ಶರವೇಗದಲ್ಲಿ ಬೆಳೆಯುತ್ತಿರುವ ಕೊಪ್ಪಳಕ್ಕೆ ಬೇಕು ಇಚ್ಛಾಶಕ್ತಿ ಬಲ

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ತುಂಗಭದ್ರಾ ಪ್ರವಾಹ, ಹರಿವು- ಕಾಲುವೆ, ನವಲಿ ಜಲಾಶಯ, ಸಮಾಂತರ ಜಲಾಶಯಗಳು, ಹಿರೇಹಳ್ಳ ಎತ್ತರ ಹೆಚ್ಚಳ, ತುಂಗಭದ್ರಾ ಹೂಳಿಗೆ ಪರಿಹಾರ ಸೇರಿ ಹಲವಾರು ಯೋಜನೆಗಳು ಬಾಕಿ ಇವೆ.

ಸೋಮರಡ್ಡಿ ಅಳವಂಡಿಕೊಪ್ಪಳ: ಶರವೇಗದಲ್ಲಿ ಬೆಳೆಯುತ್ತಿರುವ ಕೊಪ್ಪಳ ಮೊದಲಿನಂತೆ ಇಲ್ಲ. ನಿಜಾಮರ ಕಾಲದ ಶೋಷಣೆಯಲ್ಲಿ ಸೊರಗಿದ್ದ ಕೊಪ್ಪಳ ಸ್ವಾತಂತ್ರ್ಯ ನಂತರ ತನ್ನ ಪಥ ಬದಲಿಸಿದೆ. ಉತ್ತರ ಕರ್ನಾಟದಲ್ಲೇ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿ ಮಾರ್ಪಟ್ಟಿದೆ. ಅದಕ್ಕೊಂದಿಷ್ಟು ರಾಜಕೀಯ ಇಚ್ಛಾಶಕ್ತಿ, ಒಗ್ಗಟ್ಟಿನ ಬಲ ಸಿಗಬೇಕಿದೆ.2023ರ ಹಿನ್ನೋಟವನ್ನೊಮ್ಮೆ ನೋಡಿದರೆ ಬೆಲ್ಲಕ್ಕಿಂತ ಬೇವಿನ ಕಹಿಯೇ ಹೆಚ್ಚಾಗಿರುವುದು ಕಂಡು ಬರುತ್ತಿದೆ. ಆದರೆ, ಈ 2024ರಲ್ಲಿ ಬೇವಿನ ಕಹಿ ಕಡಿಮೆಯಾಗಿ ಬೆಲ್ಲದ ಸಿಹಿಯೇ ಹೆಚ್ಚಾಗಲಿ.ಗವಿಸಿದ್ದೇಶ್ವರ ಜಾತ್ರೆ, ಹುಲಿಗೆಮ್ಮದೇವಿ ದೇವಸ್ಥಾನ, ಹಿರೇಬೆಣಕಲ್, ಅಂಜನಾದ್ರಿಯ ಮಹಿಮೆಯಿಂದ ಕೊಪ್ಪಳದ ಕೀರ್ತಿ ದೇಶ, ವಿದೇಶಗಳಲ್ಲೂ ಹರಡಿದೆ.ಕೋಟಿ ಪ್ರವಾಸಿಗರು: ರಾಮಾಯಣ, ಮಹಾಭಾರತದ ಐತಿಹ್ಯಗಳ ಜತೆಗೆ ಐತಿಹಾಸಿಕ ಕುಮಾರರಾಮಗುಡ್ಡ, ಆನೆಗೊಂದಿ, ಇಟಗಿ ಮಹದೇವ ದೇವಾಲಯ, ಕೋಟಿಲಿಂಗಗಳ ಪುರವನ್ನೊಳಗೊಂಡಂತೆ ಅಶೋಕ ಶಿಲಾಶಾಸನದ ಕೀರ್ತಿಯೊಂದಿಗೆ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ. ಹೀಗಾಗಿ, ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ.ಪ್ರತಿ ವರ್ಷ ಕೊಪ್ಪಳಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಕೋಟಿ ದಾಟುವ ಹಂತ ತಲುಪಿದೆ. ಉತ್ತರ ಕರ್ನಾಟಕದ ಕೆಲವೇ ಕೆಲವು ಜಿಲ್ಲೆಗಳಿಗೆ ಇರುವ ಅವಕಾಶವಿದು.ಇಲ್ಲಿ ಪ್ರವಾಸೋದ್ಯಮದ ಕ್ರಾಂತಿಯಾಗಬೇಕಿದೆ. ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಬೇಕಿದೆ. ಅಂಜನಾದ್ರಿಯಲ್ಲಿ ವಾಸ್ತವ್ಯಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯಾಗಬೇಕಾಗಿದೆ.ನೀರಾವರಿ ಯೋಜನೆಗಳು: ಜಿಲ್ಲೆಯಲ್ಲಿ ನೀರಾವರಿಗೂ ಸಾಕಷ್ಟು ಅವಕಾಶಗಳಿವೆ. ಅವುಗಳ ಅನುಷ್ಠಾನಕ್ಕಾಗಿ ನಿರೀಕ್ಷೆಯಷ್ಟು ಪ್ರಯತ್ನ ನಡೆಯುತ್ತಿಲ್ಲ ಎನ್ನುವುದೇ ದುರಂತ. ಈಗಾಗಲೇ ಶೇ.40 ನೀರಾವರಿಯಾಗಿದೆ. ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳು ಪೂರ್ಣಗೊಂಡರೆ ಶೇ.80-90 ನೀರಾವರಿ ಪ್ರದೇಶವಾಗಲಿದೆ.ಸಿಂಗಟಾಲೂರು ಏತನೀರಾವರಿ ಯೋಜನೆ ಪೂರ್ಣಗೊಂಡಿದ್ದರೂ ಜಿಲ್ಲೆ ನೀರಾವರಿಯಾಗುತ್ತಿಲ್ಲ. ಅಳವಂಡಿ-ಬೆಟಗೇರಿ ಏತನೀರಾವರಿ ಸೇರಿದಂತೆ ಹತ್ತಾರು ನೀರಾವರಿ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ. ಅವು ಪೂರ್ಣಗೊಳ್ಳಬೇಕಿದೆ. ಕೃಷ್ಣಾ ಬಿ ಸ್ಕೀಂ ಯೋಜನೆ ಜಾರಿಯಾಗುತ್ತಿಲ್ಲ. ಪ್ರಾಯೋಗಿಕವಾಗಿ ಕೃಷ್ಣೆ ಕೊಪ್ಪಳ ಜಿಲ್ಲೆಗೆ ಬಂದರೂ ಅದು ಪರಿಪೂರ್ಣವಾಗಿ ಅನುಷ್ಠಾನವಾಗಿಲ್ಲ.ತುಂಗಭದ್ರಾ ಪ್ರವಾಹ, ಹರಿವು- ಕಾಲುವೆ, ನವಲಿ ಜಲಾಶಯ, ಸಮಾಂತರ ಜಲಾಶಯಗಳು, ಹಿರೇಹಳ್ಳ ಎತ್ತರ ಹೆಚ್ಚಳ, ತುಂಗಭದ್ರಾ ಹೂಳಿಗೆ ಪರಿಹಾರ ಸೇರಿ ಹಲವಾರು ಯೋಜನೆಗಳು ಬಾಕಿ ಇವೆ.ಬೇಕು ಭೂ ಬ್ಯಾಂಕ್: ಕೊಪ್ಪಳಕ್ಕೊಂದು ಭೂ ಬ್ಯಾಂಕ್ ತೀರಾ ಅಗತ್ಯವಿದೆ. ಈಗ ಬೆಳೆಯುತ್ತಿರುವ ಕೊಪ್ಪಳಕ್ಕೆ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಕನಿಷ್ಠ ಜಾಗವೂ ಇಲ್ಲದಂತಾಗಿದೆ. ವಿವಿ, ಪಿಜಿ ಸೆಂಟರ್‌, ಪದವಿ ಕಾಲೇಜು ಕಟ್ಟಡ ಸೇರಿದಂತೆ ಹತ್ತಾರು ಯೋಜನೆಗಳಿಗಾಗಿ ಕೊಪ್ಪಳ ಬಳಿ ಸಾವಿರ ಎಕರೆ ಭೂಮಿ ಬೇಕೇಬೇಕು.ವಿವಾದದಲ್ಲಿರುವ 996 ಎಕರೆ ಭೂಮಿಯನ್ನು ಸರ್ಕಾರವೇ ಸ್ವಾಧೀನಪಡಿಸಿಕೊಂಡು ಜಿಲ್ಲಾಡಳಿತದಿಂದ ಭೂ ಬ್ಯಾಂಕ್ ಸ್ಥಾಪಿಸಲೇಬೇಕು.ಕೊಪ್ಪಳಕ್ಕೆ ವಿವಿ ಬರಲಿ: ಕೊಪ್ಪಳ ವಿವಿ ಈಗ ಸೂಕ್ತ ಕಟ್ಟಡ ಇಲ್ಲದೇ ತಳಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾರಂಭಿಸಲಾಗಿದೆ. ಅದನ್ನು ತಕ್ಷಣ ಕೊಪ್ಪಳಕ್ಕೆ ಸ್ಥಳಾಂತರವಾಗಬೇಕು. ಮಲೆಮಲ್ಲೇಶ್ವರ ಬೆಟ್ಟದ ಮಧ್ಯೆ ಸುಮಾರು 100 ಎಕರೆ ಭೂಮಿ ಇದ್ದು, ಅಲ್ಲಿ ಪಿಜಿ ಸೆಂಟರ್, ಪದವಿ ಕಾಲೇಜು, ವಿವಿ ಪ್ರಾರಂಭಿಸುವುದಕ್ಕೆ ಸೂಕ್ತ ಸ್ಥಳವಿದೆ. ಅಲ್ಲೊಂದು ಶೈಕ್ಷಣಿಕ ವಲಯ ನಿರ್ಮಾಣವಾಗಲು ಸಾಧ್ಯ.ಕಾರ್ಖಾನೆಗಳಿಗೆ ಕಡಿವಾಣ: ಜಿಲ್ಲಾ ಕೇಂದ್ರದ ಬಳಿ ಈಗಾಗಲೇ ಅನೇಕ ಕಾರ್ಖಾನೆಗಳು ತಲೆ ಎತ್ತಿದ್ದರಿಂದ ಕೊಪ್ಪಳ ತೋರಣಗಲ್ ಆಗುವ ಆತಂಕ ಎದುರಾಗಿದೆ. ಹೀಗಾಗಿ, ಕೂಡಲೇ ಕಡಿವಾಣ ಹಾಕಬೇಕು. ಕೊಪ್ಪಳಕ್ಕೆ ಹೊಂದಿಕೊಂಡಿರುವ ಕಾರ್ಖಾನೆ ಸ್ಥಳಾಂತರವಾಗಬೇಕು.ವಿಮಾನ ನಿಲ್ದಾಣ: ಜಿಲ್ಲೆಯಲ್ಲಿ ಖಾಸಗಿ ವಿಮಾನ ತಂಗುದಾಣವಿದೆ. ಆದರೆ, ಬೆಳೆಯುತ್ತಿರುವ ಕೊಪ್ಪಳಕ್ಕೆ ತುರ್ತಾಗಿ ವಿಮಾನ ನಿಲ್ದಾಣದ ಅಗತ್ಯವಿದೆ. ಈಗಾಗಲೇ ಘೋಷಣೆಯಾಗಿದೆ. ಇದಕ್ಕಾಗಿ ಭೂ ಸ್ವಾಧೀನಕ್ಕೂ ಹಣ ನೀಡಲಾಗಿದೆ. ಆದರೆ, ಅದು ಕಾರ್ಯಗತವಾಗುತ್ತಿಲ್ಲ.ರೈಸ್ ಪಾರ್ಕ್: ರಾಜ್ಯದಲ್ಲೇ ಅತಿಹೆಚ್ಚು ಭತ್ತ ಬೆಳೆಯುವ ಕೊಪ್ಪಳ ಜಿಲ್ಲೆಯಲ್ಲಿ ರೈಸ್ ಪಾರ್ಕ್ ನಿರ್ಮಾಣದ ಅಗತ್ಯವಿದೆ. ಅನುಷ್ಠಾನ ಹಂತದಲ್ಲಿರುವ ರೈಸ್ ಟೆಕ್ನಾಲಜಿ ಪಾರ್ಕ್ ಆರಂಭಕ್ಕೆ ವೇಗ ಬೇಕಿದೆ.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಮತ್ತು ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭವಾದ ಮೇಲೆ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಈಗ ಇಲ್ಲಿರುವ ರೋಗಿಗಳ ಸಂಖ್ಯೆ ಹೆಚ್ಚಳ ನೋಡಿದರೆ ಇಲ್ಲೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಇದನ್ನು ಈ ಹಿಂದಿನ ಸರ್ಕಾರ ಕೇವಲ ಘೋಷಣೆ ಮಾಡಿದ್ದು, ಅನುಷ್ಠಾನ ಮಾಡಬೇಕಾಗಿದೆ.

ಜಿಲ್ಲಾ ಸಹಕಾರಿ ಬ್ಯಾಂಕ್: ಕೊಪ್ಪಳ ಜಿಲ್ಲೆಯಾಗಿ 25 ವರ್ಷಗಳೇ ಗತಿಸಿದರೂ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈಗಲೂ ರಾಯಚೂರು ಜಿಲ್ಲಾ ಸಹಕಾರಿ ಬ್ಯಾಂಕ್ ಇದೆ. ತುರ್ತಾಗಿ ಇದು ಪ್ರತ್ಯೇಕಗೊಳ್ಳಬೇಕಾಗಿದೆ.

ಶುದ್ಧ ಕುಡಿಯುವ ನೀರು: ಪಕ್ಕದಲ್ಲಿಯೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ಜನರಿಗೆ ಶುದ್ಧ ಕುಡಿಯುವ ನೀರು ಇಲ್ಲ. ಈಗಲೂ ಬಹುತೇಕ ಗ್ರಾಮಗಳು ಕೆರೆ, ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದಾರೆ.

ಕಲುಷಿತ ನೀರು ಸೇವಿಸಿ ಐವರು ಸಾವನ್ನಪ್ಪಿದ್ದಾರೆ ಎಂದರೆ ನೀರಿನ ಸಮಸ್ಯೆ ಎಷ್ಟಿರಬಹುದು ಎನ್ನುವುದು ವೇದ್ಯವಾಗುತ್ತದೆ.

ಯಲಬುರ್ಗಾ-ಕುಷ್ಟಗಿ ತಾಲೂಕಿಗೆ ಕೃಷ್ಣೆಯಿಂದ ಕುಡಿಯುವ ನೀರು ತರುವ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಅದೇ ರೀತಿ ಕೊಪ್ಪಳ, ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕುಗಳಿಗೂ ನೀರು ನೀಡುವಂತಾಗಬೇಕು.

ಜಿಲ್ಲೆಯಲ್ಲಿ ಬೃಹತ್ ಕಾರ್ಖಾನೆಗಳಿವೆ. ದೂರದ ಪ.ಬಂಗಾಳ, ಬಿಹಾರ ಸೇರಿ ಹಲವಾರು ರಾಜ್ಯಗಳ ಸಾವಿರಾರು ಕಾರ್ಮಿಕರು ಕೆಲಸ ಅರಸಿ ಕೊಪ್ಪಳಕ್ಕೆ ಬಂದಿದ್ದಾರೆ. ಆದರೆ, ಜಿಲ್ಲೆಯ ಜನರು ಗುಳೆ ಹೋಗುವುದು ತಪ್ಪಿಲ್ಲ. ಇದನ್ನು ತಪ್ಪಿಸಲು ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕೆಲಸ ದೊರೆಯುವಂತಾಗಬೇಕು.ದೇಶದ ಮೊದಲ, ಏಕೈಕ ಆಟಿಕೆ ಕ್ಲಸ್ಟರ್ ಕುಕನೂರು ತಾಲೂಕಿನ ಭಾನಾಪುರ ಬಳಿ ತಲೆ ಎತ್ತುತ್ತಿದೆಯಾದರೂ ಅದು ನಿರೀಕ್ಷೆಯಂತೆ ಪ್ರಗತಿ ಕಾಣುತ್ತಿಲ್ಲ. ಮೊದಲಿದ್ದ ವೇಗ ಈಗ ಇಲ್ಲ. ಖಾಸಗಿಯಾಗಿ ಪ್ರಾರಂಭವಾಗಿರುವ ಆಟಿಗೆ ಕ್ಲಸ್ಟರ್‌ಗೆ ವೇಗ ನೀಡುವಂತೆ ರಾಜಕೀಯ ಒತ್ತಡ ಹಾಕಬೇಕಾಗಿದೆ.

ಸಾರಿಗೆ ಕ್ರಾಂತಿ: ಹೆದ್ದಾರಿ ಹಬ್ ಎನ್ನುವಷ್ಟರ ಮಟ್ಟಿಗೆ ಜಿಲ್ಲೆಯಲ್ಲಿ ಹೆದ್ದಾರಿಗಳಿವೆ. ರೈಲ್ವೆ ಲೈನ್ ಸಹ ಇದೆ. ಎರಡು ರಾ.ಹೆ. ಸಂಧಿಸುವ ಹಿಟ್ನಾಳ ಟೋಲ್ ಗೇಟ್ ಬಳಿ ಬಸ್ ನಿಲ್ದಾಣ ನಿರ್ಮಾಣವಾದರೆ ಸಾರಿಗೆಯ ಕ್ರಾಂತಿ ಆಗಲಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಬೆಸೆಯುವ ಸಂಗಮ ಇದಾಗಲಿದೆ. ಕೊಪ್ಪಳದಿಂದ ನಾಡಿನ ಮೂಲೆ ಮೂಲೆಗೆ ಹೋಗುವುದಕ್ಕೂ ಪ್ರತಿ ಅರ್ಧಗಂಟೆಗೊಂದು ಬಸ್ ಸೌಕರ್ಯ ದೊರೆಯಲಿದೆ. ಬಸ್ ನಿಲ್ದಾಣದಿಂದ ಪ್ರತಿ ಅರ್ಧಗಂಟೆಗೊಂದು ಬಸ್ ಜಿಲ್ಲಾ ಕೇಂದ್ರಕ್ಕೆ ಪ್ರಾರಂಭಿಸಬೇಕು.

Share this article