ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಹಾಲು ಉತ್ಪಾದಕರು ಸಹಕಾರ ಸಂಘಗಳ ಮೂಲಕ ಒಕ್ಕೂಟಕ್ಕೆ ನಿತ್ಯ ೧.೮೫ ಲಕ್ಷ ಲೀಟರ್ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಬಂಗಾರಪೇಟೆ ತಾಲೂಕನ್ನು ಮೊದಲ ಸ್ಥಾನದಲ್ಲಿರಿಸಿದ್ದಾರೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪಾಕರಹಳ್ಳಿ ವೆಂಕಟೇಶ್ ಹೇಳಿದರು.ಪಟ್ಟಣದ ಹಾಲು ಒಕ್ಕೂಟದ ಶಿಬಿರ ಕಚೇರಿಯಲ್ಲಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಗುಣಮಟ್ಟ ಪರಿಶೀಲನೆ ಮುಖ್ಯ
ಡೇರಿಗಳ ಅಧ್ಯಕ್ಷರು ಕೇವಲ ಚೆಕ್ ಮೇಲೆ ಸಹಿ ಮಾಡಲು ಮತ್ತು ಚುನಾವಣೆಯಲ್ಲಿ ಓಟ್ ಹಾಕಲಿಕ್ಕೆ ಸೀಮಿತರಾಗಬಾರದು. ಸಂಘಕ್ಕೆ ಪೂರೈಕೆ ಆಗುತ್ತಿರುವ ಹಾಲಿನ ಗುಣಮಟ್ಟವನ್ನು ಪರೀಕ್ಷಿಸಲು ನಿಲ್ಲುವ ಮೂಲ ಸಿಬ್ಬಂದಿಗೆ ಬೆಂಬಲ ಸೂಚಿಸಬೇಕು. ಗುಣಮಟ್ಟವಿಲ್ಲದ ಹಾಲನ್ನು ಡೇರಿಗೆ ಹಾಕಲು ಯಾರೂ ಸಹ ಅವಕಾಶ ನೀಡದೆ, ಗುಣಮಟ್ಟ ಹಾಲು ಉತ್ಪಾದನೆಗೆ ತಿಳಿವಳಿಕೆ ಮೂಡಿಸಬೇಕು. ಮೊದಲು ಆಡಳಿತ ಮಂಡಳಿಯವರು ಡೇರಿಗಳಿಗೆ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಇತರೆ ಉತ್ಪಾದಕರಿಗೆ ಮಾದರಿಯಾಗಬೇಕು ಎಂದರು. ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಆಮು ಲಕ್ಷ್ಮೀನಾರಾಯಣ ಮಾತನಾಡಿ, ಸಹಕಾರ ಸಂಘಗಳ ಆಡಳಿತ ಮಂಡಳಿಯು ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಸಂಘಗಳು ಬೆಳವಣಿಗೆ ಕಾಣಲು ಸಾಧ್ಯ. ಅದರಲ್ಲೂ ಅಧ್ಯಕ್ಷರ ಪಾತ್ರ ಮತ್ತು ಜವಾಬ್ದಾರಿ ಹೆಚ್ಚಿದ್ದು, ಅದನ್ನು ಅರಿತು ಸಂಘದ ಅಭಿವೃದ್ದಿಗೆ ಒತ್ತು ನೀಡಬೇಕು. ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಿದ್ದರೆ ಮಾತ್ರ ಹೆಚ್ಚು ಲಾಭ ಬರಲು ಸಾಧ್ಯ ಈ ನಿಟ್ಟಿನಲ್ಲಿ ಗುಣಮಟ್ಟದ ಹಾಲು ಉತ್ಪಾದನೆಗೆ ಉತ್ಪಾದಕರಿಕೆ ಮನವರಿಕೆ ಮಾಡಬೇಕು ಎಂದರು.ಈ ವೇಳೆ ಒಕ್ಕೂಟದ ನಿರ್ದೇಶಕ ಕೆ.ಎಂ ಮಂಜುನಾಥ, ಮೂರಾಂಡಹಳ್ಳಿ ಗೋಪಾಲಪ್ಪ, ಅರುಣಮ್ಮ, ಸಿ.ಇ.ಒ ಭಾರತಿ, ಭೂ ಭ್ಯಾಂಕಿನ ಅಧ್ಯಕ್ಷ ಎಚ್.ಕೆ ನಾರಾಯಣಸ್ವಾಮಿ, ರವಿಕುಮಾರ್, ನಾಗರಾಜಯ್ಯ, ಡಾ.ವೆಂಕಟಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು