ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳದ ಶ್ರೀ ಎಸ್.ಆರ್.ಕಂಠಿ ಮಹಾವಿದ್ಯಾಲಯಕ್ಕೆ ಅ.21 ಮತ್ತು 22 ರಂದು ನ್ಯಾಕ್ (National Accreditation and Assessment Council) ಪೀರ್ ತಂಡ ಭೇಟಿ ನೀಡುತ್ತಿದ್ದು, ಶೈಕ್ಷಣಿಕ ಮತ್ತು ಮೂಲ ಸೌಕರ್ಯಗಳ ಗುಣಮಟ್ಟ ಮೌಲೀಕರಿಸಲಿದೆ ಎಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ. ಚರಂತಿಮಠ ಹೇಳಿದರು.ಮುಧೋಳ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪ್ರಾಚಾರ್ಯ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಸ್ಥಾನದ ಉದಯಪುರ ಮೋಹನಲಾಲ ಸುಖಾಧ್ಯಯ ವಿಶ್ವ ವಿದ್ಯಾಲಯದ ಕುಲಪತಿ ಡಾ.ಸುನಿತಾ ಮಿಶ್ರಾ ಅಧ್ಯಕ್ಷತೆಯಲ್ಲಿ ಗುಜರಾತ ಮಹಾರಾಜಾ ಕೃಷ್ಣ ಕುಮಾರಸ್ವಾಮಿಜಿ ಭಾವನ ನಗರ ವಿಶ್ವ ವಿದ್ಯಾಲಯದ ಪ್ರೊ.ಡಾ.ಕಿಶೋರ ಮಹೇಂದ್ರ ಜೋಶಿ, ಮಹಾರಾಷ್ಟ್ರ ಅಮರಾವತಿ ಸಂತ ಗಾಡಗೆ ಬಾಬಾ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಮಹೇಂದ್ರ ಢೋರೆ ಇಬ್ಬರು ಸದಸ್ಯರೊಳಗೊಂಡ ನ್ಯಾಕ್ ಸಮಿತಿಯು ಕಾಲೇಜಿಗೆ ಭೇಟಿ ನೀಡಲಿದೆ ಎಂದರು.
ಕಾಲೇಜು ಆರಂಭದ ಬಳಿಕ ಮೂರು ಬಾರಿ ನ್ಯಾಕ್ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿ ಉತ್ತಮ ಗ್ರೇಡ್ ಒದಗಿಸಿದೆ. ಈಗ ನಾಲ್ಕನೇ ಬಾರಿಗೆ ಆಗಮಿಸುವ ತಂಡವು ಎರಡು ದಿನಗಳವರಿಗೂ ಮೌಲ್ಯಾಂಕನ ಪರಿಶೀಲನೆ ಮಾಡಲಿದ್ದಾರೆ. ಈ ಸಲ ಎ ಡಬಲ್ ಪ್ಲಸ್ ಗ್ರೇಡ್ ಸಿಗುವ ಸಾದ್ಯತೆ ಇದೆ ಎಂದು ತಿಳಿಸಿದರು.ಕವಿಚಕ್ರವರ್ತಿ ಬಿರುದಾಂಕಿತ ಕವಿ ರನ್ನನ ಜನ್ಮಸ್ಥಳವಾದ ಮುಧೋಳದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನಮ್ಮ ಸಂಘವು ಮುಧೋಳ ತಾಲೂಕಿನ ಗ್ರಾಮೀಣ ಭಾಗದಿಂದ ಆಗಮಿಸುವ, ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೈಟೆಕ್ ಸೌಲಭ್ಯ ಒದಗಿಸಿ ಸಹಸ್ರಾರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಎಂಎ (ಇಂಗ್ಲಿಷ್), ಎಕಾಂ ಪದವಿ ಕಾಲೇಜು ಮಹಿಳೆಯರಿಗಾಗಿ ಪ್ರತ್ಯೇಕ ಪದವಿ ಕಾಲೇಜು, ಸಿಬಿಎಸ್ಇ, ಎಂಜನಿಯರಿಂಗ್ ಹಾಗೂ ಎಂಬಿಎ ಪದವಿ ಕಾಲೇಜುಗಳನ್ನು ಮುಧೋಳ ನಗರದಲ್ಲಿ ಆರಂಭಿಸಲಾಗಿದೆ ಎಂದರು.
1982 ರಲ್ಲಿ 120 ವಿದ್ಯಾರ್ಥಿ ಗಳೊಂದಿಗೆ ಬಿ.ವ್ಹಿ.ವ್ಹಿ.ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಸ್ಥಾಪಿಸಲಾಯಿತು. 1992 ರಲ್ಲಿ ವಿಜ್ಞಾನ ವಿಭಾಗ ಸ್ಥಾಪಿಸಲಾಯಿತು. 1999 ರಲ್ಲಿ ಈ ಮಹಾವಿದ್ಯಾಲಯಕ್ಕೆ ಶ್ರೀ ಎಸ್.ಆರ್.ಕಂಠಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಮುಧೋಳ ಎಂದು ಮರು ನಾಮಕರಣ ಮಾಡಲಾಯಿತು. 2009 ರಲ್ಲಿ ಬಿ.ಸಿ.ಎ ವಿಭಾಗವನ್ನು, 2012-13 ರಲ್ಲಿ ಎಂ.ಎ ಇಂಗ್ಲಿಷ್ ಹಾಗೂ ಎಂ.ಕಾಂ. ಸ್ನಾತಕೋತ್ತರ ಪದವಿ ಕೋರ್ಸ್‌ನ್ನು, 2016-17ರಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಪ್ರಾರಂಭಿಸಲಾಯಿತು. ಪ್ರಸ್ತುತ 2023-24 ನೇ ಸಾಲಿಗೆ 983 ಬಿ.ಎ, 309 ಬಿ.ಕಾಂ, ಬಿ.ಎಸ್ಸಿ, 151 ಬಿ.ಸಿ.ಎ, 38 ಎಂ.ಎ.(ಇಂಗ್ಲಿಷ್) ಮತ್ತು 45 ಎಂ.ಕಾಂ ಸೇರಿದಂತೆ ಒಟ್ಟು 1829 ವಿದ್ಯಾರ್ಥಿಗಳು ಈ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2005ರಲ್ಲಿ ಸುಸಜ್ಜಿತ ಮೂರು ಮಹಡಿಗಳನ್ನೊಳಗೊಂಡ ಯು ಆಕೃತಿ ನೂತನ ಕಟ್ಟಡ ಹೊಂದಿದೆ.ನಗರದ ಬಿವಿವಿ ಸಂಘದ 16.35 ಎಕರೆ ಜಮೀನುದಲ್ಲಿ ಎಲ್ಲಾ ಹಂತದ ಶಾಲಾ ಕಾಲೇಜ್ ಆರಂಭಿಸಲಾಗಿದೆ. ವಸತಿ ನಿಲಯಗಳು, ಕ್ಯಾಂಟಿನ್, ರನ್ನ ಬಯಲು ರಂಗಮಂದಿರ, ಕ್ರೀಡಾಂಗಣ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ವ್ಯಕ್ತಿತ್ವ ವಿಕಸನ, ಸಂವಹನ, ಕೌಶಲ್ಯ ಬೆಳೆಸುವುದರೊಂದಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾಲೇಜ್ ಪ್ರಯತ್ನ ನಡೆಸಿದೆ. ಲೈಂಗಿಕ ಕಿರುಕುಳ ನಿಗ್ರಹ ಘಟಕದಳ, ಶಿಸ್ತು ಪರಿಪಾಲನಾ ಸಮಿತಿ, ಸಾಂಸ್ಕೃತಿಕ ಚಟುವಟಿಕೆ, ಎಸ್‌ಸಿ/ಎಸ್‌ಟಿ ಸೆಲ್ ಇತರೆ ಸಮಿತಿ ರಚನೆ ಮಾಡಲಾಗಿದೆ. ಸಂಸ್ಥೆಯು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪಣ ತೊಟ್ಟಿದೆ ಎಂದರು.
ನ್ಯಾಕ್ ಪೀರ್ ಸಮಿತಿಯು ಪಠ್ಯಕ್ರಮಗಳ ವಿನ್ಯಾಸ, ಪ್ರಸ್ತುತಿ, ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನ, ಮೂಲ ಸೌಕರ್ಯ, ಕಲಿಕಾ ಸಂಪನ್ಮೂಲಗಳ ಉನ್ನತೀಕರಣ, ಸಂಶೋಧನೆ, ಆವಿಷ್ಕಾರ ಮತ್ತು ವಿಸ್ತರಿಸುವಿಕೆ, ವಿದ್ಯಾರ್ಥಿ ಬೆಂಬಲಿಸುವಿಕೆ ಮತ್ತು ಪ್ರಗತಿ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆ ಹಾಗೂ ಸಾಂಸ್ಥಿಕ ಮೌಲ್ಯಗಳು ಮತ್ತು ಅತ್ಯುನ್ನತ ಆಚರಣೆಗಳ ಕುರಿತಂತೆ ಗುಣಾತ್ಮಕ ಮಾನದಂಡಗಳ ಮೇಲೆ ಮೌಲ್ಯೀಕರಣ ಪ್ರಕ್ರಿಯೆ ನಡೆಸಲಿದೆ. ಕಾಲೇಜಿನಲ್ಲಿ ಶಿಕ್ಷಣದ ಮೌಲ್ಯ ಎತ್ತಿ ಹಿಡಿಯುವ ಹಾಗೂ ಗುಣಾತ್ಮಕ ಕಲಿಕೆಗೆ ಅವಕಾಶ ನೀಡುವಂತಹ ಉತ್ತಮ ಶಿಕ್ಷಕ ವೃಂದ ಹಾಗೂ ಎಲ್ಲಾ ಮೂಲಸೌಕರ್ಯಗಳ ಉನ್ನತೀ ಕರಣದಿಂದಾಗಿ 4ನೇ ಆವೃತ್ತಿಯಲ್ಲಿ ಉತ್ತಮ ಶ್ರೇಯಾಂಕ ನಿರೀಕ್ಷಿಸಲಾಗಿದೆ ಎಂದರು.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ. ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ಸಂಸ್ಥೆಯ ಉನ್ನತ ಶಿಕ್ಷಣ ಗುಣಮಟ್ಟ ಭರವಸೆ ಮುಖ್ಯ ಸಲಹೆಗಾರ ಡಾ.ಮೀನಾ ಚಂದಾವರಕರ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸದಸ್ಯ ರವೀಂದ್ರ ಸಾವಳಗಿಮಠ, ಕಾಲೇಜುಗಳ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎನ್.ಗಾಂವಕರ, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಂ.ವ್ಹಿ. ಜಿಗಬಡ್ಡಿ, ಐಕ್ಯೂಎಸಿ ಸಂಯೋಜಕಿ ಪ್ರೊ.ಎಸ್. ಎಸ್.ಬಿರಾದಾರ ಉಪಸ್ಥಿತರಿದ್ದರು.