ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಲೋಹಿಯಾನಗರದಲ್ಲಿ ಭಾನುವಾರ ರಾಷ್ಟ್ರೀಯ ಕೋಲಿ ಬೆಸ್ತ ಹಿಂದುಳಿದ ವರ್ಗಗಳ ಮಠಾಧೀಶ್ವರರ ಮಹಾಸಭಾ ವತಿಯಿಂದ ಭಾನುವಾರ ಹಿಂದುಳಿದ ವರ್ಗಗಳ ಮಠಾಧೀಶ್ವರರ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಸಂವಿಧಾನಬದ್ಧವಾಗಿ ವಿವಿಧ ಜನಾಂಗಗಳಿಗೆ ದೊರೆಯಬೇಕಾದ ಮೀಸಲಾತಿ ಒದಗಿಸುವುದು, ಹಿಂದುಳಿದ ಸಮಾಜದ ಮಠ ಸ್ಥಾಪನೆಗೆ ಭೂಮಿ ಮಂಜೂರು ಮಾಡುವುದು, ಅಲೆಮಾರಿ ಮತ್ತು ತೀರಾ ಹಿಂದುಳಿದ ವರ್ಗಗಳ ಜನಾಂಗದ ಗುರುಪೀಠಗಳ ಸ್ಥಾಪನೆ ಮಾಡುವುದು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.ಸಭೆಯ ನಂತರ ಮಾತನಾಡಿದ ಮಹಾಸಭಾ ಅಧ್ಯಕ್ಷ ಬ್ರಹ್ಮಶ್ರೀ ರಾಜು ಗುರುಸ್ವಾಮೀಜಿ, ಸಮಾಜ, ಜನಾಂಗದವರು ತಮ್ಮ ಹಕ್ಕನ್ನು ಪಡೆಯುವುದಕ್ಕಾಗಿ ಹೋರಾಟ ನಡೆಸುವುದು, ನಾಡು, ನುಡಿ ರಕ್ಷಣೆ ಹಾಗೂ ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಜಾಗೃತಿ ಮೂಡಿಸುವುದು, ಇದಕ್ಕಾಗಿ ರಾಷ್ಟ್ರೀಯ ಸಂಘಟನೆ ಸ್ಥಾಪನೆ ಮಾಡಲು ಕೂಡ ತೀರ್ಮಾನಿಸಲಾಯಿತು ಎಂದು ಮಾಹಿತಿ ನೀಡಿದರು.
ಹುಬ್ಬಳ್ಳಿಯ ರಾಜ ವಿದ್ಯಾಶ್ರಮದ ಜ. ಷಡಕ್ಷರಿ ಶ್ರೀಗಳು, ಶಿಕ್ಕಲಿಗಾರ ಸಮಾಜ ಪೀಠದ ಆಚಾರ್ಯ ರಾಘವೇಂದ್ರ ಶ್ರೀಗಳು, ಉಪ್ಪಾರ ಪೀಠದ ಭಗೀರಥಾನಂದಪುರಿ ಶ್ರೀಗಳು, ಬಂಜಾರ ಪೀಠದ ಜ. ಕುಮಾರ ದೇವು, ಅಂಬಿಗರ ಪೀಠದ ಶಾಂತಗುರು ಸಿದ್ದಲಿಂಗ ಸ್ವಾಮೀಜಿ, ಸಿಂದಗಿ ಗಣೇಶಾನಂದ ಸ್ವಾಮೀಜಿ, ಹೂಗಾರ ಪೀಠದ ಗಜಾನನ ಸ್ವಾಮೀಜಿ, ಬಾದಾಮಿ ವಿಶ್ವಕರ್ಮ ಪೀಠದ ಜಗದೀಶಾನಂದ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಚಿಂತನ ಮಂಥನ ಸಭೆಯಲ್ಲಿ ಪಾಲ್ಗೊಂಡಿದ್ದರು.ಅದ್ಧೂರಿ ಬೀಳ್ಕೊಡುಗೆ
ರಾಷ್ಟ್ರೀಯ ಕೋಲಿ ಬೆಸ್ತ ಹಿಂದುಳಿದ ವರ್ಗಗಳ ಮಠಾಧೀಶ್ವರರ ಮಹಾಸಭಾ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಹಿಂದುಳಿದ ವರ್ಗಗಳ ಮಠಾಧೀಶ್ವರರ ಹಾಗೂ ಜನಾಂಗದ ಪ್ರಮುಖ ನಾಯಕರ ಚಿಂತನ ಮಂಥನ ಸಭೆಗೆ ಆಗಮಿಸಿದ ವಿವಿಧ ಮಠಾಧೀಶರನ್ನು ಶ್ರೀ ಸಿದ್ದಾರೂಢ ಮಠದಲ್ಲಿ ಸ್ವಾಗತಿಸಿ ಬೀಳ್ಕೊಡಲಾಯಿತು.ಶ್ರೀಮಠದಲ್ಲಿ ಉಭಯ ಆರೂಢರ ಗದ್ದುಗೆಗೆ ಪೂಜೆ ಸಲ್ಲಿಸಿದ ಶ್ರೀಗಳು ನಂತರ ಸಭೆಗೆ ತೆರಳಿದರು. ಈ ಸಂದರ್ಭದಲ್ಲಿ ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್‌ಮನ್ ಬಸವರಾಜ ಕಲ್ಯಾಣಶೆಟ್ಟರ್, ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಮುಖಂಡರಾದ ದತ್ತಾತ್ರೇಯ ರಡ್ಡಿ, ಉಮೇಶ ಮುದ್ದಾಳ, ಗಂಗಾಧರ ದೊಡ್ಡವಾಡ, ಕಿಶನ್ ಬಿಲಾನ, ಈಶ್ವರ ಶಿರಕೋಳ, ವಿರೂಪಾಕ್ಷಪ್ಪ ಕಳ್ಳಿಮನಿ ಸೇರಿದಂತೆ ಹಲವರಿದ್ದರು.