ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಬಹಳ ಕಾಲದಿಂದಲೂ ವಿಜಯಪುರ ಬರದ ನಾಡು ಎಂಬ ಹಣೆಪಟ್ಟಿಕೊಂಡಿದೆ. ಈ ಬಾರಿ ಕೂಡಾ ಭೀಕರ ಬರ ಜಿಲ್ಲೆಯಲ್ಲಿ ಕಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳು ಹಾಳಾಗಿ ಅನ್ನದಾತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ರೈತರ ನೆರವಿಗೆ ಬರಬೇಕಾಗಿದ್ದ ಸರ್ಕಾರಗಳು ಬರೀ ಬರಗಾಲ ಎಂದು ಸಾರಿ ಕೈಕಟ್ಟಿಕುಳಿತುಕೊಂಡು ಬಿಟ್ಟಿವೆ. ಹೀಗಾಗಿ ಅನ್ನದಾತರರ ಅಳಲು ಕೇಳುವವರೇ ಇಲ್ಲದಂತಾಗಿದೆ.
ಹೌದು, ಜಿಲ್ಲೆ, ತಾಲೂಕು ಸೇರಿ ರಾಜ್ಯದ ರೈತರ ಪಾಲಿನ ಸಂಕಷ್ಟಗಳು ಬಗೆ ಹರಿಯುತ್ತಿಲ್ಲ. ಭೀಕರ ಬರಕ್ಕೆ ರೈತರು ಹೈರಾಣಾಗಿದ್ದಾರೆ. ಈ ವರ್ಷ ಕಂಡು ಕೇಳರಿಯದ ಭೀಕರ ಬರದಿಂದಾಗಿ ರೈತರು ಲಕ್ಷಾನುಗಟ್ಟಲೆ ಬೆಳೆ ಹಾನಿ ಮಾಡಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಹಿಡಿದರಷ್ಟೇ ರೈತರಿಗೆ ಉಳಿಗಾಲ. ರಾಜ್ಯ ಸರ್ಕಾರ ಬೆಳೆಪರಿಹಾರ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೈತೊಳೆದುಕೊಂಡು ಬಿಟ್ಟಿದೆ. ಬರ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿ ಸುಮ್ಮನಾಗಿದ್ದಾರೆ. ರಾಜ್ಯ ಸರ್ಕಾರ ಇಂಡಿ ಸೇರಿ ಹಲವು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡಿ ಕೈತೊಳೆದುಕೊಂಡು ಬಿಟ್ಟಿದೆ. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿರುವುದು ಬಿಟ್ಟರೆ, ಬರಪರಿಹಾರ ಕಾಮಗಾರಿ ಆರಂಭಿಸಿರುವುದಿಲ್ಲ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಉದ್ಯೋಗ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುವುದು ಬಿಟ್ಟರೆ ತಾಲೂಕಿಗೆ ಸರ್ಕಾರದಿಂದ ಬರ ಪರಿಹಾರ ಬಂದಿರುವುದಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಸ್ಪಂದಿಸುತ್ತಿಲ್ಲ. ಬರ ಪರಿಹಾರದ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ರಾಜ್ಯ ಸರ್ಕಾರ ರೈತರ ಮೂಗಿಗೆ ತುಪ್ಪ ಸುರಿದಂತೆ ಪ್ರತಿ ರೈತರಿಗೆ 2 ಸಾವಿರ ರು.ಗಳನ್ನು ರೈತರ ಖಾತೆಗೆ ಜಮಾ ಮಾಡಿದೆ. ಇದು ರೈತರು ಭೂಮಿಗೆ ಹಾಕಿದ ಬೀಜ, ಗೊಬ್ಬರದ ಖರ್ಚು ಆಗುವುದಿಲ್ಲ ಎಂದು ರೈತರ ಆರೋಪಿಸುತ್ತಾರೆ.₹2000 ಹಾಕಿ ಕೈತೊಳೆದುಕೊಂಡ ಸರ್ಕಾರ:
ಕೃಷಿ ಇಲಾಖೆಯ ಮುಂಗಾರು ಬೆಳೆಯ ಹಂಗಾಮಿನಲ್ಲಿ ಮಳೆಯ ಕೊರತೆಯಿಂದ 88 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿದ್ದು, ₹47 ಕೋಟಿ ಬೆಳೆ ಹಾನಿ ಪ್ರಸ್ತಾವನೆ ತಾಲೂಕಿನಿಂದ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ತೋಟಗಾರಿಕೆ ಇಲಾಖೆಯ ಮುಂಗಾರು ಬೆಳೆಗಳು ಮಳೆಯ ಅಭಾವದಿಂದ 5853 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಯಾಗಿದೆ. ₹7.50 ಕೋಟಿ ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ತಾಲೂಕಿನ ಯಾವೊಬ್ಬ ರೈತನಿಗೆ ಬೆಳೆ ಹಾನಿ ಪರಿಹಾರ ಬಂದಿರುವುದಿಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಪ್ರತಿ ರೈತನ ಖಾತೆಗೆ ₹2 ಸಾವಿರಗಳನ್ನು ಹಾಕಿ ಕೈತೊಳೆದುಕೊಂಡು ಬಿಟ್ಟಿದ್ದು, ರೈತರು ನಿರಾಸೆಗೊಂಡಿದ್ದಾರೆ.ಆಗ ಕೊಟ್ಟಿತ್ತು ಈಗೇಕೆ ಕೊಡುತ್ತಿಲ್ಲ?:
ಕೇಂದ್ರ ಸರ್ಕಾರ ಬರಪರಿಹಾರ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೆ, 2015-16 ನೇ ಸಾಲಿನಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿ ಇತ್ತು. ಅಂದು ಬರದ ಹಿನ್ನಲೆಯಲ್ಲಿ ಕೃಷಿ ಇಲಾಖೆಯಿಂದ ಮುಂಗಾರು ಬೆಳೆ ಹಾನಿಗೆ ₹40 ಕೋಟಿ, ಹಿಂಗಾರು ಬೆಳೆ ಹಾನಿಗೆ ₹20 ಕೋಟಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿ ತಾಲೂಕಿನ ಸುಮಾರು 70 ಸಾವಿರ ರೈತರಿಗೆ ಹಾಗೂ ತೋಟಗಾರಿಕೆ ಇಲಾಖೆಯ ಬೆಳೆಗಳು ಹಾನಿಯಾದ ಸುಮಾರು 3390 ರೈತರಿಗೆ 95.43 ಲಕ್ಷ ತೊಟಗಾರಿಕೆ ಬೆಳೆ ಪರಿಹಾರ ಹಣ ಬಿಡುಗಡೆಯಾಗಿತ್ತು. ಇದರಿಂದ ಅಂದು ಬರದಿಂದ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗಿತ್ತು. ಇಂದು ಸಹ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಸಹ ಬರದಲ್ಲಿ ರೈತರಿಗೆ ಬೆಳೆ ಪರಿಹಾರ ಬರುತ್ತಿಲ್ಲ ಎಂಬ ಪ್ರಶ್ನೆ ರೈತರದ್ದಾಗಿದೆ.---
ಕೋಟ್ಭೀಕರ ಬರದ ಹಿನ್ನೆಲೆಯಲ್ಲಿ ರೈತರು ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ರೈತರ ನೆರವಿಗೆ ಸರ್ಕಾರ ಬರಬೇಕು. ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಿ ತೊರಿಸುವುದಕ್ಕಿಂತ ರಾಜ್ಯ ಸರ್ಕಾರ 2015-16 ನೇ ಸಾಲಿನ ಬರದಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಿದಂತೆ ಈ ಬಾರಿಯೂ ಬಿಡುಗಡೆ ಮಾಡಲಿ. ಕೇವಲ ₹2 ಸಾವಿರ ನೀಡುವುದರಿಂದ ಯಾವುದೇ ಅನುಕೂಲ ರೈತರಿಗೆ ಆಗುವುದಿಲ್ಲ. -ಗಣಪತಿ ಬಾಣಿಕೋಲ, ಪ್ರಗತಿಪರ ರೈತ,ಅಥರ್ಗಾ.