ಸೊರಬ ತಾಲೂಕಿನ ಗದ್ದೆ-ತೋಟಗಳಲ್ಲಿ ಸಂಭ್ರಮದ ಭೂಮಿಪೂಜೆ

KannadaprabhaNewsNetwork |  
Published : Oct 29, 2023, 01:01 AM IST
ಫೋಟೊ:೨೮ಕೆಪಿಸೊರಬ೨೮-೦೧ : ಸೊರಬ ಹಿರೇಶಕುನ ಗ್ರಾಮದ ತೋಟದಲ್ಲಿ ಚಿಣ್ಣರು ಭೂಮಿ ಹುಣ್ಣಿಮೆ ಅಂಗವಾಗಿ ಭೂದೇವಿಗೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಚರಗ ಚೆಲ್ಲಿ ಸಂಪ್ರದಾಯ ಮೆರೆದ ರೈತರು

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನಾದ್ಯಂತ ರೈತರು ಭೂಮಿ ಹಾಗೂ ಬೆಳೆಯನ್ನು ಸಡಗರದಿಂದ ಪೂಜಿಸಿ ಭೂಮಿ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಶನಿವಾರ ಆಚರಿಸಿದರು.

ಭೂಮಿಯನ್ನು ಹೆಣ್ಣಿನಂತೆ ಗೌರವಿಸಿ, ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವಂತೆ, ತೆನೆಯೊಡೆಯುವ ಬೆಳೆಗೆ ಕೃಷಿ ಕುಟುಂಬಗಳು ಪೂಜೆ ಸಲ್ಲಿಸಿ, ಎಡೆ ಸಮರ್ಪಿಸಿದರು. ಮುಂಜಾನೆಯೇ ಅಲಂಕೃತ ಭೂಮಣ್ಣಿ ಬುಟ್ಟಿಯಲ್ಲಿ ಚರಗ ತುಂಬಿಕೊಂಡು ರೈತರು ಹೊಲ-ಗದ್ದೆ, ತೋಟಗಳಿಗೆ ಸಾಗಿ ‘ಹಚ್ಚಂಬ್ಲಿ ಹರಬಿಸೊಪ್ಪು ಹಿತ್ತಲಾಗಿರೋ ದಾರಿರೆಕಾಯಿ ಭೂಂಕವ್ವನ ಬಯ್ಕೆಬಾನ ಎದ್ದೆದ್ ಉಣ್ಣೆ ಭೂಂಕವ್ವೋ.. ಹೋಯ್ ಹೋಯ್’ ಎಂದು ಕೂಗುತ್ತ ಹೊಲಕ್ಕೆಲ್ಲಾ ಚೆಲ್ಲಿದರು.

ಮಧ್ಯಾಹ್ನ 12 ಗಂಟೆ ನಂತರ ಕುಟುಂಬದವರೆಲ್ಲರೂ ತಮ್ಮ ಬೆಳೆಗೆ ಸೀರೆ-ಕುಬಸ, ತಾಳಿ, ಮೂಗುತಿ ತೊಡಿಸಿ, ಸ್ತ್ರೀರೂಪದಲ್ಲಿ ಪೈರನ್ನು ವಿಶೇಷವಾಗಿ ಪೂಜಿಸಿದರು. ಬಳಿಕ ಅಲ್ಲಿಯೇ ಮನೆಮಂದಿಯೆಲ್ಲ ಊಟ ಮಾಡಿದರು. ಬೆಳೆ, ಕಾಗೆ, ಇಲಿಗಳಿಗೆ ಒಂದೊಂದು ಎಡೆ ನೀಡುವುದು ಈ ಆಚರಣೆಯಲ್ಲಿನ ಸಂಪ್ರದಾಯವೂ ಹೌದು. ಒಂದು ಕೊಟ್ಟೆ ಕಡುಬನ್ನು ಜಮೀನಿನಲ್ಲಿ ಹೂತು, ಆ ಜಮೀನಿನ ಬೆಳೆಯನ್ನು ಒಕ್ಕಲು ಮಾಡುವ ಸಂದರ್ಭದಲ್ಲಿ ಕಿತ್ತು ತಿನ್ನುವ ಸಂಪ್ರದಾಯ ಮಳೆನಾಡಿನಲ್ಲಿದೆ.

ಭೂಮಿಯು ಜನ-ಜಾನುವಾರುಗಳ ಮೇಲೆ ಕರುಣೆ ತೋರಿ ಮುಂದಿನ ದಿನಗಳಲ್ಲಿ ಮಳೆ ಹೊಯ್ದು ಉತ್ತಮ ಬೆಳೆ ನೀಡಬೇಕು. ರೈತರ ಸಂಕಷ್ಟಗಳು ದೂರವಾಗಿ ಮುಖದಲ್ಲಿ ಮಂದಹಾಸ ಕಾಣುವಂತಾಗಲಿ ಎಂದು ಕೃಷಿಕರು ಭೂಮಿ ತಾಯಿಯಲ್ಲಿ ಪ್ರಾರ್ಥಿಸಿದರು.

ವಿಶೇಷವಾಗಿ ಹೋಳಿಗೆ, ಕೊಟ್ಟೆ ಕಡುಬು, ಸಿಹಿ ಕಡುಬು, ಸಾಂಬಾರು ಬುತ್ತಿ, ಕಜ್ಜಾಯ, ಹುಳಿ ಚಿತ್ರನ್ನ, ಮೊಸರಿನ ಬುತ್ತಿ, ಕರ್ಜಿಕಾಯಿ, ರೊಟ್ಟಿ, ಪುಂಡಿ ಪಲ್ಯೆ, ಎಣ್ಣೆಗಾಯಿ ಪಲ್ಯೆ, ಕಿಚಡಿ, ಅಕ್ಕಿಹುಗ್ಗಿ, ಚಟ್ನಿ, ಕರಿಂಡಿ, ಇತ್ಯಾದಿ ಭಕ್ಷ್ಯಗಳನ್ನು ತಯಾರಿಸಿ, ಮನೆ ಮಂದಿಯೆಲ್ಲ ಒಟ್ಟಾಗಿ, ಸುತ್ತಮುತ್ತಲಿನ ಜನರನ್ನೂ ಕರೆದುಕೊಂಡು ಹೊಲಗಳಿಗೆ ತೆರಳಿ, ಪೂಜಿಸಿ ಭೋಜನ ಮಾಡುವ ಸಂಭ್ರಮ ಕಂಡುಬಂದಿತು.

- - - -28ಕೆಪಿಸೊರಬ01: ಸೊರಬ ಹಿರೇಶಕುನ ಗ್ರಾಮದ ತೋಟದಲ್ಲಿ ಚಿಣ್ಣರು ಭೂಮಿ ಹುಣ್ಣಿಮೆ ಅಂಗವಾಗಿ ಭೂದೇವಿಗೆ ಪೂಜೆ ಸಲ್ಲಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ