ಕನ್ನಡಪ್ರಭ ವಾರ್ತೆ ಮೈಸೂರು
ಓದುವ ಹವ್ಯಾಸ, ಸಾಹಿತ್ಯದ ಅಭಿರುಚಿಯಿಂದ ಜೀವನ ಸಂತೋಷದಾಯಕವಾಗಿರುವುದು. ನೆಮ್ಮದಿಯ ಬದುಕನ್ನು ಪುಸ್ತಕಗಳ ಸಾಂಗತ್ಯದಲ್ಲಿ ಕಾಣಬಹುದು. ಪುಸ್ತಕವು ಮನಃಶಾಂತಿಯನ್ನು ತಂದುಕೊಡುವ ಏಕೈಕ ಅಸ್ತ್ರ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದರು.ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ದಾಸೋಹ ಭಾನುವಾರ ಆಯೋಜಿಸಿದ್ದ ಹಿರಿಯ ಲೇಖಕಿ ಪದ್ಮಾ ಆನಂದ್ ಅವರ ತಂಗಾಳಿಯಲ್ಲಿ ವಾಕಿಂಗ್ ಮತ್ತು ಬದುಕು ಬಿಂಬ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಮ್ಮ ಮಿತಿಯಲ್ಲಿ ಸಾಹಿತ್ಯವನ್ನು ಅರಿತರಷ್ಟೇ ಸಾಹಿತ್ಯಕ್ಕೊಂದು ಗೌರವ. ಪ್ರಾತಿನಿಧಿಕ ಕಥೆಗಳನ್ನು ಓದಿ ಅಲ್ಲಿನ ವಸ್ತು, ಆಂತರ್ಯವನ್ನು ಅರಿಯಬೇಕು. ಉತ್ತಮ ಉದ್ದೇಶ ಹೊಂದಿದವನಿಗೆ ಸಮಸ್ಯೆಗಳು ನಗಣ್ಯ. ಕೆಲವರು ಬದುಕನ್ನು ದೂಡಲು ಔಷಧಿಗಳನ್ನು ಬಳಸಿದರೆ, ನಾನು ಬದುಕನ್ನು ಸವಿಯಲು ಪುಸ್ತಕ ಖರೀದಿಸುತ್ತೇನೆ. ಬಿದ್ದವನನ್ನು ಮೇಲೆಬ್ಬಿಸಿ, ಜ್ಞಾನದ ಮೂಲಕ ಬದುಕು ರೂಪಿಸುತ್ತದೆ. ಆದರೆ, ಇಂದು ಪುಸ್ತಕ ಕೊಂಡುಕೊಳ್ಳಲು ಹಿಂದೆ ಮುಂದೆ ಯೋಚಿಸುತ್ತಾರೆ, ರಿಯಾಯಿತಿ ಇದೆಯೇ ಎಂದು ಕೇಳುವವರೆ ಹೆಚ್ಚು ಎಂದು ಅವರು ಬೇಸರ ವ್ಯಕ್ತಪಡಿಸಿದರು.ಅಂಕಗಳ ಆಧಾರದ ಮೇಲೆ ಉದ್ಯೋಗ ನೀಡುತ್ತಾರೆಯೇ ವಿನಃ ಪುಸ್ತಕ ಜ್ಞಾನ, ಪುಸ್ತಕಗಳ ಓದಿಗೆ ಅನುಗುಣವಾಗಿ ಯಾರೂ ಉದ್ಯೋಗ ನೀಡಲಾರರು. ಪ್ರಬುದ್ಧ ಮನಸ್ಸನ್ನು ಪಡೆಯಲು ಕಲೆ, ಸಾಹಿತ್ಯ, ಸಂಗೀತದ ಮೊರೆ ಹೋಗಬೇಕು. ಸಮಯ ನಮಗಾಗಿ ಬರುವುದಿಲ್ಲ, ಹೊರತಾಗಿ ನಮಗಾಗಿ ನಾವೇ ಸಮಯವನ್ನು ರೂಪಿಸಿಕೊಳ್ಳಬೇಕು.
ಸಾಹಿತ್ಯದ ಸೌಂದರ್ಯ ಆರಾಧಿಸಬೇಕು:ಕೃತಿಗಳನ್ನು ಬಿಡುಗಡೆಗೊಳಿಸಿದ ಹಿರಿಯ ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ಸುತ್ತಲಿನ ಸಮಾಜವನ್ನು ಸಕಾರಾತ್ಮಕವಾಗಿ ಕಂಡು ಜ್ಞಾನದ ಬುತ್ತಿಯನ್ನು ಕಟ್ಟಿಕೊಡುವುದು ಸಾಹಿತ್ಯ. ವಿಮರ್ಶೆಯ ಹೆಸರಲ್ಲಿ ಸಾಹಿತ್ಯವನ್ನು ಹಿಗ್ಗಾಮುಗ್ಗ ಎಳೆದು ಬೇರೊಂದು ರೂಪಕ್ಕೆ ಇಂದು ವಿಮರ್ಶಕರು ತರುತ್ತಿದ್ದಾರೆ. ಸಾಹಿತ್ಯದ ನಿಜವಾದ ಸೌಂದರ್ಯವನ್ನು ಆರಾಧಿಸುವಂತಹ ಕಾರ್ಯಗಳಾಗಬೇಕು ಎಂದರು.
ಸಮಾಜ ಇಂದು ಚಿತ್ರ ವಿಚಿತ್ರವಾಗಿದೆ. ಭಾವನಾತ್ಮಕವಾಗಿ ಬದಕುವುದನ್ನೇ ಜನ ಮರೆತಿದ್ದಾರೆ. ಜೀವನವನ್ನು ಆನಂದಿಸುವ ಔದಾರ್ಯವನ್ನು ಸಾಹಿತ್ಯ ಹೇಳಿಕೊಡಬೇಕು. ಇಂದು ಮದುವೆಯಾದ ಕೆಲವೇ ದಿನಗಳಲ್ಲಿ ವಿಚ್ಛೇದನ ಪಡೆಯುವವರ ನಡುವೆ ಸಾಮರಸ್ಯದಿಂದ ಜೀವನ ನಡೆಸುವವರು ತೀರಾ ವಿರಳ. ಹೀಗಾಗುವುದಾದರೆ ಮುಂದೆ ಮದುವೆಗೆ ಅರ್ಥವೇ ಇರುವುದಿಲ್ಲ ಎಂದು ಅವರು ತಿಳಿಸಿದರು.ಕೃತಿಗಳ ಕುರಿತು ಕನ್ನಡ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ, ಶಿಕ್ಷಣ ಇಲಾಖೆಯ ಸಹಾಯಕ ಸಮಗ್ರ ಯೋಜನಾಧಿಕಾರಿ ಜಿ. ವೆಂಕಟಾಚಲ ಮಾತನಾಡಿದರು. ಮೈಸೂರು ಸಾಹಿತ್ಯ ದಾಸೋಹದ ಸಂಸ್ಥಾಪಕಿ ಪದ್ಮಾ ಆನಂದ್, ಕರ್ನಾಟಕ ಮುಕ್ತ ಸಾಹಿತ್ಯ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎಸ್. ರಾಮಪ್ರಸಾದ್, ಚುಕ್ಕೆಚಿತ್ರ ಕಲಾವಿದ ಮೋಹನ್ ವೆರ್ಣೇಕರ್, ಲೇಖಕಿ ಕೆರೋಡಿ ಎಂ. ಲೋಲಾಕ್ಷಿ, ರಂಗನಾಥ್, ಚಂದ್ರಶೇಖರ್ ಇದ್ದರು.
ಇಂದು ಜನ ನೆಮ್ಮದಿಗಾಗಿ ಯಾವುದೋ ಮೂಲವನ್ನು ಹುಡುಕುತ್ತಾರೆ. ನೆಮ್ಮದಿಯನ್ನು ನಾವು ಹುಡುಕುವುದಲ್ಲ, ನೆಮ್ಮದಿಯೇ ನಮ್ಮನ್ನು ಹುಡುಕಿ ಬರುವಂತಹ ಬದುಕು ನಮ್ಮದಾಗಬೇಕು. ಬದುಕನ್ನು ನಾವು ಸುಂದರವಾಗಿರಿಸಿ ಕೊಳ್ಳಬೇಕೆಂದಿಲ್ಲ, ಉತ್ತಮ ಹವ್ಯಾಸವಿದ್ದರೆ ಬದುಕೇ ನಮ್ಮನ್ನು ಸುಂದರವಾಗಿರಿಸುತ್ತದೆ.ಮಾನಸ, ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ