ಸವಣೂರು: ಯಾವ ದೇಶದಲ್ಲಿ ಸಹಕಾರ ರಂಗ ಗಟ್ಟಿಯಾಗಿರುತ್ತದೆಯೋ ಆ ದೇಶ ಬಲಿಷ್ಠವಾಗಿರುತ್ತದೆ. ನಮ್ಮ ದೇಶದಲ್ಲಿ ಹಲವಾರು ರಾಜ್ಯಗಳು ಇದರಿಂದ ಬಲಿಷ್ಠವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸವಣೂರು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಒಂದು ಸಂಸ್ಥೆ ಐವತ್ತು ವರ್ಷ ತುಂಬುವಂಥದ್ದು ಅತ್ಯಂತ ಮಹತ್ವದ್ದು, ಸವಣೂರು ತಾಲೂಕು ಒಕ್ಕಲುತನ ಸಹಕಾರ ಸಂಸ್ಥೆ ಐವತ್ತು ವರ್ಷ ಪೂರೈಸಿರುವುದಕ್ಕೆ ಅಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನೆಗಳು ಎಂದು ಹೇಳಿದರು.ಸಹಕಾರಿ ರಂಗ ನಮ್ಮ ದೇಶದಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಸದಸ್ಯರ ಪರಿಶ್ರಮದಿಂದ ಸಂಘ, ಸಂಘದ ಸದಸ್ಯರಿಂದ ಸದಸ್ಯರಿಗಾಗಿ ಈ ಸೊಸೈಟಿಗಳು ಹುಟ್ಟಿವೆ. ಮನುಷ್ಯ ಸಂಘದ ಮೂಲಕ ಕೆಲಸ ಮಾಡಲು ಸಂಘಗಳು ಹುಟ್ಟಿಕೊಂಡಿವೆ. ಮನುಷ್ಯ ಸಂಘ ಜೀವಿ, ಸಹಕಾರಿ ರಂಗದಲ್ಲಿ ಎಲ್ಲರನ್ನು ಒಳಗೊಂಡ ಪರಿಶ್ರಮದಿಂದ ಕೆಲಸ ಮಾಡಿದಾಗ ಕಾರ್ಯ ಯಶಸ್ವಿಯಾಗುತ್ತದೆ ಎಂದರು.
ಜಾಗತೀಕರಣ, ಉದಾರೀಕರಣ ಆದ ಮೇಲೆ ಮಾರುಕಟ್ಟೆ ಎಲ್ಲವನ್ನು ನಿರ್ಧಾರ ಮಾಡುತ್ತದೆ. ಮಾರುಕಟ್ಟೆಯಲ್ಲಿ ಕೇವಲ ಲಾಭ ನಷ್ಟ ಇದೆ. ಮಾರುಕಟ್ಟೆಯಲ್ಲಿ ರೈತನ ಹಿತ ಚಿಂತನೆ ಮಾಡುವುದು ಇಲ್ಲ. ಅಲ್ಲಿ ಪೂರೈಕೆ ಮತ್ತು ಬೇಡಿಕೆ ಮಾತ್ರ ಇದೆ. ಒಂದು ಕಡೆ ಬಂಡವಾಳ ಶಾಹಿಗಳು ಮತ್ತು ಕಮುನಿಷ್ಟರ ವೈಫಲ್ಯತೆ ಸರಿದೂಗಿಸಿ ನ್ಯಾಯ ಕೊಡಿಸುವುದು ಸಹಕಾರಿ ರಂಗ, ಇಲ್ಲಿ ಎಲ್ಲರಿಗೂ ನ್ಯಾಯ ಕೊಡುವ ವ್ಯವಸ್ಥೆ ಇದೆ ಎಂದು ಹೇಳಿದರು.ಬಂಡವಾಳ ಶಾಹಿಗಳಲ್ಲಿ ಕೇವಲ ಉತ್ಪಾದನೆ ಇರುತ್ತದೆ ಲಾಭದ ಹಂಚಿಕೆ ಇರುವುದಿಲ್ಲ. ಕಮುನಿಷ್ಟರಲ್ಲಿ ಹಂಚಿಕೆ ಇರುತ್ತದೆ ಉತ್ಪಾದನೆ ಇರುವುದಿಲ್ಲ. ಆದರೆ, ಸಹಕಾರ ರಂಗದಲ್ಲಿ ಉತ್ಪಾದನೆ ಮತ್ತು ಹಂಚಿಕೆ ಎರಡೂ ಇರುತ್ತದೆ. ಕರ್ನಾಟಕದ ಮಟ್ಟಿಗೆ ಕೆಎಂಎಫ್ ಒಂದು ಉತ್ತಮ ಉದಾಹರಣೆ. ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಹಾಲು ಉತ್ಪಾದನೆ ಮಾಡುವ ಸಾಮಾನ್ಯ ರೈತನಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಾರ್ಯ ನಿರ್ವಹಣೆ ಮಾಡುತ್ತಿದೆ. ಕ್ಯಾಮ್ಕೊ, ಅಮೂಲ್ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಕೆಎಸ್‌ಎಫ್‌ಸಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅದಕ್ಕೆ ಬಂಡವಾಳದ ಕೊರತೆ ಇದೆ. ಅದಕ್ಕಾಗಿ ನಮ್ಮ ಕೇಂದ್ರ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಸಹಕಾರ ಇಲಾಖೆ ತೆರೆದು ಇದಕ್ಕೆ ದಕ್ಷತೆ ತರಲು ಅಮಿತ್ ಶಾ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ. ಅಮಿತ್ ಶಾ ಅವರು ಈಗಲೂ ತಮ್ಮ ಗ್ರಾಮದ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ. ಅವರು ಸಹಕಾರಿ ರಂಗದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ರೈತರಿಗೆ ನಫೆಡ್ ಮೂಲಕ ಬೆಂಬಲ ಬೆಲೆ ನೀಡುವ ಕೆಲಸ ಮಾಡಿದ್ದಾರೆ. ನಫೆಡ್ ನವರು ರಾಜ್ಯ ಮಟ್ಟದಲ್ಲಿರುವ ಮಾರ್ಕೆಟಿಂಗ್ ಫೆಡರೇಷನ್ ಮೂಲಕ ಕೆಲಸ ಮಾಡುತ್ತಾರೆ. ಮಾರ್ಕೆಟಿಂಗ್ ಫೆಡರೇಷನ್ ತಾಲೂಕು ಮಟ್ಟದ ಸೊಸೈಟಿ ಮೂಲಕ ಕೆಲಸ ಮಾಡುತ್ತಾರೆ. ಗ್ರಾಮ ಮಟ್ಟದ ಸದಸ್ಯರು ಇದರ ಸದಸ್ಯರಿರುತ್ತಾರೆ. ಹೀಗೆ ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಈ ವ್ಯವಸ್ಥೆ ನಡೆಯುತ್ತದೆ ಎಂದು ಹೇಳಿದರು.ಸವಣೂರಿನ ಸೊಸೈಟಿ ಸಂಕಷ್ಟದಲ್ಲಿತ್ತು. ಕೆಸಿಸಿ ಬ್ಯಾಂಕ್‌ನಿಂದ ಸಾಲ ಮಾಡಿ ಬಡ್ಡಿ ಹೆಚ್ಚಾಗಿ ಅದು ಮುಚ್ಚುವ ಪರಿಸ್ಥಿತಿ ಬಂದಿತ್ತು. ಆ ಸಂದರ್ಭದಲ್ಲಿ ಆಸ್ತಿ ಮಾರಿ ಈ ಸಂಸ್ಥೆ ಉಳಿಸಿಕೊಂಡಿದ್ದಾರೆ. ಇದು ರೈತರಿಂದ ರೈತರಿಗೆ ಬೇಕಾದ ಸಂಸ್ಥೆ ಇರುವುದರಿಂದ ರೈತರ ಬೆಳೆಗಳಿಗೆ ಒಳ್ಳೆಯ ಬೆಲೆ ಕೊಟ್ಟು ಸಂಸ್ಥೆಯನ್ನೂ ಉಳಿಸಿಕೊಳ್ಳುವ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿದೆ. ರೈತರಿಗೆ ಇದು ನಮ್ಮ ಸಂಸ್ಥೆ ಎಂಬ ಭಾವನೆ ಬಂದಾಗ ಅವರು ಸೊಸೈಟಿಗೆ ಬರುತ್ತಾರೆ. ನಿಮ್ಮ ಮೇಲೆ ವಿಶ್ವಾಸಾರ್ಹತೆ ಬರುವಂತೆ ದರ ಮತ್ತು ತೂಕದಲ್ಲಿ ನ್ಯಾಯ ಸಮ್ಮತವಾಗಿ ವ್ಯವಹಾರ ನಡೆಸಿ ರೈತರ ವಿಶ್ವಾಸ ಗಳಿಸಿದಾಗ ಐವತ್ತನೇ ವರ್ಷಾಚರಣೆ ಅರ್ಥ ಪೂರ್ಣವಾಗಲಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ವ್ಯವಹಾರ ನಡೆಸಿ, ಸಂಸ್ಥೆಯನ್ನು ಬೆಳೆಸಿಕೊಂಡು ಹೋಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್ ಗೌಡ ಪಾಟೀಲ್, ಟಿಎಪಿಸಿಎಂಎಸ್ ಅಧ್ಯಕ್ಷರಾದ ಧರೆಪಗೌಡ ಪಾಟೀಲ್ ಸೇರಿದಂತೆ ಬ್ಯಾಂಕ್ ನಿರ್ದೇಶಕ ಮಂಡಳಿ ಹಾಗೂ ಸದಸ್ಯರು ಹಾಜರಿದ್ದರು.