ಸಂತೋಷ ದೈವಜ್ಞ
ಮುಂಡಗೋಡ: ತಾಲೂಕಿನ ಬಹುತೇಕ ಕೆರೆ- ಕಟ್ಟೆಗಳು ನೀರಿಲ್ಲದೆ ಖಾಲಿಯಾಗಿದ್ದು, ರೈತರು ಸೇರಿದಂತೆ ಸಾರ್ವಜನಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.ಈ ಬಾರಿ ಮಳೆಯ ಕೊರತೆಯಿಂದಾಗಿ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲೂ ನೀರಿನ ಪ್ರಮಾಣ ತೀರಾ ಕಡಿಮೆ ಇದೆ. ಬೇಸಿಗೆ ಪ್ರಾರಂಭವಾಗಿದ್ದು, ಉರಿಬಿಸಿಲಿನ ತಾಪಮಾನಕ್ಕೆ ತಾಲೂಕಿನ ಕೆರೆಗಳು ಒಣಗಿವೆ. ಬೃಹತ್ ಕೆರೆಗಳಲ್ಲೂ ಹನಿ ನೀರು ಇಲ್ಲದಂತಾಗಿದೆ. ಬೇಸಿಗೆ ಹೇಗೆ ಕಳೆಯುವುದು ಎಂಬ ಚಿಂತೆ ಜನರಲ್ಲಿ ಮನೆ ಮಾಡಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.ತಾಲೂಕಿನಲ್ಲಿ ೯ ಜಲಾಶಯ ಹಾಗೂ ೨೮ ದೊಡ್ಡ ಕೆರೆಗಳು ಇವೆ. ಹೀಗಾಗಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೆರೆ ಮತ್ತು ಜಲಾಶಯಗಳನ್ನು ಒಳಗೊಂಡ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ತಾಲೂಕಿನ ಬಹುತೇಕ ಜಲಾಶಯ, ಕೆರೆ- ಕಟ್ಟೆಗಳು ನೀರಿಲ್ಲದೆ ಬತ್ತಿವೆ. ಜಲಾಶಯದ ನೀರು ಆಶ್ರಯಿಸಿ ವ್ಯವಸಾಯ ಮಾಡುತ್ತಿದ್ದ ರೈತರು ಗೋಳು ಹೇಳತೀರದಾಗಿದೆ.
ಜಲಾಶಯದ ನೀರನ್ನೇ ಅವಲಂಬಿಸಿ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿರುವ ರೈತರು ನೀರಿನ ಕೊರತೆಯಿಂದ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಬಹುತೇಕ ಜಲಾಶಯಗಳ ಕಾಲುವೆಗಳು ಕೂಡ ನೀರು ಇಲ್ಲದೇ ಬತ್ತಿವೆ. ಈ ಪ್ರದೇಶದ ಬಡ ರೈತರು ತುತ್ತಿನ ಚೀಲ ತುಂಬಿಸಿಕೊಳ್ಳಲು ದೂರದ ಮಂಗಳೂರು, ಬೆಂಗಳೂರು, ಗೋವಾ ಸೇರಿದಂತೆ ವಿವಿಧೆಡೆ ಗುಳೆ ಹೋಗುತ್ತಿದ್ದಾರೆ.ಹೂಳಿನಿಂದ ಭರ್ತಿ: ತಾಲೂಕಿನ ಜಲಾಶಯ ಹಾಗೂ ಕೆರೆಗಳಲ್ಲಿ ಹಲವು ವರ್ಷಗಳಿಂದ ಹೂಳು ತೆಗೆದಿಲ್ಲ. ಇದರಿಂದ ಬಹುತೇಕ ಜಲಾಶಯ ಕೆರಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರಿನ ಪ್ರಮಾಣ ಕಡಿಮೆಯಾಗಲು ಇದು ಒಂದು ಕಾರಣವಾಗಿದೆ. ನೀರಾವರಿ ಯೋಜನೆಯಡಿ ಇಲಾಖೆಯಿಂದ ಜಲಾಶಯ ಮತ್ತು ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಪ್ರತಿವರ್ಷ ಕೊಟ್ಯಂತರ ರುಪಾಯಿ ಖರ್ಚು ಮಾಡಲಾಗುತ್ತದೆ. ಆದರೆ ಯಾವುದೇ ಜಲಾಶಯಗಳ ಹೂಳೆತ್ತುವ ಕಾರ್ಯ ಮಾತ್ರ ನಡೆದಿಲ್ಲ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತೊಟ್ಟಿ ನಿರ್ಮಿಸಿ: ಕೆರೆ- ಕಟ್ಟೆಗಳು ನೀರಿಲ್ಲದೆ ರೈತರ ಭೂಮಿಗೆ ಮಾತ್ರವಲ್ಲದೆ ಜನ, ಜಾನುವಾರುಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ. ಇದರಿಂದ ಕಾಡುಪ್ರಾಣಿ ಪಕ್ಷಿಗಳು ಕಾಡಿನಿಂದ ನಾಡಿಗೆ ಬಂದು ಜೀವ ಕಳೆದುಕೊಳ್ಳುತ್ತಿವೆ. ಅಧಿಕಾರಿಗಳು ಗಮನಹರಸಿ ಕೊಳವೆ ಬಾವಿ ಕೊರೆಯುವುದು ಹಾಗೂ ಪ್ರಾಣಿ- ಪಕ್ಷಿಗಳಿಗೆ ಅಲ್ಲಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ ದೇವರಗುಡ್ಡ ಆಗ್ರಹಿಸಿದರು.ಹೂಳೆತ್ತುವ ಕೆಲಸ: ಹಲವು ವರ್ಷಗಳಿಂದ ತಾಲೂಕಿನ ಯಾವುದೇ ಜಲಾಶಯ ಹಾಗೂ ಕೆರೆಗಳ ಹೂಳು ತೆಗೆಯದೆ ಇರುವುದರಿಂದ ನೀರಿಲ್ಲದಂತಾಗಿದೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಚಿಕ್ಕ ನೀರಾವರಿ ಇಲಾಖೆಯವರು ಮಳೆಗಾಲ ಪ್ರಾರಂಭವಾಗುವ ಮುನ್ನ ಕೆರೆ ಮತ್ತು ಜಲಾಶಯಗಳ ಹೂಳೆತ್ತುವ ಕೆಲಸ ಮಾಡಬೇಕು ಎಂದು ರೈತ ರಾಜು ಗುಬ್ಬಕ್ಕನವರ ಒತ್ತಾಯಿಸಿದರು.