ಸ್ತ್ರೀ ಸಮಾನತೆಗೆ ಶ್ರಮಿಸಿದ ಶರಣರು: ಬಸವಶಾಂತಲಿಂಗ ಸ್ವಾಮೀಜಿ

KannadaprabhaNewsNetwork |  
Published : Aug 24, 2025, 02:00 AM IST
23ಎಚ್‌ವಿಆರ್5 | Kannada Prabha

ಸಾರಾಂಶ

12ನೇ ಶತಮಾನದ ಬಸವಾದಿ ಶರಣರು ಮಹಿಳೆಯರಿಗೂ ಸಮಾಜದಲ್ಲಿ ಸಮನಾಗಿ ಪಾಲ್ಗೊಳ್ಳಲು ಅವಕಾಶ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು.

ಹಾವೇರಿ: ಮಹಿಳೆಯರಿಗೆ ಸಮಾಜದ ಚಟುವಟಿಕೆಗಳಲ್ಲಿ ಭಾಗವಹಿಸಿದಂತೆ ಅನೇಕ ನಿರ್ಬಂಧಗಳು ಹಾಕಿದ ದಿನಮಾನಗಳಲ್ಲಿ ಬಸವಣ್ಣನವರು ಮಹಿಳೆಯರ ಪರವಾಗಿ ಧ್ವನಿ ಎತ್ತಿ ಧಾರ್ಮಿಕ ನೆಲೆಯೊಳಗೂ ತಮ್ಮ ಸ್ಪಷ್ಟ ನಿಲುವುಗಳನ್ನು ವ್ಯಕ್ತಗೊಳಿಸಲು ಅನುವು ಮಾಡಿಕೊಟ್ಟರು ಎಂದು ಹೊಸಮಠ ಬಸವಶಾಂತಲಿಂಗ ಸ್ವಾಮೀಜಿ ತಿಳಿಸಿದರು.ನಗರದ ಬಸವಕೇಂದ್ರ ಹೊಸಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿದ್ದ ಶರಣ- ಶ್ರಾವಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾನವ ಗೌರವಯುತ ಜೀವನ ನಡೆಸಲು ಹಾಗೂ ತನ್ನ ವ್ಯಕ್ತಿತ್ವದ ವಿಕಾಸಗೊಳ್ಳಲು ಮೂಲಭೂತ ಹಕ್ಕುಗಳು ಅಗತ್ಯ. ಆದರೆ ಈ ಹಿಂದೆ ಮಹಿಳೆಯರನ್ನು ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸಿ ನಿರ್ಬಂಧ ಹಾಕಲಾಗಿತ್ತು. 12ನೇ ಶತಮಾನದ ಬಸವಾದಿ ಶರಣರು ಮಹಿಳೆಯರಿಗೂ ಸಮಾಜದಲ್ಲಿ ಸಮನಾಗಿ ಪಾಲ್ಗೊಳ್ಳಲು ಅವಕಾಶ ನೀಡಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಬಸವಣ್ಣನರು ಈ ಕಾರ್ಯಕ್ಕೆ ನಾಂದಿ ಹಾಡಿದರು ಎಂದರು. ವಿವಿಧ ಕಂದಾಚಾರ, ಮೂಢನಂಬಿಕೆಗಳನ್ನು ತೊಲಗಿಸಿ ದೇವರುಗಳ ಉಪಾಸನೆ ಮಾಡಿಸುವ ಜತೆಗೆ ಶೋಷಣೆ, ಮೇಲು- ಕೀಳಿನ ಮನೋಭಾವಕ್ಕೆ ಒಳಗಾಗುವುದನ್ನು ತಡೆಗಟ್ಟಿ ಇಷ್ಟಲಿಂಗದ ಧಾರಣೆಯಿಂದ ಸರ್ವ ಸಮಾನತೆಯನ್ನು ಪಸರಿಸಿ ಧಾರ್ಮಿಕ ಸ್ವಾತಂತ್ರ‍್ಯವನ್ನು ಸಾರ್ವತ್ರಿಕಗೊಳಿಸಿದರು. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಸಾಮಾಜಿಕ, ರಾಜಕೀಯ ಬದ್ಧತೆಯೊಂದಿಗೆ ಪುರುಷರ ಸಹಕಾರವೂ ಅಗತ್ಯ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ಹೊಸಮಠವು ಸಮಾಜಮುಖಿ ಕಾರ್ಯಕ್ರಮಗಳು ಮೂಲಕ ಬಸವಾದಿ ಶರಣರ ತತ್ವಗಳನ್ನು ಜನಮಾನಸದಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ ಎಂದರು. ರಾಜ್ಯ ಸರ್ಕಾರ ಮಹಿಳಾ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶೈಲಜ ಸಿ.ವಿ. ಮಾತನಾಡಿ, ಶರಣರ ವಚನಗಳಲ್ಲಿ ಸ್ತ್ರೀ ಸಮಾನತೆ ಮತ್ತು ಸಾಮಾಜಿಕ ಮೌಲ್ಯಗಳು ಸಾರುತ್ತವೆ ಎಂದರು. ಇದೇ ಸಂದರ್ಭದಲ್ಲಿ ಅಕ್ಕನ ಬಳಗದ ವತಿಯಿಂದ ಮಹಿಳೆಯರಿಗೆ ಶರಣರ ವಚನ ಪುಸ್ತಕ ನೀಡಿ ಉಡಿ ತುಂಬಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಹಾವೇರಿ ಜಿಲ್ಲಾ ಕರಾಟೆ ಸಂಸ್ಥೆ ಅಧ್ಯಕ್ಷ ನಾರಾಯಣ ಪೂಜಾರಿ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ವನಿತಾ ಮಾಗನೂರ, ಡಾ. ಲತಾ ನಿಡಗುಂದಿ, ದಯಾನಂದ ಯಡ್ರಾಮಿ ಇದ್ದರು. ಮಮತಾ ನಂದಿಹಳ್ಳಿ ಪ್ರಾರ್ಥಿಸಿದರು. ಲಲಿತಾ ಹೀರೆಮಠ ಸ್ವಾಗತಿಸಿದರು. ಅನಿತ ಉಪಲಿ ನಿರೂಪಿಸಿದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!