ಗದಗ: ಜಾತಿ ಜನಗಣತಿಯನ್ನು ನಾಲ್ಕು ಗೋಡೆ ಮಧ್ಯೆ ನಡೆಸಲಾಗಿದೆ. ಅದರಲ್ಲಿಯೂ ಲಿಂಗಾಯತ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಗಣತಿ ಮಾಡಿದ್ದು, ಅದನ್ನು ಬಲವಾಗಿ ವಿರೋಧಿಸುತ್ತೇವೆ. ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಸಹಿ ಸಂಗ್ರಹ ಚಳವಳಿ ಆರಂಭವಾಗಿದೆ. ನಾನು ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಜಾತಿ ಗಣತಿ ವಿರೋಧಿಸಿ ಸಹಿ ಹಾಕಿದ್ದೇವೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮ್ಮೇಳನದಲ್ಲಿ ಗದಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತೇವೆ, ಜಾತಿ ಗಣತಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತೇವೆ. ಯಾರಿಗೆ ಏನು ಸಿಗಬೇಕೋ, ಯಾವ ಯಾವ ಜಾತಿಗೆ ಎಷ್ಟು ಸೌಲಭ್ಯ ಸಿಗಬೇಕೋ ಅದು ಅವರ ಹಕ್ಕು ಅದು ದೊರೆಯಬೇಕು. ಆದರೆ ಅದು ಜನಸಂಖ್ಯೆಯ ಅನುಗುಣವಾಗಿ ಸಿಗಬೇಕು ಎನ್ನುವುದು ನಮ್ಮ ಅಭಿಪ್ರಾಯ, ಸಂವಿಧಾನ ಬದ್ಧವಾಗಿ ಎಲ್ಲರಿಗೂ ಸೌಲಭ್ಯ ಸಿಗಬೇಕು ಅದಕ್ಕೆ ನಮ್ಮ ವಿರೋಧವಿಲ್ಲ, ಎಲ್ಲೋ ನಾಲ್ಕು ಗೋಡೆಗಳ ಮಧ್ಯೆ ಕುಳಿತು, ಅಲ್ಲೇ ಗಣತಿ ಮಾಡಿದಂತೆ ಸಿದ್ಧಪಡಿಸಿಕೊಂಡಿರುವ ಜಾತಿಗಣತಿಗೆ ಮಾತ್ರ ನಮ್ಮ ವಿರೋಧವಿದೆ. ಹೊಸದಾಗಿ ಜಾತಿಗಣತಿಯಾಗಬೇಕು ಎನ್ನುವುದು ನಮ್ಮ ಬಲವಾದ ಆಗ್ರಹ ಎಂದರು. ಜಾತಿಗಣತಿ ವರದಿ ಇನ್ನೂ ಸಲ್ಲಿಸಿಲ್ಲ, ಈಗಲೇ ಅದನ್ನು ವಿರೋಧಿಸುವುದು ಎಷ್ಟು ಸರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಸಿ.ಸಿ.ಪಾಟೀಲ, ಸಿದ್ದರಾಮಯ್ಯ ವಕೀಲರಿದ್ದಾರೆ, ಹಿರಿಯ ರಾಜಕಾರಣಿಗಳು, ವಿಶೇಷ ಜಾಣ್ಮೆಯನ್ನು ಹೊಂದಿದ್ದಾರೆ. ಈಗಿರುವ ಜಾತಿ ಗಣತಿಯನ್ನು ಮನೆ ಮನೆ ಸಂಚರಿಸಿ ಮಾಡಿದ್ದಾರೋ ಅಥವಾ ನಾಲ್ಕು ಗೋಡೆ ಮಧ್ಯೆ ಕುಳಿತು ಮಾಡಿದ್ದಾರೆ ಎನ್ನುವ ಬಗ್ಗೆ ಅವರು ಸ್ಪಷ್ಟನೆ ನೀಡಲಿ, ಯಾವ ಊರಿಗೆ, ಯಾರು ಹೋಗಿ ಗಣತಿ ಮಾಡಿದ್ದಾರೆ. ಇದರಲ್ಲಿ ಎಷ್ಟು ಜನ ಸಿಬ್ಬಂದಿ ಇದ್ದರು ಅವರೆಲ್ಲಾ ಹೇಗೆ ಗಣತಿ ಮಾಡಿದ್ದಾರೆ ಎನ್ನುವುದನ್ನು ರಾಜ್ಯದ ಜನತೆಗೆ ತಿಳಿಸಲಿ. ನಾವು ಈ ಜಾತಿ ಗಣತಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತೇವೆ ಎಂದರು.ರಾಹುಲ್ ಹುಡುಗ ಬುದ್ಧಿ: ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ ಬ್ಯಾನರ್ಜಿ ಅವರು ಉಪರಾಷ್ಟ್ರಪತಿಗಳ ಅಣಕು ಪ್ರದರ್ಶನ ಮಾಡಿರುವುದು ದೊಡ್ಡ ಅಪರಾಧ, ಅದನ್ನು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಚಿತ್ರೀಕರಿಸುತ್ತಾರೆ. ಇದರಿಂದ ಸ್ಪಷ್ಟವಾಗುತ್ತದೆ ರಾಹುಲ್ ಗಾಂಧಿ ಅವರು ಇಂದಿಗೂ ಮಕ್ಕಳ ಮನಸ್ಥಿತಿ ಹೊಂದಿದ್ದಾರೆ ಎನ್ನುವುದು. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಸ್ಥಾನಕ್ಕೆ ಸೂಚಿಸಿದ ಬೆನ್ನಲ್ಲೆ ನೆಹರು ಕುಟುಂಬದ ರಾಜಕೀಯದ ಅಂತ್ಯ ಎಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಕಾರಣಕ್ಕಾಗಿ ಅವರ ಹೆಸರು ಘೋಷಣೆ ಮಾಡಿದ್ದಾರೆ. ಅದಕ್ಕಾಗಿ ಅದನ್ನು ಖರ್ಗೆ ಅವರು ನಯವಾಗಿ ತಿರಸ್ಕರಿಸಿದ್ದಾರೆ ಎಂದರು.
ನಿಷ್ಕ್ರೀಯ ಸರ್ಕಾರ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾದರೂ ಅಭಿವೃದ್ಧಿ ಕಾಮಗಾರಿಗಳಿಗೆ ಒಂದೇ ಒಂದು ಗುದ್ದಲಿ ಪೂಜೆ ನಡೆದಿಲ್ಲ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡ ಸ್ಥಳದಲ್ಲಿ ಇಬ್ಬರು ಶಾಸಕರಿದ್ದಾರೆ. ಜನಪ್ರತಿನಿಧಿ ಒಬ್ಬರಾದರೆ, ಪರಾಭವಗೊಂಡ ಕಾಂಗ್ರೆಸ್ ಅಭ್ಯರ್ಥಿಯೂ ಶಾಸಕರಂತೆ ವರ್ತಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡ ಅಪರಾಧ ಎಂದ ಅವರು, ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿಯ ವಂಟಮುರಿ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡಿಲ್ಲ. ಸಿದ್ದರಾಮಯ್ಯ ಈ ಮೊದಲಿನಂತೆ ದೃಢ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ ಎನ್ನಿಸುತ್ತಿದೆ. ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಶಾಸಕ ಸಿ.ಸಿ.ಪಾಟೀಲ್ ದೂರಿಸದರು.