ಕನ್ನಡಪ್ರಭ ವಾರ್ತೆ ಕೆಜಿಎಫ್ಜೂನ್ ತಿಂಗಳು ಮುಗಿಯುತ್ತ ಬಂದಿದೆ, ಮಳೆರಾಯನ ಅರ್ಭಟ ಕಾಣುತ್ತಿಲ್ಲ. ಇದರಿಂದಾಗಿ ತರಕಾರಿ, ಹೂ ಮತ್ತು ಹಣ್ಣಿನ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ವರ್ಷಧಾರೆಯ ನಿರೀಕ್ಷೆಯಲ್ಲಿ ಮುಗಿಲು ನೋಡುತ್ತ ಸಮಯ ದೊಡುತ್ತಿರುವ ರೈತ ಬೇಸಾಯ ಮುಂದೂಡಿ ವರುಣನ ಆಗಮನಕ್ಕೆ ಕಾಯುತ್ತಿದ್ದಾನೆ.ಕೆಜಿಎಫ್ ತಾಲೂಕಿನಾದ್ಯಂತ ತಿಂಗಳ ಆರಂಭದಲ್ಲಿ ಒಂದೆರಡು ಬಾರಿ ಸುರಿದ ಹದವಾದ ಮಳೆಗೆ ಕಳೆದೆರಡು ವರ್ಷದಿಂದ ನೆಲೆಗಡಲೆ ಜೊತೆ ತರಕಾರಿ ಸಸಿಗಳ ಖರೀದಿಗೂ ಒಲವು ತೋರಿದ್ದರು. ಆದರೆ ಈಚೆಗೆ ಮತ್ತೆ ಉಷ್ಟಾಂಶ ಹೆಚ್ಚಾಗಿದ್ದು ಮಳೆ ಕೈಕೊಟ್ಟ ಪರಿಣಾಮ ಹೂ, ತರಕಾರಿ ಸಸಿಗಳಿಗೆ ಬೇಡಿಕೆ ತಗ್ಗಿದೆ.ತರಕಾರಿ ದರ ಹೆಚ್ಚಳ
ಪ್ರಸ್ತುತ ತರಕಾರಿಗಳ ದರ ಹೆಚ್ಚಿರುವುದರಿಂದ ಅಲ್ಪಾವಧಿಯಲ್ಲಿ ಕೊಯ್ಲಿಗೆ ಬರುವ, ಬದನೆ, ಟೊಮೆಟೋ ಸಸಿಗಳ ಬಿತ್ತನೆಗೆ ಮುಂದಾಗಿದ್ದರು, ಸಸಿಗಳ ಜೊತೆ ಹಾಗಲಕಾಯಿ, ಹೀರೇಕಾಯಿ, ಎಲೆಕೋಸು, ಊಟಿ ಬೀನ್ಸ್ ಬಿತ್ತನೆ ಬೀಜ ಮತ್ತು ಸಸಿ ಕೊಳ್ಳುವ ಧಾವಂತ ತೋರಿದ್ದರು.ಬೀಜ, ಸಸಿ ಕೊಳ್ಳುವವರೇ ಇಲ್ಲತಳಿಗಳ ಆಧಾರದ ಮೇಲೆ ಸಸಿಗಳ ಬೆಲೆ ನಿಗಧಿಪಡಿಸಲಾಗಿದೆ, ಮೆಣಸಿನಕಾಯಿ, ಬದನೆ, ಎಲೆ ಮತ್ತು ಹೂ ಕೋಸು ಸಸಿ ತಲಾ ೫೦ ರಿಂದ ೭೦ ಪೈಸೆ, ಚೆಂಡು ಹೂಗಳ ಸಸಿ ರೂ.೩, ಕ್ಯಾಪ್ಸಿಕಾಮ್ ಸಸಿ ರೂ.೬ ದರ ಇದೆ, ಕಳೆದ ೨ ವರ್ಷಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಬಳಲಿದ್ದು, ಮಾರಾಟ ಹೆಚ್ಚು ಕಂಡು ಬಂದಿರಲಿಲ್ಲ. ಈ ಸಲ ನೀರಿನ ಲಭ್ಯತೆ ಕೊರತೆ ಇದ್ದರೂ ಸಸಿಗಳನ್ನು ಬೆಳೆದಿದ್ದು, ಹದ ಮಳೆ ಸುರಿದರೆ ಸಸಿಗಳು ಹೆಚ್ಚು ಬಿಕರಿಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಸೋಮು ನರ್ಸರಿಯ ಸುರೇಶ್. ಜೂನ್ ಆರಂಭದಲ್ಲಿ ಮಳೆ ಸುರಿದ್ದರಿಂದ ೫೦ ಸಾವಿರ ಸಸಿಗಳು ಮಾರಾಟವಾಗಿತ್ತು, ಸಾಗುವಳಿದಾರರು ಬದನೆ, ಟೊಮೆಟೋ, ಹೂ ಸಸಿಗಳಿಗೆ ಹೆಚ್ಚು ಬೇಡಿಕೆ ಸಲ್ಲಿಸಿದ್ದು ನಾಡಿಗೆ ಒಲವು ತೋರಿದ್ದಾರೆ, ಸ್ವಂತ ನೀರಾವರಿ ಮೂಲ ಹೊಂದಿರುವವರು ಈಗಾಗಲೆ ಕುಂಬಳ, ಬೀನ್ಸ್, ಸೊರೆ, ಪಳ್ಳದಕಾಯಿ ಸಸಿ ಹಾಕಿದ್ದಾರೆ, ಕಾಲಕಾಲಕ್ಕೆ ಮಳೆ ಚನ್ನಾಗಿ ಸುರಿದರೆ ನರ್ಸರಿ ಮಾಲೀಕರಿಗೂ ತುಸು ಲಾಭ ಕೈ ಸೇರುತ್ತದೆ ಎಂದು ತಿಳಿಸಿದರು. ಸುಗಂಧರಾಜಗೆ ಬೇಡಿಕೆಆಗಸ್ಟ್‌ನಿಂದ ಹಬ್ಬ ಮತ್ತು ಶುಭ ಕಾರ್ಯಗಳು ಆರಂಭವಾಗುತ್ತವೆ, ವರಮಹಾಲಕ್ಷ್ಮಿ, ಶ್ರಾವಣ, ದಸರಾ, ದೀಪಾವಳಿ ಮತ್ತು ಮಹಾಲಯ ಅಮಾವಾಸ್ಯೆ ಸೇರಿ ಹಬ್ಬಗಳ ಸಾಲು ಆರಂಭವಾಗುತ್ತದೆ, ರೈತರು ನಾಟಿ ಮಾಡಿದ ೫೦ ದಿನಗಳಲ್ಲಿ ಕೊಯ್ಲಿಗೆ ಬರುವ ಚೆಂಡು ಮತ್ತು ಸುಗಂಧರಾಜ ಹೂಗಳನ್ನು ಬೆಳೆಯಲು ರೈತರು ಉತ್ಸಕರಾಗಿದ್ದಾರೆ.ಕಡಿಮೆ ಸಮಯದಲ್ಲಿ ಬಿಡಿಸಿ ಸ್ಥಳೀಯ ಮತ್ತು ನಗರ ಪ್ರದೇಶಗಳಲ್ಲೂ ಮಾರಾಟ ಮಾಡುವ ಉದ್ದೇಶದಿಂದ ಹೂ ಬೆಳೆಯುವ ಕ್ಷೇತ್ರ ಹಿಗ್ಗತ್ತ ಸಾಗಿದೆ ಎಂದು ದೊಡ್ಡಕಾರಿಯ ಕೃಷಿಕ ಪ್ರಸನ್ನ ಹೇಳಿದರು.ಕೃಷ್ಟಿಕರಿಗೆ ಸಸಿ ನೀಡುವುದರ ಜೊತೆಗೆ ರೋಗ ರುಜಿನ ಕಾಣಿಸಿಕೊಂಡಾಗ ಕೀಟ ನಿಯಂತ್ರಣ ಮಾಡುವ ಬಗ್ಗೆ ಮಾಹಿತಿ ಸಿಗುತ್ತದೆ, ಹೀಗಾಗಿ ನರ್ಸರಿಯಲ್ಲಿ ತಂದು ಸಸಿ ನೆಡುತ್ತೇವೆ ಎಂದು ತರಕಾರಿ ಬೆಳೆಗಾರ ಅಶ್ವಥ್ ಹೇಳಿದರು.ಮಳೆ ಬಂದರೆ ಬೇಡಿಕೆ
ಹಸಿರು ಮನೆ ನಿರ್ಮಿಸಿ ನರ್ಸರಿಯಲ್ಲಿ ಸಸಿ ಬೆಳೆಸಲು ಹೈಬ್ರೀಡ್ ಬೀಜ ಕೋಕೋಪಿಟ್ ಕೂಲಿ ವೆಚ್ಚ ಭರಿಸಬೇಕಿದೆ, ಸಸಿಗಳನ್ನು ಪೈಸೆಗಳ ಲೆಕ್ಕದಲ್ಲಿ ಮಾರಾಟ ಮಾಡಬೇಕು, ಮಳೆ ಬಂದರೆ ಸಸಿಗೆ ಬೇಡಿಕೆ ಕುದುರುತ್ತದೆ, ಇಲ್ಲವಾದರೆ ಸಸಿ ಬಲಿತು ಆದಾಯ ಕುಸಿಯುತ್ತದೆ ಎನ್ನುತ್ತಾರೆ ನರ್ಸರಿ ಮಾಲೀಕ ಸಂದೇಶ್ ರೆಡ್ಡಿ.