ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಈ ಬಾರಿ ಮಳೆಯ ಕೊರತೆಯಿಂದಾಗಿ ರಾಗಿ ಬೆಳೆ ಬೆಳವಣಿಗೆ ಕುಂಟಿತಗೊಂಡಿದ್ದರಿಂದ ಬೇಸರಗೊಂಡು ರೈತನೊಬ್ಬ ಬೆಳೆಯಯನ್ನೇ ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾನೆ.ತಾಲೂಕಿನ ಬನಹಳ್ಳಿ ಗ್ರಾಮದ ರೈತ ವೆಂಕಟೇಶಪ್ಪ ಎಂಬುವರು ೩೦ ಸಾವಿರ ಖರ್ಚು ಮಾಡಿ ಒಂದು ಎಕರೆ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಆದರೆ ಮಳೆ ಕೊರತೆಯಿಂದಾಗಿ ರಾಗಿ ತೆನೆ ಕಟ್ಟುವುದು ಗ್ಯಾರಂಟಿ ಇಲ್ಲ. ಅದನ್ನು ಮೇವಿಗೆ ಬಳಸಲು ಕಟಾವು ಮಾಡಿಸಲು ಕಟಾವಿನ ಕೂಲಿಯ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಆದ್ದರಿಂದ ರಾಗಿ ಹೊಲವನ್ನೇ ಟ್ರ್ಯಾಕ್ಟ್‌ರ್ ಮೂಲಕ ಉಳಿಮೆ ಮಾಡಿದ್ದಾರೆ.೧೪,೮೯೯ ಹೆಕ್ಟರ್‌ನಲ್ಲಿ ರಾಗಿ
ತಾಲೂಕಿನ ರೈತರು ಈ ಬಾರಿ ಉತ್ತಮ ಮಳೆಯೊಂದಿಗೆ ಉತ್ತಮ ಬೆಳೆ ನಿರೀಕ್ಷೆಯಲ್ಲಿ ೧೪೮೯೯ ಹೆಕ್ಟರ್ ಪ್ರದೇಶದಲ್ಲಿ ರಾಗಿಯನ್ನು ಬೆಳೆದಿದ್ದರು. ಆದರೆ ಈ ಬಾರಿ ಹಿಂಗಾರು ಮತ್ತು ಮುಂಗಾರು ಕೈಕೊಟ್ಟ ಕಾರಣ ಬಿತ್ತನೆ ಮಾಡಿದ್ದ ರಾಗಿ ಫಸಲು ಒಣಗಿತ್ತು. ಇತ್ತಿಚೆಗೆ ಅಲ್ಪ ಪ್ರಮಾಣದಲ್ಲಿ ಬಿದ್ದ ಮಳೆಗೆ ಬೆಳೆ ಜೀವ ಪಡೆದಿತ್ತು. ಆದರೆ ಬೆಳೆಯು ಸರಿಯಾದ ಪ್ರಮಾಣದಲ್ಲಿ ಬೆಳೆವಣಿಗೆ ಕಾಣಲಿಲ್ಲ. ಮತ್ತೆ ಮಳೆ ಕೈ ಕೊಟ್ಟ ಕಾರಣ ಬೆಳೆಯನ್ನು ಆರೈಕೆ ಮಾಡಲು ಸಾಧ್ಯವಿಲ್ಲ ಎಂದು ಬಹಳಷ್ಟು ರೈತರು ರಾಗಿ ಬೆಳೆ ನಾಶಪಡಿಸಲು ಮುಂದಾಗಿದ್ದಾರೆ.ಕೆಲವು ರೈತರು ರಾಗಿಯನ್ನು ನಾಶ ಮಾಡುವ ಮೂಲಕ ಭೂಮಿಯ ಫಲವತ್ತತೆ ಮಾಡಿ ಮುಂದೆ ಮಳೆ ಬಂದರೆ ಹುರಳಿಯಾದರೂ ಕೈ ಹಿಡಿಯಬಹುದು ಎಂಬ ಆಶಾಭಾವನೆಯಿಂದ ಹುರಳಿ ಬಿತ್ತನೆ ಕಾರ್ಯ ನಡೆಸುತ್ತಿದ್ದಾರೆ. ಪರಿಹಾರ ನೀಡಲು ಆಗ್ರಹಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಇಲ್ಲದೆ ರಾಗಿ ನೆಲಗಡಲೆ ಸೇರಿದಂತೆ ಬಿತ್ತನೆ ಮಾಡಿದ ದ್ವಿಧಳ ಧಾನ್ಯಗಳು ಸಹ ನಾಶವಾಗುವ ಮೂಲಕ ರೈತರಿಗೆ ಮೇಲಿಂದ ಮೇಲೆ ಲಕ್ಷಾಂತರ ರೂ ನಷ್ಟ ಉಂಟಾಗುತ್ತಿದೆ. ಸರ್ಕಾರ ಬೆಳೆ ಪರಿಹಾರ ನೀಡುವ ಮೂಲಕ ರೈತರ ಕಷ್ಟಕ್ಕೆ ನೆರವಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.