ಕನ್ನಡಪ್ರಭ ವಾರ್ತೆ ಮದ್ದೂರು
ಪರಿಸರ ಜೀವಸಂಕುಲಕ್ಕೆ ದೊರೆತ ವರದಾನ. ಇದನ್ನು ರಕ್ಷಿಸುವುದು ಮಾನವನ ಹೊಣೆಗಾರಿಕೆಯಾಗಿದೆ ಎಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಹೇಳಿದರು.ಪಟ್ಟಣದ ತಾಲೂಕ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕ ಆಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯ ಆಧುನಿಕ ಬದುಕಿನ ಗಿಳಿಗೆ ಬಿದ್ದು ಪರಿಸರವನ್ನು ನಾಶ ಮಾಡುವಲ್ಲಿ ನಿರತನಾಗಿರುವುದು ವಿಪರ್ಯಾಸ ಎಂದರು.
ಪ್ರಕೃತಿ ದೇವರು ಕೊಟ್ಟ ವರ. ಇದನ್ನು ನಾವು ಜಾಗರೂಕತೆಯಿಂದ ನೋಡಿಕೊಂಡರೆ ಪರಿಸರ ನಮ್ಮನ್ನು ರಕ್ಷಣೆ ಮಾಡುತ್ತದೆ. ಅಲ್ಲದೇ, ಮುಂದಿನ ಜನಾಂಗಕ್ಕೂ ಅನುಕೂಲವಾಗುತ್ತದೆ ಎಂದರು.ಪ್ಲಾಸ್ಟಿಕ್ ನಿರ್ವಹಣೆ ಮತ್ತು ಮಿತ ಬಳಕೆಯಿಂದ ನಮ್ಮ ಪರಿಸರ ಮತ್ತು ಭೂಮಿಯನ್ನು ರಕ್ಷಣೆ ಮಾಡಬಹುದು. ಸಮಾಜ ಸೇವಾ ಸಂಸ್ಥೆಗಳು ಪರಿಸರವನ್ನು ರಕ್ಷಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದರು.
ಈ ವೇಳೆ ವಲಯ ಅರಣ್ಯಾಧಿಕಾರಿ ಗವಿಯಪ್ಪ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್ ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು.ಎನ್ಎಸ್ಎಸ್ ಶಿಬಿರ ಮತ್ತು ವಿಶ್ವ ಪರಿಸರ ದಿನ ಆಚರಣೆ
ಮಂಡ್ಯ:ತಾಲೂಕಿನ ಎಚ್.ಮಲ್ಲಿಗೆರೆಯ ಚೆನ್ನಮ್ಮ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಎನ್‌ಎಸ್ ಎಸ್ ಶಿಬಿರ ಮತ್ತು ವಿಶ್ವ ಪರಿಸರ ದಿನ ಆಚರಿಸಲಾಯಿತು.
ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜ್ ಎನ್ಎಸ್ಎಸ್ ಘಟಕ ಮತ್ತು ಚೆನ್ನಮ್ಮ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಮಿತ್ರ ಜಯಶಂಕರ ಮಾತನಾಡಿ, ಗಿಡಗಳನ್ನು ನೆಡುವುದು ಮಾತ್ರವಲ್ಲ ಪ್ರತಿಯೊಬ್ಬರು ನೀರೇರೆದು ಪೋಷಿಸಬೇಕು. ಇಂದಿನ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಷೇಧ ಮಾಡಬೇಕು. ಮುಂದಿನ ಪೀಳಿಗೆಗೆ ಭೂಮಿ, ಪರಿಸರವನ್ನು ಉಳಿಸಲು ಮುಂದಾಗಬೇಕು. ಪ್ಲಾಸ್ಟಿಕ್ ಕಪ್ಪು ಕ್ಯಾರಿ ಬ್ಯಾಗ್ ಗಳ ನಿಷೇಧಕ್ಕಾಗಿ ಎಲ್ಲರೂ ತಪ್ಪದೆ ಮನೆಯಿಂದ ಹೋಗುವಾಗ ಬಟ್ಟೆ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಬಳಸಲು ಸಲಹೆ ನೀಡಿದರು.ಇದೇ ವೇಳೆ ಎಸ್ಪಿ ಎನ್.ಯತೀಶ್, ಪತ್ರಕರ್ತ ಯೋಗೀಶ್ ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ಗಿಡಗಳನ್ನು ಸಹ ನೆಡಲಾಯಿತು. ವಿದ್ಯಾ ವರ್ಧಕ ಕಾಲೇಜಿನಿಂದ ಪ್ರಾಧ್ಯಾಪಕರಾದ ಹೇಮಂತ್ ಕುಮಾರ್ ಮತ್ತು ರಕ್ಷಿತ್ ಕುಮಾರ್ ಇದ್ದರು.