ಅನಂತಕುಮಾರ್
ಕನ್ನಡಪ್ರಭ ವಾರ್ತೆ ಭದ್ರಾವತಿತಾಲೂಕಿನ ಭದ್ರಾ ಜಲಾಶಯ ಮಧ್ಯ ಕರ್ನಾಟಕದ ರೈತರ ಜೀವನಾಡಿಯಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ರೈತರಿಗೆ ವ್ಯವಸಾಯ ಹಾಗೂ ಗದಗ-ಬೆಟಗೇರಿ ಪಟ್ಟಣದವರೆಗೂ ಜನರಿಗೆ ಕುಡಿಯುವ ನೀರಿಗೆ ಆಧಾರವಾಗಿದೆ. ಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ರೈತರು ಭತ್ತ, ಕಬ್ಬು, ಅಡಕೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿರುತ್ತಾರೆ. ಇದೀಗ ಜಲಾಶಯದಲ್ಲಿ ನೀರಿನ ಕೊರತೆ ಇಲ್ಲದಿದ್ದರೂ ಸಹ ಎಡದಂಡೆ ನಾಲೆ ರೈತರು ಬೆಳೆ ಬೆಳೆಯದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಒಂದೆಡೆ ರೈತರು ಆತಂಕಕ್ಕೆ ಒಳಗಾಗಿದ್ದರೆ, ಮತ್ತೊಂದೆಡೆ ಜಲಾಶಯದ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬಲದಂಡೆ ನಾಲೆಯಲ್ಲಿ ಅವೈಜ್ಞಾನಿಕ ಕಾಮಗಾರಿ :ಮಧ್ಯ ಕರ್ನಾಟಕದ ಬೃಹತ್ ಜಲಾಶಯದ ಸುರಕ್ಷತೆಯನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರ ೧೬೬೦ ಹಳ್ಳಿಗಳಿಗೆ ಕುಡಿಯಲು ನೀರನ್ನು ಒದಗಿಸುವ ಬೃಹತ್ ಕಾಮಗಾರಿಯನ್ನು ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ (ಬಫರ್ ಜೋನ್‌ನಲ್ಲಿ) ಕೈಗೊಂಡಿದೆ. ಈ ಕಾಮಗಾರಿ ಕೈಗೊಂಡಿರುವ ಪ್ರದೇಶವು ಅತೀ ಸೂಕ್ಷ್ಮ ಪ್ರದೇಶವಾಗಿರುತ್ತದೆ. ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಬಾರದೆಂಬ ನಿಯಮಾವಳಿಗಳಿದ್ದರೂ ಬಹುಗ್ರಾಮ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲು ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ ನಡೆಸುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿರುತ್ತದೆ.
ಜಲಾಶಯದ ನಿರ್ಬಂಧಿತ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜಲಾಶಯ ತುಂಬಿದಾಗ ನೀರಿನ ಒತ್ತಡದಿಂದಾಗಿ ಯಾವುದೇ ರೀತಿಯ ಅಪಾಯಗಳು ಸಂಭವಿಸಬಹುದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಮಳೆಬಿದ್ದು ಗುಡ್ಡಗಳು ಕುಸಿಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇವೆಲ್ಲವನ್ನೂ ಸರ್ಕಾರ ಮನಗಂಡಿದ್ದರೂ ಜಲಾಶಯದ ಸುರಕ್ಷತೆ ಮತ್ತು ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಈ ಕಾಮಗಾರಿ ಕೈಗೊಂಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.ಎಡದಂಡೆ ನಾಲೆಯಲ್ಲಿ ಕಳಪೆ ಕಾಮಗಾರಿ :
ಬಲದಂಡೆ ನಾಲೆಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಎಡದಂಡೆ ನಾಲೆಯಲ್ಲಿ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.ಎಡದಂಡೆ ನಾಲೆಯ ಮುಖ್ಯ ಗೇಟ್‌ನಲ್ಲಿ ನೀರಿನ ಸೋರಿಕೆ ತಡೆಯಲು ಕಾಮಗಾರಿ ನಡೆಸಲಾಗುತ್ತಿದ್ದು, ದೊಡ್ಡ ಮಟ್ಟದ ಅಂಡರ್ ವಾಟರ್ ಮತ್ತು ದೊಡ್ಡ ಮಟ್ಟದ ಗೇಟ್ ಅಳವಡಿಸಿರುವ ಕಾಮಗಾರಿಗಳನ್ನು ನಿರ್ವಹಿಸಿರುವ ಪ್ರಮಾಣ ಪತ್ರ ಪಡೆಯದಿರುವ ಉತ್ತರ ಪ್ರದೇಶದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈ ಕಂಪನಿಗೆ ಕಾಮಗಾರಿ ನಡೆಸಿರುವ ಕುರಿತು ಅನುಭವ ಇಲ್ಲದಿರುವುದು ಆರಂಭದಲ್ಲಿಯೇ ತಿಳಿಯುತ್ತಿದ್ದು, ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಅವಧಿಯಲ್ಲಿ ಕಾಮಗಾರಿ ನಡೆಸಬೇಕಿತ್ತು. ಆದರೆ ಅದನ್ನು ಮಾಡದೆ ಜಲಾಶಯ ಭರ್ತಿಯಾಗುತ್ತಿರುವ ಸಂದರ್ಭದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ಜಲಾಶಯದ ಮುಖ್ಯಗೇಟ್ ತೆಗೆದು ಹಾಕಲಾಗಿದ್ದು, ಅಂದಾಜಿನ ಪ್ರಕಾರ ಈ ಕಾಮಗಾರಿ ಮುಕ್ತಾಯಗೊಳ್ಳಲು ಇನ್ನೂ ೨-೩ ತಿಂಗಳು ಬೇಕಾಗಿರುತ್ತದೆ. ಆದರೆ ೪೫ ದಿನಗಳಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆ ರೈತ ಮುಖಂಡರದ್ದಾಗಿದೆ.
ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ:ಎಡದಂತೆ ನಾಲೆಯಲ್ಲಿ ಮುಖ್ಯಗೇಟ್ ಅಳವಡಿಸುವ ಕಾಮಗಾರಿ ಕೈಗೊಂಡಿರುವ ಹಿನ್ನಲೆಯಲ್ಲಿ ೪೫ ದಿನಗಳ ವರೆಗೆ ನಾಲೆಯಲ್ಲಿ ನೀರು ಹರಿಸುವುದಿಲ್ಲ. ಈ ಹಿನ್ನಲೆಯಲ್ಲಿ ರೈತರು ಯಾವುದೇ ಬೆಳೆ ಬೆಳೆಯದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿ ವರ್ಷ ಜಲಾಶಯದ ನೀರನ್ನು ನಂಬಿಕೊಂಡು ಬದುಕುತ್ತಿರುವ ರೈತರು ಭತ್ತ, ಮುಸುಕಿನ ಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬಹುಮುಖ್ಯವಾಗಿ ಭತ್ತದ ಬೆಳೆ ಬೆಳೆಯಲೇ ಬೇಕಾಗಿದೆ. ಜಾನುವಾರುಗಳಿಗೆ ಮೇವು ಅಗತ್ಯವಿರುವುದರಿಂದ ಭತ್ತದ ಬೆಳೆ ಅನಿವಾರ್ಯವಾಗಿದೆ. ಬಹುತೇಕ ಕೃಷಿಕರು ಹಾಲು ಮಾರಾಟ ಮಾಡಿ ಬದುಕುತ್ತಿದ್ದಾರೆ. ಬೆಳೆ ಬೆಳೆಯದಿದ್ದರೆ ಸಂಕಷ್ಟ ಎದುರಾಗಲಿದೆ. ಈ ಹಿನ್ನಲೆಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ರೈತರಿಗೆ ಪರ್ಯಾಯ ವ್ಯವಸ್ಥೆ ಕೈಗೊಂಡು ಕಾಮಗಾರಿ ಮುಂದುವರೆಸಬೇಕೆಂಬುದು ರೈತರ ಮುಖಂಡರ ಒತ್ತಾಯವಾಗಿದೆ.
ದೊಡ್ಡ ಅಪಾಯ ಎದುರಾಗುವ ಸಾಧ್ಯತೆ :ಪ್ರಸ್ತುತ ಜಲಾಶಯದಲ್ಲಿ ಕೈಗೊಳ್ಳಲಾಗುತ್ತಿರುವ ಬಲದಂಡೆ ಅವೈಜ್ಞಾನಿಕ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಿ ಕೈಗೊಂಡಿರುವ ಕಾಮಗಾರಿ ಸ್ಥಳವನ್ನು ಮೊದಲಿನಂತೆ ಭದ್ರಪಡಿಸಬೇಕಾಗಿದೆ. ಒಂದು ವೇಳೆ ವಿಳಂಬದಲ್ಲಿ ಮಳೆ ಅಧಿಕವಾಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದಲ್ಲಿ ಬಲದಂಡೆಯೇ ಸಂಪೂರ್ಣ ನಾಶವಾಗುವ ಭೀತಿ ಎದುರಾಗಲಿದೆ. ಮತ್ತೊಂದೆಡೆ ಎಡದಂಡೆ ಮುಖ್ಯ ಗೇಟ್ ಅಳವಡಿಕೆ ಕಾಮಗಾರಿ ಸಹ ಮೊದಲಿನಂತೆ ಕಾಯ್ದುಕೊಳ್ಳಬೇಕಾಗಿದೆ. ಒಂದು ವೇಳೆ ವಿಳಂಬವಾದಲ್ಲಿ ಹೊಸಪೇಟೆ ಜಲಾಶಯದಲ್ಲಿ ಕಳೆದ ವರ್ಷ ಸಂಭವಿಸಿದ ದುರಂತ ಮರುಕಳುಹಿಸುವ ಸಾಧ್ಯತೆ ಇಲ್ಲಿ ತಳ್ಳಿ ಹಾಕುವಂತಿಲ್ಲ. ಜಲಾಶಯದಲ್ಲಿನ ಅಪಾರ ಪ್ರಮಾಣದ ನೀರು ಪೋಲಾಗುವ ಭೀತಿ ಎದುರಾಗಿದೆ.
ಒಟ್ಟಾರೆ ಭದ್ರಾ ಜಲಾಶಯ ವ್ಯಾಪ್ತಿಯ ರೈತರು ಒಂದಡೆ ಅವೈಜ್ಞಾನಿಕ ಕಾಮಗಾರಿ, ಮತ್ತೊಂದೆಡೆ ಕಳಪೆ ಕಾಮಗಾರಿ ಭೀತಿಯಲ್ಲಿ ನಲುಗಿಹೋಗಿದ್ದಾರೆ. ಸರ್ಕಾರ ರೈತರ ಭೀತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.------------------
ಭದ್ರಾ ಜಲಾಶಯದಲ್ಲಿ ಪ್ರಸ್ತುತ ಪ್ರಗತಿಯಲ್ಲಿರುವ ಎರಡು ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸಿ ರೈತರ ಹಿತಾಸಕ್ತಿ ಕಾಪಾಡುವಂತೆ ಹಾಗು ಜಲಾಶಯದ ಸುರಕ್ಷತೆಗೆ ಗಮನ ಹರಿಸುವಂತೆ ಜಲಾಶಯದ ಬಳಿ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಈ ಎರಡು ಕಾಮಗಾರಿಗಳಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು, ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಹಿಂದೆ ಸಹ ಕಳಪೆ ಕಾಮಗಾರಿ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿತ್ತು. ಈ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಾರಿ ಯಾರ ಗಮನಕ್ಕೂ, ಕಾಮಗಾರಿ ಕುರಿತು ಯಾವ ವಿಚಾರವೂ ತಿಳಿಸದೆ ತರಾತುರಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ತಕ್ಷಣ ಕಾಮಗಾರಿ ಸ್ಥಗಿತಗೊಳಿಸಬೇಕು. ಪ್ರಸ್ತುತ ಕೈಗೊಂಡಿರುವ ಕಾಮಗಾರಿಯಿಂದ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರವಹಿಸಬೇಕು.ಸುರೇಶ್, ರೈತ ಮುಖಂಡರು.
-----------------ಕುಡಿಯುವ ನೀರಿಗಾಗಿ ಕಾಮಗಾರಿ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಅವೈಜ್ಞಾನಿಕ ಕಾಮಗಾರಿ ಕೈಬಿಟ್ಟು ನದಿ ಪಾತ್ರದಿಂದಲೇ ಜಾಕ್ವೆಲ್ ಮೂಲಕ ನೀರು ಹರಿಸುವ ಕಾಮಗಾರಿ ಕೈಗೊಳ್ಳಬಹುದಾಗಿದೆ. ತಕ್ಷಣ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿ ಮುಂದಿನ ದಿನಗಳಲ್ಲಿ ಬಲದಂಡೆ ನಾಲೆಗೆ ಯಾವುದೇ ರೀತಿ ಅಪಾಯಗಳು ಸಂಭವಿಸದಂತೆ ಎಚ್ಚರವಹಿಸಬೇಕು. ಅಲ್ಲದೆ ಎಡದಂಡೆ ನಾಲೆಯ ಮುಖ್ಯಗೇಟ್ ಕಾಮಗಾರಿ ತಕ್ಷಣ ಮುಕ್ತಾಯಗೊಳಿಸಿ ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ.
ಎಚ್.ಆರ್ ಬಸವರಾಜಪ್ಪ, ರೈತ ಮುಖಂಡರು.-