ಫಲಪುಷ್ಪ ಪ್ರದರ್ಶನಕ್ಕೆ ಒಂದೇ ದಿನ 95 ಸಾವಿರ ಜನ!

KannadaprabhaNewsNetwork | Published : Jan 27, 2024 1:15 AM

ಸಾರಾಂಶ

ಫಲಪುಷ್ಪ ಪ್ರದರ್ಶನಕ್ಕೆ ಒಂದೇ ದಿನ 95 ಸಾವಿರ ಜನ! ಟಿಕೆಟ್‌ ಮಾರಾಟದಿಂದ ₹65 ಲಕ್ಷ ಸಂಗ್ರಹ. ಫೋಟೋ, ಸೆಲ್ಫಿಗೆ ಮುಗಿ ಬಿದ್ದ ಜನ, ಇಂದು, ನಾಳೆಯೂ ಭಾರಿ ಸಂಖ್ಯೆಯಲ್ಲಿ ಜನರ ಆಗಮನ ನಿರೀಕ್ಷೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಆಯೋಜಿಸಿರುವ ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಗಣರಾಜ್ಯೋತ್ಸವದಂದು (ಶುಕ್ರವಾರ) ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದು ಬಂದಿತ್ತು.

ಬೆಂಗಳೂರು ನಗರ ಸೇರಿದಂತೆ ಹೊರ ಜಿಲ್ಲೆಗಳು, ಹೊರ ರಾಜ್ಯಗಳಿಂದಲೂ ವೀಕ್ಷಕರು ಆಗಮಿಸಿದ್ದು ಉದ್ಯಾನದಲ್ಲಿ ಎಲ್ಲೆಲ್ಲೂ ಜನ ಕಿಕ್ಕಿರಿದಿದ್ದರು.

ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಶುಕ್ರವಾರ ಒಂದೇ ದಿನ 95,600 ವೀಕ್ಷಕರು ಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದು, ಟಿಕೆಟ್‌ ಮಾರಾಟದಿಂದ ₹65 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ವೀಕೆಂಡ್‌ ದಿನವಾದ ಶನಿವಾರ ಮತ್ತು ಭಾನುವಾರವೂ ಪ್ರದರ್ಶನ ಮುಂದುವರೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನಿರೀಕ್ಷೆ ಇದೆ.

ಶುಕ್ರವಾರ ಬೆಳಗ್ಗೆ 9ರಿಂದಲೇ ಜನ ಗುಂಪು ಗುಂಪಾಗಿ ಆಗಮಿಸಲು ಆರಂಭಿಸಿದರು. ಮಧ್ಯಾಹ್ನದ ಬಿಸಿಲನ್ನೂ ಲೆಕ್ಕಿಸದೆ ಮಕ್ಕಳು, ವಯಸ್ಕರು, ಮಹಿಳೆಯರು ತಂಡೋಪತಂಡವಾಗಿ ಪ್ರದರ್ಶನಕ್ಕೆ ಆಗಮಿಸಿದರು. ಸಂಜೆ ಹೊತ್ತಿಗೆ ಎತ್ತ ನೋಡಿದರೂ ಜನಜಂಗುಳಿಯಿತು. ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜಾತ್ರೆಯ ವಾತಾವರಣವಿತ್ತು. ಅನುಭವ ಮಂಟಪದ ಪುಷ್ಪ ಮಾದರಿ ಮತ್ತು ಬಸವಣ್ಣ ಅವರ ಪುತ್ಥಳಿ ಇರುವ ಗಾಜಿನ ಮನೆಯಲ್ಲಿ ಉಸಿರುಗಟ್ಟುವಷ್ಟು ಜನ ಸೇರಿದ್ದರು. ಅಲ್ಲಿನ ಸಿಬ್ಬಂದಿ ಜನರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಡುತ್ತಿದ್ದರು.

ಹೂಗಳನ್ನು ನೋಡುವುದಕ್ಕಿಂತ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿತ್ತು. ಸಾವಿರಾರು ವರ್ಷಗಳ ಇತಿಹಾಸವಿರುವ ಲಾಲ್‌ಬಾಗ್‌ ಬಂಡೆ, ಕೆರೆ ಏರಿ ಮೇಲೆ, ಬೋನ್ಸಾಯ್ ಗಾರ್ಡನ್, ತರಕಾರಿ ಗಾರ್ಡನ್, ಮಾರಾಟ ಮಳಿಗೆಗಳ ಬಳಿ ಹೆಚ್ಚಿನ ಜನಸಂದಣಿಯಿತ್ತು. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿದ ವಿದ್ಯಾರ್ಥಿಗಳು ನೇರ ಲಾಲ್‍ಬಾಗ್‍ಗೆ ಬಂದಿದ್ದರು. ಅತ್ಯಾಕರ್ಷಕ ಹೂವಿನ ಅಲಂಕಾರಗಳು ಜನರನ್ನು ಸಂತಸಗೊಳಿಸಿದವು.

ವಾಹನ ದಟ್ಟಣೆ

ಫಲಪುಷ್ಪ ಪ್ರದರ್ಶನಕ್ಕೆ ಜನರ ಆಗಮನಕ್ಕೆ ತಕ್ಕಂತೆ ಉದ್ಯಾನದಲ್ಲಿ ತ್ಯಾಜ್ಯದ ರಾಶಿಯೂ ತುಂಬಿತ್ತು. ತಿನಿಸುಗಳ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಕವರ್‌ಗಳು ಚೆಲ್ಲಾಡಿದ್ದವು. ಶಾಂತಿನಗರ ಬಸ್ ನಿಲ್ದಾಣ, ಜೆ.ಸಿ. ರಸ್ತೆಯಲ್ಲಿರುವ ಬಿಬಿಎಂಪಿ ವಾಣಿಜ್ಯ ಸಂಕೀರ್ಣಗಳಲ್ಲೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಆದಾಗ್ಯೂ ಬಹುತೇಕ ವಾಹನ ಸವಾರರು ಉದ್ಯಾನದ ಸುತ್ತಲಿನ ರಸ್ತೆಯಂಚುಗಳಲ್ಲೇ ವಾಹನಗಳನ್ನು ನಿಲ್ಲಿಸಿದ್ದರು. ಇದನ್ನು ತಡೆಯಬೇಕಾದ ಪೊಲೀಸರು ಕಂಡೂ ಕಾಣದಂತಿದ್ದರು.

ನಾಳೆವರೆಗೆ ಪ್ರದರ್ಶನ

ಜ.18ರಂದು ಆರಂಭವಾಗಿರುವ ಫಲಪುಷ್ಪ ಪ್ರದರ್ಶನ ಜ.28ರವರೆಗೆ ಪ್ರದರ್ಶನ ಇರಲಿದೆ. ಶನಿವಾರ ಮತ್ತು ಭಾನುವಾರ ಎರಡು ದಿನ ಪ್ರವೇಶ ಶುಲ್ಕ ವಯಸ್ಕರಿಗೆ ತಲಾ ₹100 ನಿಗದಿಪಡಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ₹30. ಸಮಯ: ಬೆಳಗ್ಗೆ 6 ರಿಂದ ಸಂಜೆ 7ರವರೆಗೆ.

ಸ್ಪರ್ಧೆ ವಿಜೇತರಿಗೆ ಬಹುಮಾನ

ಶನಿವಾರ ಮಧ್ಯಾಹ್ನ 2.30ಕ್ಕೆಇಕೆಬಾನ, ಪುಷ್ಪ ರಂಗೋಲಿ, ಜಾನೂರ್‌, ತರಕಾರಿ ಕೆತ್ತನೆ ಮತ್ತು ಪೂರಕ ಕಲೆಗಳ ಪ್ರದರ್ಶನ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಲಾಲ್‌ಬಾಗ್‌ ತೋಟಗಾರಿಕೆ ಮಾಹಿತಿ ಕೇಂದ್ರದಲ್ಲಿ ಬಹುಮಾನ ವಿತರಣೆ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಕಾರ್ಯದರ್ಶಿ ಶಮ್ಲಾ ಇಕ್ಬಾಲ್‌, ಕನ್ನಡ ಚಲನಚಿತ್ರ ಹಿರಿಯ ನಟರಾದ ದೊಡ್ಡಣ್ಣ, ಅಶೋಕ್‌, ನಾಯಕ ನಟ ಶರಣ್‌ ಅವರು ಬಹುಮಾನ ವಿತರಿಸಲಿದ್ದಾರೆ.

Share this article