ರೈತರ ಪಾಲಿನ ಕರಾಳ ದಿನ ಆರಂಭ

KannadaprabhaNewsNetwork | Published : Jan 25, 2025 1:00 AM

ಸಾರಾಂಶ

ತುಮುಲ್ ಅಧ್ಯಕ್ಷರನ್ನಾಗಿ ಚುನಾಯಿತರನ್ನು ಆಯ್ಕೆ ಮಾಡದೆ ನಾಮ ನಿರ್ದೇಶಕರಾಗಿದ್ದ ಶಾಸಕರನ್ನು ಮಾಡಿರುವುದು ರೈತರ ಪಾಲಿನ ಕರಾಳ ದಿನಗಳ ಆರಂಭ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ತೀವ್ರವಾಗಿ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ ತುಮುಲ್ ಅಧ್ಯಕ್ಷರನ್ನಾಗಿ ಚುನಾಯಿತರನ್ನು ಆಯ್ಕೆ ಮಾಡದೆ ನಾಮ ನಿರ್ದೇಶಕರಾಗಿದ್ದ ಶಾಸಕರನ್ನು ಮಾಡಿರುವುದು ರೈತರ ಪಾಲಿನ ಕರಾಳ ದಿನಗಳ ಆರಂಭ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ತೀವ್ರವಾಗಿ ಟೀಕಿಸಿದರು. ಪಟ್ಟಣದ ನಂದಿನಿ ಭವನದ ಆವರಣದಲ್ಲಿ ನಡೆದ ತುಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ ತಾಲೂಕಿನ ನಿರ್ದೇಶಕರಾಗಿ ಆಯ್ಕೆಯಾದ ಬಿ ಎನ್ ಶಿವಪ್ರಕಾಶ್ ಆಯೋಜಿಸಿದ್ದ ಮತದಾರರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ತಿಲಾಂಜಲಿ ನೀಡಿ ಸಹಕಾರ ಕ್ಷೇತ್ರಗಳನ್ನು ಕುಟುಂಬದ ಸಂಸ್ಥೆಗಳನ್ನಾಗಿಸುವ ಹುನ್ನಾರಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ ಎನ್ ರಾಜಣ್ಣ ಕೈಜೋಡಿಸಿರುವುದು ರೈತ ಸಮೂಹಕ್ಕೆ ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದರು.

ಡಾ. ವರ್ಗೀಸ್ ಕುರಿಯನ್ ರವರ ಆಶಯವನ್ನು ಮಣ್ಣು ಪಾಲು ಮಾಡಿದ ನಡೆ ಸರಿಯಲ್ಲ. ಹಾಲು ಒಕ್ಕೂಟದ ಎಲ್ಲಾ ವ್ಯವಸ್ಥೆಗಳು ಡೈರಿಗೆ ಹಾಲು ಹಾಕುವ ರೈತರ ಹಕ್ಕಾಗಿರಬೇಕು ಎನ್ನುವುದು ಕುರಿಯನ್ ರವರ ಆಶಯ. ಅದರ ಉತ್ಪನ್ನದ ಲಾಭಗಳು ಹಾಗೂ ದೊರೆಯುವ ಎಲ್ಲಾ ಸೌಲಭ್ಯಗಳು ಉತ್ಪಾದಕರು ಹಾಗೂ ಅವರ ಕುಟುಂಬಗಳಿಗೆ ಸೇರಬೇಕೆನ್ನುವುದು ಒಕ್ಕೂಟದ ಮೂಲ ಸಿದ್ದಾಂತವಾಗಿದೆ. ಆದರೆ ಚುನಾವಣೆಯಲ್ಲಿ ಗೆದ್ದ 10 ಮಂದಿಯಲ್ಲಿ ಯಾರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೇ ನಮಗೆ ಬೇಸರವಿರುತ್ತಿರಲಿಲ್ಲ. ಆದರೆ ಸಚಿವದ್ವಯರು ನಾಮಿನಿಗೆ ಮಣೆ ಹಾಕಿ ಶಾಸಕರನ್ನು ತುಮುಲ್ ಅಧ್ಯಕ್ಷರನ್ನಾಗಿಸಿರುವುದನ್ನು ನಾವು ಪ್ರಶ್ನೆ ಮಾಡಬೇಕಾಗಿದೆ. ನಾನು ಸಹ ಈ ಹಿಂದೆ ಈ ಹಿಂದೆ ಕೆಎಂಎಫ್ ಗೆ ಅಧ್ಯಕ್ಷನಾಗಿದ್ದೆ ಜಿಲ್ಲಾ ಉಸ್ತುವಾರಿ ಸಚಿವನು ಆಗಿದ್ದೆ ಆದರೆ ಎಂದಿಗೂ ನಾನು ಇಂತಹ ರಾಜಕಾರಣ ಮಾಡಿಲ್ಲವೆಂದರು. ಸಹಕಾರ ಸಂಘಗಳು ಕುಟುಂಬಗಳ ಹಿಡಿತಕ್ಕೆ: ಡಿಸಿಸಿ ಬ್ಯಾಂಕ್ ನಿಂದ ಡೈರಿಯವರೆಗೆ ರಾಜಕಾರಣವನ್ನು ಎಳೆದು ತರಲಾಗಿದೆ. ಇದರ ಪರಿಣಾಮ ಸ್ಥಳೀಯ ಸಂಸ್ಥೆಗಳ ಮೇಲಾಗುತ್ತಿದೆ. ಇದೇ ವ್ಯವಸ್ಥೆ ತಾಲೂಕಿನ ಹಲವು ವಿಎಸ್ಎಸ್ ನ ಸೊಸೈಟಿಗಳಲ್ಲಿ ತರುವ ಮೂಲಕ ಕುಟುಂಬಗಳ ಹಿಡಿತದೊಳಗೆ ಸೇರಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಪಟ್ಟಣದ ಪಿ ಎಲ್ ಡಿ ಬ್ಯಾಂಕ್ ಅತ್ಯಂತ ಹಳೆಯ ಸಂಸ್ಥೆಯಾಗಿದ್ದು ಈಗ ಅವಸಾನದ ಅಂಚಿನಲ್ಲಿದೆ. ಸಜ್ಜನ ರಾಜಕಾರಣಿ ಎನಿಸಿದ ದಿವಂಗತ ಲಿಂಗದೇವರು ಸ್ಥಾಪಿಸಿ ಬೆಳೆಸಿದ ಪಟ್ಟಣದ ಪಿಎಪಿಸಿಎಂಎಸ್ ಸಹ ಇಂತವರಿಂದ ಅವಸಾನದ ಕಡೆ ಸಾಗುತ್ತಿದೆ ಎಂದರು. ಡೈರಿಗಳ ಅವಸಾನ ಆರಂಭ: ಹೊರಗಿನ ಶಕ್ತಿಗಳು ಸಹಕಾರ ಸಂಘಗಳಿಗೆ ಪ್ರವೇಶ ಮಾಡಿದಾಗ ಸಂಘಗಳ ಮೂಲ ಆಶಯಕ್ಕೆ ಪೆಟ್ಟು ಬೀಳಲಿದೆ ಹಾಲು ಹಾಕುವವನೇ ಒಡೆಯನಾಗಿರುವ ವ್ಯವಸ್ಥೆ ಸಡಿಲಗೊಂಡಾಗ ಅದರ ಪರಿಣಾಮ ಡೈರಿಗಳ ಮೇಲಾಗುತ್ತದೆ. ಈಗಾಗಲೇ ಕೆಎಂಎಫ್ ಗೆ ಹೆಚ್ಚಿನ ಹಾಲು ಬೇಕಾಗಿಲ್ಲವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಉತ್ಪಾದನೆಯಾದಾಗ ಗುಣಮಟ್ಟ ಹಾಗೂ ಕೊಳ್ಳುವ ಪ್ರಮಾಣ ಮುಂತಾದ ಬಗ್ಗೆ ಕಠಿಣ ನಿಯಮಗಳು ಬರಲಿದೆ. ಇದು ನೇರವಾಗಿ ಹಾಲು ಉತ್ಪಾದಕರ ಮೇಲಾಗುತ್ತದೆ ಎಂದರು. ಸಂಘಟಿತ ಹೋರಾಟ ಒಂದೇ ದಾರಿ: ಸಹಕಾರ ಸಂಘಗಳು ಕಲುಷಿತಗೊಂಡು ಅವಸಾನದ ಕಡೆ ಸಾಗಿದರೆ ಅದನ್ನು ಉಳಿಸುವಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಿದೆ. ಈ ಹಿಂದೆ ಒಕ್ಕೂಟವನ್ನು ಕೆಎಂಎಫ್ ಗೆ ಸೇರ್ಪಡೆಗೆ ಒತ್ತಾಯ ಬಂದಾಗ ನಮ್ಮ ಕರೆಯಂತೆ ನಾಲ್ಕೈದು ಜಿಲ್ಲೆಯ ಎಲ್ಲಾ ಹಾಲಿನ ಡೈರಿಗಳಿಗೆ ಉತ್ಪಾದಕರು ಒಂದು ಹನಿ ಹಾಲನ್ನು ವಾರಗಟ್ಟಲೇ ಮಾರದೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ ಪರಿಣಾಮ ಸಂಸ್ಥೆಯ ಸ್ವಾಯತ್ತತೆಯಲ್ಲಿ ಮುಂದುವರೆಯುತ್ತಿದೆ. ಡೈರಿ ಸಂಘಗಳು ಆಗಾಗ್ಗೆ ಒಂದೆಡೆ ಸೇರಿ ಉತ್ತಮ ಆಲೋಚನೆಯೊಂದಿಗೆ ಸಂಘಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಹೋರಾಟದ ಹೆಜ್ಜೆಗಳ ಇರಿಸಬೇಕೆಂದರು.

ಪ್ರತಿಭಟನೆ ಎಚ್ಚರಿಕೆ: 5 ಎಕರೆ ಹೊಂದಿದ ರೈತನಿಗೆ ಒಂದು ಪಂಪ್‌ ಸೆಟ್ ಗೆ ಮಾತ್ರ ಉಚಿತ ವಿದ್ಯುತ್ ಉಳಿದ ಪಂಪ್‌ ಸೆಟ್ ಗೆ ಮೀಟರ್ ಹಾಕಲು ಸರ್ಕಾರ ಮುಂದಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದಿದ್ದೆ ಆದರೆ ಮೊದಲ ಹೋರಾಟ ನಮ್ಮ ಜಿಲ್ಲೆಯಿಂದಲೇ ಆರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಮಾಧುಸ್ವಾಮಿ ಎಚ್ಚರಿಕೆ ನೀಡಿದರು.

ಈ ವೇಳೆ ನೂತನವಾಗಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾಗಿ ತಾಲೂಕಿನಿಂದ ಆಯ್ಕೆ ಆದ ಬಿಎನ್ ಶಿವಪ್ರಕಾಶ್ ಕೇಶವಮೂರ್ತಿ ಜಿಪಂ ಮಾಜಿ ಸದಸ್ಯೆ ಮಂಜಮ್ಮ, ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ಗಂಗಾಧರಯ್ಯ ನಂದಿಹಳ್ಳಿ, ಶಿವಣ್ಣ ರಾಮನಹಳ್ಳಿ, ರಾಮಚಂದ್ರಯ್ಯ, ಕುಕ್ಕೂರ್ ಉಮೇಶ್, ಶ್ರೀನಿವಾಸ್, ಮಧು ಇನ್ನೂ ಮೊದಲಾದವರು ಉಪಸ್ಥಿತರಿದ್ದರು.

Share this article