ಕೀಟ ಮತ್ತು ರೋಗಬಾಧೆ ಕಾಟದಿಂದ ಆತಂಕ । ಪರ್ಯಾಯ ಬೆಳೆಯತ್ತ ವಾಲುತ್ತಿರುವ ಬೆಳೆಗಾರರುವಿಶೇಷ ವರದಿ
ಕನ್ನಡಪ್ರಭ ವಾರ್ತೆ ಹಾವೇರಿಜಿಲ್ಲೆಯ ಮಾವಿನ ತೋಟಗಳು ಹೂಗಳಿಂದ ನಳನಳಿಸುತ್ತಿದ್ದು, ಬರಗಾಲದಲ್ಲೂ ಭರ್ಜರಿ ಬೆಳೆ ಬರುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಆದರೆ, ಕೀಟ ಮತ್ತು ರೋಗಬಾಧೆ ಕಾಟ ರೈತರನ್ನು ಕಾಡುತ್ತಿದೆ. ಪ್ರತಿವರ್ಷ ಒಂದಿಲ್ಲೊಂದು ವಿಕೋಪದಿಂದ ಕಂಗೆಡುತ್ತಿರುವ ಬೆಳೆಗಾರರು ಮಾವು ಬೆಳೆ ಕೈಬಿಟ್ಟು ಪರ್ಯಾಯ ಬೆಳೆಯತ್ತ ವಾಲುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಜಿಲ್ಲಾದ್ಯಂತ ಮಾವಿನ ತೋಟಗಳಲ್ಲಿ ಹೂಗಳಿಂದ ತುಂಬಿರುವ ಗಿಡಗಳು ಕಾಣುತ್ತಿವೆ. ಕೆಲವು ಕಡೆ ಮುಂಚಿತವಾಗಿ ಹೂಬಿಟ್ಟು ಈಗಾಗಲೇ ಅಡಕೆ ಗಾತ್ರದ ಕಾಯಿ ಕಟ್ಟಿದೆ. ಇನ್ನು ಕೆಲವು ಕಡೆ ಕಡಲೆ ಗಾತ್ರದಲ್ಲಿವೆ.ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಮಾವು ಬೆಳೆಯನ್ನು ಗುರುತಿಸಿದೆ. ಆದರೆ ಜಿಲ್ಲೆಯ ಮಾವು ಬೆಳೆಗಾರರು ಈ ಬೆಳೆಯಿಂದಲೇ ವಿಮುಖರಾಗುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಹವಾಮಾನ ವೈಪರೀತ್ಯ, ಕೀಟ ಹಾಗೂ ರೋಗಬಾಧೆ, ಅಧಿಕ ಖರ್ಚು ಕಡಿಮೆ ಆದಾಯದಿಂದ ಪ್ರತಿವರ್ಷ ಒಂದಿಲ್ಲೊಂದು ಸಂಕಷ್ಟಕ್ಕೆ ರೈತರು ತುತ್ತಾಗುತ್ತಿದ್ದಾರೆ.
ಪ್ರಸಕ್ತ ವರ್ಷ ಮಳೆ ಕೈಕೊಟ್ಟು ಬರಗಾಲ ಆವರಿಸಿದ್ದು, ಕಷ್ಟಪಟ್ಟು ಮಾವಿನ ತೋಪುಗಳನ್ನು ಕಾಪಾಡಿಕೊಂಡು ರೈತರು ಉತ್ತಮ ಫಸಲು ನಿರೀಕ್ಷೆಯಲ್ಲಿದ್ದಾರೆ. ಆದರೆ, ಕೀಟ, ರೋಗಬಾಧೆಯಿಂದ ಕೆಲವು ಕಡೆ ಹೂವು, ಮಿಡಿಗಾಯಿ ಉದುರುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.ಪರ್ಯಾಯ ಬೆಳೆಗಳತ್ತ ಚಿತ್ತ:
ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಮಾವು ಬೆಳೆಯನ್ನು ಗುರುತಿಸಿದೆ. ಆದರೆ ಜಿಲ್ಲೆಯ ಮಾವು ಬೆಳೆಗಾರರು ಹವಾಮಾನ ವೈಪರೀತ್ಯ, ಮಾರುಕಟ್ಟೆ ಕೊರತೆ, ಕೋಲ್ಡ್ ಸ್ಟೋರೇಜ್ ಸೇರಿದಂತೆ ಮಾವು ಸಂರಕ್ಷಣೆಗೆ ಮೂಲ ಸೌಕರ್ಯ ಇಲ್ಲದಿರುವುದು, ಅಧಿಕ ಖರ್ಚು ಕಡಿಮೆ ಆದಾಯದಿಂದ ಬೇಸತ್ತು ಮಾವು ಕೃಷಿಯಿಂದಲೇ ವಿಮುಕ್ತರಾಗಿ ಪರ್ಯಾಯ ಬೆಳೆಗಳ ಚಿತ್ತ ಹರಿಸುತ್ತಿದ್ದಾರೆ. ೨೦೧೯-೨೦ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೫೫೦೯ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿತ್ತು, ಪ್ರಸಕ್ತ ವರ್ಷ ೫೨೧೯ ಹೆಕ್ಟೇರ್ ಪ್ರದೇಶಕ್ಕೆ ಇಳಿಕೆಯಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವು ಕ್ಷೇತ್ರ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಮಾವು ಬೆಳೆಯುವ ಪ್ರದೇಶ ಕುಂಠಿತಗೊಳ್ಳುತ್ತಿರುವುದು ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ ಸಾಕಾರಗೊಳ್ಳುವುದೇ ಎಂಬ ಪ್ರಶ್ನೆ ಮೂಡಿದೆ.ಕೀಟ, ರೋಗಬಾಧೆ:
ಬರಗಾಲದ ಮಧ್ಯೆಯೂ ಈ ಬಾರಿ ನಿರೀಕ್ಷೆಗೂ ಮೀರಿ ಮಾವಿನ ತೋಟಗಳಲ್ಲಿನ ಮರಗಳು ಹೂವು ಬಿಟ್ಟು ಕಾಯಿಕಟ್ಟುತ್ತಿರುವುದು ಸಹಜವಾಗಿಯೇ ಮಾವು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಆದರೆ, ಹೂವು ಬಿಡುವ ಸಂದರ್ಭದಲ್ಲಿ ಕಾಡುತ್ತಿರುವ ಜಿಗಿಹುಳು, ಹೂತೆನೆ, ಕುಡಿ ಕೊರಕ, ಥ್ರೀಪ್ಸ್, ನುಸಿ, ತಿಗಣೆ, ಒಟೆ ಕೊರಕ ಹಾಗೂ ರೋಗಗಳಾದ ಹೂತೆನೆ ಕಪ್ಪಾಗುವುದು, ಬೂದಿ ರೋಗ, ಕಾಡಿಗೆ ರೋಗ ಮಾವಿನ ಮರಗಳಿಗೆ ಇನ್ನಿಲ್ಲದಂತೆ ಕಾಡುತ್ತಿರುವುದು ಮಾವು ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಕೀಟ ಹಾಗೂ ರೋಗಬಾಧೆ ನಿಯಂತ್ರಣಕ್ಕೆ ಜಿಲ್ಲೆಯ ರೈತರು ಸಾವಿರಾರು ರು. ಮೊತ್ತದ ಔಷಧಗಳನ್ನು ಸಿಂಪಡಿಸುವುದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.ಹಾನಗಲ್ಲ, ಶಿಗ್ಗಾಂವಿಯಲ್ಲಿ ಹೆಚ್ಚು:
ಜಿಲ್ಲೆಯ ಮಾವು ಕೃಷಿಯಲ್ಲಿ ಹಾನಗಲ್ಲ ತಾಲೂಕು ೩೪೩೮ ಹೆಕ್ಟೇರ್ ಪ್ರದೇಶದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ೧೪೦೫ ಹೆಕ್ಟೇರ್ ಮೂಲಕ ಶಿಗ್ಗಾಂವಿ ತಾಲೂಕಿದೆ. ಬ್ಯಾಡಗಿ ಹಾಗೂ ಹಾವೇರಿ ತಾಲೂಕು ತಲಾ ೧೦೦ ಹೆಕ್ಟೇರ್ ಪ್ರದೇಶದೊಂದಿಗೆ ಮೂರನೇ ಸ್ಥಾನದಲ್ಲಿವೆ. ಕೀಟ, ರೋಗಬಾಧೆ ಮಧ್ಯೆಯೂ ಈ ಬಾರಿ ಹವಾಮಾನ ಮಾವು ಬೆಳೆಗಾರರನ್ನು ಕೈಹಿಡಿದು ಹೆಚ್ಚಿನ ಇಳುವರಿ ನಿರೀಕ್ಷಿಸಲಾಗಿದೆ.