ಪ್ಯಾಲೇಸಿಗೆ ಎಳೆದೊಯ್ದು ಹಲ್ಲೆ, ಸತ್ತನೆಂದು ಬಿಟ್ಟುಹೋದ ಕಿಡಿಗೇಡಿಗಳು । ಯುವಕನ ಮೇಲೆ ಯುವತಿಯಿಂದ ಅತ್ಯಾಚಾರ ಕೇಸ್ ದಾಖಲು
ಕನ್ನಡಪ್ರಭ ವಾರ್ತೆ ದಾವಣಗೆರೆತಮ್ಮ ಕೋಮಿನ ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಪರಿಶಿಷ್ಟ ಪಂಗಡದ ಯುವಕನ ಹಿಡಿದೊಯ್ದ 15-20 ಜನರ ಗುಂಪು ತಾಜ್ ಪ್ಯಾಲೇಸ್‌ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ವರದಿಯಾಗಿದ್ದು, ನೈತಿಕ ಪೊಲೀಸ್‌ಗಿರಿ ಮೆರೆದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹಿಂದೂ ಪರ ಸಂಘಟನೆಗಳು ಪಟ್ಟು ಹಿಡಿದಿವೆ.
ಇಲ್ಲಿನ ಜಾಲಿ ನಗರ ನಿವಾಸಿ, ವಾಟರ್ ಪಾಯಿಂಟ್ ಕೆಲಸಗಾರ ಶ್ರೀನಿವಾಸ (30 ವರ್ಷ) ಮಾರಣಾಂತಿಕ ಹಲ್ಲೆಗೆ ಒಳಗಾದ ಯುವಕ. ಇನ್ನು 4 ತಿಂಗಳಿಗೆ ತಮ್ಮದೇ ಜಾತಿ ಯುವತಿ ಜೊತೆ ಮದುವೆಯಾಗಬೇಕಿದ್ದ ಶ್ರೀನಿವಾಸ ಶನಿವಾರ ತಮ್ಮ ನೆರೆ ಮನೆ ಯುವತಿ ಮನೆವರೆಗೆ ಬಿಡಲು ಕೇಳಿದ್ದರಿಂದ ಬೈಕ್‌ನಲ್ಲಿ ಕೂರಿಸಿದ ತಮ್ಮ ಮಗನ ಮೇಲೆ ಅನ್ಯ ಕೋಮಿನವರು ಮಾರಣಾಂತಿಕ ಹಲ್ಲೆ ಮಾಡಿದ್ದು, ಮಗನ ಸ್ಥಿತಿ ಕಂಡು ತಾಯಿ ಹನುಮಂತಮ್ಮ ಕಣ್ಣೀರು ಹಾಕಿದ್ದಾರೆ.10 ನಿಮಿಷ ಹೊರ ಹೋಗಿ ಬರುವುದಾಗಿ ತೆರಳಿದ್ದ ಶ್ರೀನಿವಾಸನ ಮೊಬೈಲ್ ರಾತ್ರಿ 8ರ ನಂತರ ಸ್ವಿಚ್ ಆಫ್ ಆಗಿದೆ. ಮನೆಯವರು ಎಲ್ಲೆಡೆ ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಶಿಬಾರ ಮೈಲಾರಲಿಂಗೇಶ್ವರ ದೇವಸ್ಥಾನ ಬಳಿ ತಮ್ಮ ಮನೆ ಸಮೀಪದ ಅನ್ಯ ಕೋಮಿನ ಯುವತಿ ಡ್ರಾಪ್ ಕೇಳಿದ್ದರಿಂದ ಶ್ರೀನಿವಾಸ ಬೈಕ್‌ನಲ್ಲಿ ಹತ್ತಿಸಿಕೊಂಡಿದ್ದಾನೆ.
ಸತ್ತಿದ್ದಾನೆಂದು ಎಸೆದು ಹೋಗಿದ್ದರು!:ಯುವತಿಯನ್ನು ಹತ್ತಿಸಿಕೊಂಡಿದ್ದ ಶ್ರೀನಿವಾಸನನ್ನು ಅನ್ಯ ಕೋಮಿನ ಕಿಡಿಗೇಡಿಗಳು ಬೈಕ್ ಸಮೇತ ಬಲವಂತವಾಗಿ ತಾಜ್ ಪ್ಯಾಲೇಸ್‌ಗೆ ಕರೆದೊಯ್ದು ಶ್ರೀನಿವಾಸನಿಗೆ ಯಾವುದೋ ಮಾತ್ರೆ ತಿನ್ನಿಸಿ ಪ್ರಜ್ಞೆ ಇಲ್ಲದಂತೆ ಮಾಡಿ, ತಡರಾತ್ರಿವರೆಗೂ ಹಲ್ಲೆ ಮಾಡಿದ್ದಾರೆ. ಆತ ಸತ್ತಿದ್ದಾನೆಂದು ರಾತ್ರೋರಾತ್ರಿ ಬನಶಂಕರಿ ಬಡಾವಣೆ ಬಳಿ ಬಿಸಾಡಿ ಕಿಡಿಗೇಡಿಗಳು ಪರಾರಿಯಾಗಿದ್ದರು. ಬೆಳಗ್ಗೆ ಎಚ್ಚರಗೊಂಡ ಶ್ರೀನಿವಾಸ ರಸ್ತೆಗೆ ಬಂದು, ದಾರಿ ಹೋಕರ ಮೊಬೈಲ್ ಪಡೆದು ತಮ್ಮ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ತಕ್ಷಣವೇ ಸಂಬಂಧಿಗಳು ಸ್ಥಳಕ್ಕೆ ಧಾವಿಸಿ, ಗಾಯಾಳು ಶ್ರೀನಿವಾಸನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲಿ ಕೊಲೆ ಕೇಸ್ ತಮ್ಮ ಮೈಮೇಲೆ ಬರುತ್ತದೋ ಎಂಬ ಭಯದಲ್ಲಿ ತಮ್ಮ ಕೋಮಿನ ಯುವತಿಯಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ.
ಆಸ್ಪತ್ರೆ ಬಳಿ ಜಮಾಯಿಸಿದ ಹಿಂದೂ ಪರ ಸಂಘಟನೆ ಮುಖಂಡರುಅನ್ಯ ಕೋಮಿನ ಕಿಡಿಗೇಡಿಗಳ ಗುಂಪು ಪರಿಶಿಷ್ಟ ಪಂಗಡದ ದಲಿತ ಯುವಕ ಶ್ರೀನಿವಾಸದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದು ನೈತಿಕ ಪೊಲೀಸ್‌ಗಿರಿ ಅಲ್ಲದೇ ಮತ್ತೇನು? ಶ್ರೀನಿವಾಸನ ಮೊಬೈಲ್ ಕಸಿದಿದ್ದು, ಬೈಕ್ ತಾಜ್ ಪ್ಯಾಲೇಸ್‌ನಲ್ಲೇ ಇದೆ. ಶ್ರೀನಿವಾಸನನ್ನು ಎಳೆದೊಯ್ದಿರುವುದು ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ. ಘಟನೆ ವಿಷಯ ತಿಳಿಯುತ್ತಿದ್ದ ಶ್ರೀರಾಮ ಸೇನೆ, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಸೇರಿ ಹಿಂದೂ ಪರ ಸಂಘಟನೆಗಳ ಮುಖಂಡರಾದ ಮಣಿಕಂಠ ಸರ್ಕಾರ್, ಸತೀಶ ಪೂಜಾರಿ ಸೇರಿ ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದ ನಂತರ ಪೊಲೀಸ್ ಅಧಿಕಾರಿಗಳು ಗಾಯಾಳುವಿನ ಹೇಳಿಕೆ ಪಡೆಯುತ್ತಿದ್ದಾರೆ ಎಂದು ಮುಖಂಡರು ದೂರಿದರು.
ಶ್ರೀನಿವಾಸನನ್ನು ಎಳೆದೊಯ್ದು, ಮಾರಣಾಂತಿಕ ಹಲ್ಲೆ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ದಲಿತ ಯುವಕ ಶ್ರೀನಿವಾಸನಿಗೆ ಜಾತಿ ನಿಂದನೆ ಮಾಡಿ, ಅಮಾನುಷವಾಗಿ ಹಲ್ಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಅಸಡ್ಡೆ ತೋರದೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಅಕಸ್ಮಾತ್ ಗಾಯಾಳು ಯುವಕನಿಗೆ ಏನೇ ಆದರೂ ಅದಕ್ಕೆ ಹಲ್ಲೆ ಮಾಡಿದ ದುಷ್ಕರ್ಮಿಗಳು, ಪೊಲೀಸ್ ಇಲಾಖೆಯೇ ನೇರ ಹೊಣೆಯಾಗಬೇಕಾದೀತು.ಮಣಿಕಂಠ ಸರ್ಕಾರ್, ಜಿಲ್ಲಾಧ್ಯಕ್ಷ, ಶ್ರೀರಾಮ ಸೇನೆ.