ಜಾಗಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಬಾರದು. ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಬಾರದು. ಚುನಾವಣೆ ಅಕ್ರಮಗಳು ಕಂಡುಬಂದರೆ ಪ್ರಜಾಪ್ರತಿನಿಧಿ ಕಾಯ್ದೆ ಹೊರತಾಗಿ, ಐಪಿಸಿ, ಸಿಆರ್‌ಪಿಸಿ, ಅಬಕಾರಿ, ಮೋಟಾರು ವಾಹನ ಕಾಯ್ದೆ ಅಡಿಯಲ್ಲೂ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಜಿಲ್ಲಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿ ಡಿ.ಆರ್.ಮಧು ಮಾತನಾಡಿ, ಮೊದಲ ಹಂತದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಯಾಗಲಿದೆ. ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆ ಪಾಲಿಸಬೇಕಾಗುತ್ತದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೇಲಿನ ಎಲ್ಲಾ ಕ್ರಿಮಿನಲ್ ಪ್ರಕರಣಗಳ ಮಾಹಿತಿ ನಿಗದಿತ ನಮೂನೆಯೊಳಗೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಇದೇ ಮಾಹಿತಿ ಚುನಾವಣೆ ಆಯೋಗಕ್ಕೂ ನೀಡುವುದು ಕಡ್ಡಾಯವಾಗಿದೆ ಎಂದರು.

ಭಾರತ ಚುನಾವಣಾ ಆಯೋಗ ಚುನಾವಣಾ ವೆಚ್ಚದ ವೀಕ್ಷಣೆಗಾಗಿ ಐಆರ್‌ಎಸ್ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸುತ್ತದೆ. ಪ್ರತಿ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ದಿನಕ್ಕೆ, ಕನಿಷ್ಠ ಒಂದು ದಿನ ಮುಂಚಿತವಾಗಿ ಚುನಾವಣೆ ವೆಚ್ಚಗಳ ನಿರ್ವಹಣೆಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು. ನಾಮಪತ್ರ ಸಲ್ಲಿಸಿ ಅಭ್ಯರ್ಥಿಗಳಿಗೆ ದೈನಂದಿನ ಖರ್ಚು ವೆಚ್ಚಗಳ ನಮೂದಿಸಲು ಬಿಳಿ ಬಣ್ಣದ, ಹಣಕಾಸಿನ ವಹಿ ನಿರ್ವಹಣೆಗೆ ಗುಲಾಬಿ ಬಣ್ಣದ ಹಾಗೂ ಬ್ಯಾಂಕ್‍ಗಳ ವ್ಯವಹಾರದ ನೊಂದಣಿಗೆ ಹಳದಿ ಬಣ್ಣದ ರಿಜಿಸ್ಟರ್ ನೀಡಲಾಗುವುದು. ಇವುಗಳನ್ನು ತಪ್ಪದೇ ಅಭ್ಯರ್ಥಿಗಳು ಭರ್ತಿ ಮಾಡಬೇಕು. ಚುನಾವಣಾ ಸಂದರ್ಭದಲ್ಲಿ ಪಕ್ಷ ಹಾಗೂ ಅಭ್ಯರ್ಥಿಗಳ ಖರ್ಚು ವೆಚ್ಚದ ಬಗ್ಗೆ ಪ್ರತ್ಯೇಕ ತಂಡಗಳು ತನ್ನದೇ ಆದ ಶ್ಯಾಡೋ ರಿಜಿಸ್ಟರ್ ನಿರ್ವಹಣೆ ಮಾಡುತ್ತವೆ ಡಿ.ಆರ್.ಮಧು ತಿಳಿಸಿದರು.

ಜಿಪಂ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ , ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಎಚ್.ಜೆ.ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಜಿಲ್ಲಾ ಮಾಸ್ಟರ್ ತರಬೇತುದಾರ ಹಾಗೂ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಕಾರ್ಯದರ್ಶಿ ಸಿ.ಜೆ.ನಾಸಿರುದ್ದೀನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಹೊನ್ನಾಳ್, ಸಿಪಿಐಎಂ ಡಿಒಸಿ ಗೌಸ್‍ಪೀರ್ ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ