ಸಮನ್ವಯತೆಯಿಂದ ಸಮಗ್ರ ಅಭಿವೃದ್ಧಿಗೆ ದೃಢ ಹೆಜ್ಜೆ: ಜಿಲ್ಲಾಧಿಕಾರಿ ದಿವ್ಯಪ್ರಭು

KannadaprabhaNewsNetwork | Published : Feb 21, 2024 2:03 AM

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ಏನೆಲ್ಲ ಮಾಡಲು ಸಾಧ್ಯ ಎನ್ನುವುದನ್ನು ಅರಿಯಲು ಜಿಲ್ಲಾಧಿಕಾರಿ ದಿವ್ಯಪ್ರಭು ಮಂಗಳವಾರ ಇಲ್ಲಿನ ವಿವಿಧ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು, ಹಿರಿಯ ಪತ್ರಕರ್ತರ ಜತೆ ಸಂವಾದ ನಡೆಸಿದರು.

ಹುಬ್ಬಳ್ಳಿ: ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಧಾರವಾಡ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಗೆ ದೃಢ ಹೆಜ್ಜೆ ಇಡುವುದಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಜೆಆರ್‌ಜಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಹಿಂದೆ ಚಿತ್ರದುರ್ಗ ಜಿಲ್ಲಾಧಿಕಾರಿ ಆಗಿದ್ದ ವೇಳೆ ತಮ್ಮ ಕ್ರೀಯಾಶೀಲತೆ ಮತ್ತು ಮಾನವೀಯ ಕಳಕಳಿಯ ಕನಸಿನಿಂದಾಗಿ ಆಡಳಿತದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿ ಜನಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯ ತಲುಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಅವರು ಧಾರವಾಡ ಜಿಲ್ಲೆಯಲ್ಲೂ ಏನೆಲ್ಲ ಮಾಡಲು ಸಾಧ್ಯ ಎನ್ನುವುದನ್ನು ಅರಿಯಲು ಮಂಗಳವಾರ ಇಲ್ಲಿನ ವಿವಿಧ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು, ಹಿರಿಯ ಪತ್ರಕರ್ತರ ಮುಕ್ತ ಸಲಹೆಗಳಿಗೆ ಕಿವಿಯಾಗಿದ್ದರು.

ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಮಹಾನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಆಡಳಿತ ವೈಖರಿ, ಜನಸಾಮಾನ್ಯರ ತೊಳಲಾಟ, ವಿವಿಧ ಯೋಜನೆಯ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತ ಉಂಟು ಮಾಡಿರುವ ಆವಾಂತರಗಳನ್ನು ಪತ್ರಕರ್ತರು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಸ್ಮಾರ್ಟ್‌ಸಿಟಿ ಅಲ್ಲ. ಅಗ್ಲಿ ಸಿಟಿ.. ಧೂಳುಮುಕ್ತ ಎನ್ನುವುದು ಕನಸಿನ ಮಾತು. ಕಾಮಗಾರಿಗಳು ಮುಗಿಯುವುದ್ಯಾವಾಗ ಎಂಬುದೇ ತಿಳಿಯುತ್ತಿಲ್ಲ. ಉಪಯೋಗವಿಲ್ಲದ ಕಡೆ ಇಂದಿರಾ ಕ್ಯಾಂಟೀನ್‌.. ತೆಗ್ಗುಗುಂಡಿಗಳಿಂದ ರಸ್ತೆ, ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಇತ್ಯಾದಿಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದರೂ ಅಧಿಕಾರಿಗಳು ಕಣ್ಣೆತ್ತಿ ನೋಡುವುದಿಲ್ಲ ಎನ್ನುವುದನ್ನು ಒತ್ತಿ ಹೇಳಿದರು.

ಬರೀ ಸಮಸ್ಯೆಗಳನ್ನು ಮಾತ್ರ ಹೇಳಲಿಲ್ಲ, ಅವುಗಳ ಪರಿಹಾರಕ್ಕೆ ಇರುವ ಮಾಗೋರ್ಪಾಯಗಳನ್ನು ಪತ್ರಕರ್ತರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು. ಮುಂದಿನ 25 ವರ್ಷಗಳ ಕಾಲದಲ್ಲಿ ಯಾವ ರೀತಿ ನಗರವನ್ನು ಅಭಿವೃದ್ಧಿ ಪಡಿಸಬಹುದು. ಅದಕ್ಕೆ ಏನು ಮಾಡಬೇಕು ಎಂಬ ಬಗ್ಗೆಯೂ ಸಲಹೆಗಳನ್ನು ಹಿರಿಯ ಪತ್ರಕರ್ತರು ನೀಡಿದರು.

ಧೂಳುಮುಕ್ತವಾಗಲಿ:

ಹು-ಧಾ ರಾಜ್ಯದ ಎರಡನೆಯ ದೊಡ್ಡ ನಗರ ಎನಿಸಿಕೊಂಡಿದೆ. ಆದರೆ, ಧೂಳುಮುಕ್ತವನ್ನಾಗಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ನಗರದ ಯಾವುದೇ ಭಾಗಕ್ಕೆ ಹೋದರೆ ಧೂಳಿನಿಂದಲೇ ಕೂಡಿರುತ್ತದೆ. ಹೀಗಾದರೆ, ವಾಣಿಜ್ಯನಗರಿಗೆ ಬರುವುದಾದರೂ ಯಾರು? ರಸ್ತೆಗಳೆಲ್ಲ ತಗ್ಗು ಗುಂಡಿಗಳಿಂದಲೇ ಕೂಡಿರುತ್ತವೆ. ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ತ್ವರಿತವಾಗಿ ಮುಗಿಯುತ್ತಲೇ ಇಲ್ಲ. ಇಲಾಖೆಗಳ ಸಮನ್ವಯ, ಹೊಂದಾಣಿಕೆ ಕೊರತೆಯಿಂದ ಯೋಜನೆಗಳೆಲ್ಲ ಹಳ್ಳ ಹಿಡಿದಿವೆ.

ಇ- ಟಾಯ್ಲೆಟ್‌ ಬರೀ ಹೆಸರಿಗಷ್ಟೇ ಸೀಮಿತವಾಗಿದೆ. ಅವೆಲ್ಲವು ಹಾಳಾಗಿ ಹೋಗಿದೆ. ಪಾಲಿಕೆ, ತಹಸೀಲ್ದಾರ್‌ ಕಚೇರಿ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳು ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ ಅದನ್ನು ತಪ್ಪಿಸಿ.. ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳಿಸಿ, ಜಿಡ್ಡುಗಟ್ಟಿದ ಆಡಳಿತ ಯಂತ್ರ ಚುರುಕು ಮುಟ್ಟಿಸಿ ಎಂದು ಸಲಹೆ ನೀಡಿದ್ದು ವಿಶೇಷ.

ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳೆಲ್ಲ ಅವೈಜ್ಞಾನಿಕವಾಗಿಯೇ ಇವೆ. ಇಂದಿರಾ ಗ್ಲಾಸ್‌ ಹೌಸ್‌ನಲ್ಲಿನ ಆಟಿಕೆ ರೈಲು, ಫಜಲ್‌ ಕಾರ್‌ ಪಾರ್ಕಿಂಗ್‌, ತೋಳನಕೆರೆ, ಉಣಕಲ್‌ ಉದ್ಯಾನ ಹೀಗೆ ಎಲ್ಲವೂ ಅವೈಜ್ಞಾನಿಕತೆಯಿಂದ ಕೂಡಿವೆ. ಹೀಗಾಗಿ ಅವು ಯಾವ ಉಪಯೋಗಕ್ಕೆ ಬರುತ್ತಲೇ ಇಲ್ಲ. ಅನುದಾನ ಭರಪೂರ ಬರುತ್ತದೆ. ಆದರೆ ಅವುಗಳ ಅನುಷ್ಠಾನ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ.

ಕೆರೆಗಳನ್ನು ಅಭಿವೃದ್ಧಿ ಪಡಿಸಿ:

ನಗರದಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ಪ್ರೇಕ್ಷಣೀಯ ಸ್ಥಳಗಳನ್ನಾಗಿ ಮಾಡಬೇಕು ಮತ್ತು ವಾಟರ್ ಗೇಮ್ಸ್ ಸೇರಿದಂತೆ ಮನೋರಂಜನಾತ್ಮಕವಾಗಿ ಅವುಗಳನ್ನು ಪರಿವರ್ತಿಸಿದರೆ ಆದಾಯವೂ ದ್ವಿಗುಣಗೊಳ್ಳುತ್ತದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯನ್ನು ಜಾಗ್ರತಗೊಳಿಸಬೇಕು ಎಂದು ಸಲಹೆ ನೀಡಲಾಯಿತು.

ಶೌಚಾಲಯ ನಿರ್ವಹಣೆ, ಸರ್ಕಾರಿ ಕಚೇರಿಯಲ್ಲಿನ ಅವ್ಯವಹಾರ, ನಿರಂತರ ಕುಡಿಯುವ ಯೋಜನೆಯ ಅನುಷ್ಠಾನ, ಸರ್ಕಾರಿ ಇಲಾಖೆಯಲ್ಲಿನ ಸರ್ವರ್ ಸಮಸ್ಯೆ, ಧಾರವಾಡ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಆಗಿದ್ದ ಗುರುಕುಲ ಮರುಸ್ಥಾಪನೆ ಸೇರಿದಂತೆ ಇತರ ಸಮಸ್ಯೆಗಳನ್ನು ಶೀಘ್ರವೇ ಬಗೆ ಹರಿಸಬೇಕು.

ಹತ್ತಾರು ಕೋಟಿ ಅನುದಾನದಲ್ಲಿ ನಿರ್ಮಿಸಲಾದ ಕನ್ನಡ ಭವನ ಮತ್ತು ಸಾಂಸ್ಕೃತಿಕ ಭವನಗಳು ಪ್ರಯೋಜನಕ್ಕೆ ಬಾರದೇ ಭೂತ ಬಂಗಲೆಯಾಗಿ ಪರಿವರ್ತನೆಗೊಂಡಿವೆ. ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿದರೆ ಬಹುಷಃ ಸಾರ್ವಜನಿಕರಿಗೆ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಲಾಯಿತು.

25 ವರ್ಷದ ಪ್ಲ್ಯಾನಿಂಗ್‌:

ನಗರದ ಅಭಿವೃದ್ಧಿ ಯೋಜನೆಗಳ 25 ವರ್ಷಗಳ ಮುಂದಾಲೋಚನೆಯನ್ನು ಇಟ್ಟುಕೊಂಡು ಮಾಸ್ಟರ್ ಪ್ಲಾನ್ ರೂಪಿಸಬೇಕು. ಅದಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ನಿರಂತರ ನೀರು ಯೋಜನೆ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಅಡುಗೆ ಅನಿಲದ ಪೈಪ್ ಲೈನ್ ಅಳವಡಿಕೆ, ಹೆಣ್ಣುಮಕ್ಕಳ ಮಾರಾಟ ಜಾಲ ತಡೆಯುವಿಕೆ, ಬೆಣ್ಣೆ ಹಳ್ಳ ಮತ್ತು ತುಪರಿ ಹಳ್ಳದ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಆಗುವ ಕೆಲಸಗಳಾಗಬೇಕು.

ಇಂದಿರಾ ಕ್ಯಾಂಟೀನ್‌ ಕೈಗಾರಿಕಾ ಪ್ರದೇಶಗಳಲ್ಲಿ ಸ್ಥಾಪಿಸಬೇಕು. ಅಂದಾಗ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಉಣಕಲ್‌ ಉದ್ಯಾನವನದಲ್ಲಿ ಸ್ಥಾಪಿಸಲಾಗಿದೆ. ಅಲ್ಲಿ ಊಟ ಮಾಡಿ ಗಾರ್ಡನ್‌ನಲ್ಲಿ ಮಲಗುವವರ ಸಂಖ್ಯೆಯೇ ಜಾಸ್ತಿ. ಅದರ ಬದಲು ಹಸಿವು ಇದ್ದವರಲ್ಲಿ ಸ್ಥಾಪಿಸಿದರೆ ಅನುಕೂಲ ಎಂದು ಹಿರಿಯ ಪತ್ರಕರ್ತರು ಸಲಹೆ ನೀಡಿದ್ದು ವಿಶೇಷ.

ಕೆಯುಐಡಿಎಫ್‌ಸಿ ನಿರ್ದೇಶಕ ಮೇಜರ್ ಸಿದ್ದಲಿಂಗಯ್ಯ, ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ಸುರೇಶ ಹಿರೇಮಠ, ಎಲ್ಲ ಪತ್ರಿಕೆಗಳ ಸ್ಥಾನಿಕ ಸಂಪಾದಕರು, ಮುಖ್ಯ ವರದಿಗಾರರು ಹಾಜರಿದ್ದರು.

ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ

ಜಿಲ್ಲೆಯ ಮೂಲ ಸೌಲಭ್ಯಗಳ ನಿರ್ವಹಣೆಯಲ್ಲಿ ಆಗಿರುವ ಸಮಸ್ಯೆಗಳನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಂದೇ ದಿನದಲ್ಲಿ ಎಲ್ಲವೂ ಸರಿ ಆಗುವುದಿಲ್ಲ. ಆದರೆ, ಆದ್ಯತೆ ಮೇರೆಗೆ ಎಲ್ಲವನ್ನೂ ಹಂತ ಹಂತವಾಗಿ ಸರಿಪಡಿಸುತ್ತೇನೆ ಎಂದು ಜಿಲ್ಲಾಧಿಕಾರಿ ದಿವ್ಯಾ ಪ್ರಭು ಹೇಳಿದರು.

ಹಿರಿಯ ಪತ್ರಕರ್ತರ ಸಲಹೆ ಸ್ವಾಗತಿಸಿದ ಅವರು, ಅವೈಜ್ಞಾನಿಕ ರಸ್ತೆ ಅಗೆತಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆರ್ಥಿಕವಾಗಿಯೂ ಇದು ಸರ್ಕಾರಕ್ಕೆ ನಷ್ಟ. ರಸ್ತೆ ಧೂಳು, ಸಂಚಾರ ದಟ್ಟಣೆಗೆ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆಯೂ ಇದಕ್ಕೆ ಕಾರಣ. ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ, ಈ ಸಮಸ್ಯೆ ಸರಿಪಡಿಸಲಾಗುವುದು ಎಂದು ತಿಳಿಸಿದರು. ಕೆರೆಗಳನ್ನು ಸೌಂದಯೀರ್ಕರಣಗೊಳಿಸುವ ಮೊದಲು ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯ. ಮಳೆಗಾಲ ಪ್ರಾರಂಭಗೊಳ್ಳುವ ಮುಂಚೆ ಹೂಳೆತ್ತಲಾಗುವುದು. ಕೆರೆಗಳ ಸಂರಕ್ಷಣೆಗೆ ಪ್ರಾಮುಖ್ಯ ನೀಡಲಾಗುವುದು ಎಂದರು.

ಜಿಲ್ಲೆಯ ಇತರ ತಾಲೂಕು ಹಾಗೂ ಗ್ರಾಮೀಣ ಕೇಂದ್ರಗಳ ನಿರ್ವಹಣೆಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಇದ್ದು, ಜಿಲ್ಲಾಧಿಕಾರಿಯವರೂ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಮಹಾನಗರಕ್ಕೆ ಕಡಿಮೆ ಮಹತ್ವ ನೀಡುತ್ತಾರೆಂಬುದು ಸತ್ಯಕ್ಕೆ ದೂರವಾದದ್ದು. ಇಡೀ ಧಾರವಾಡ ಜಿಲ್ಲೆಯ ಗ್ರಾಮಗಳು, ತಾಲೂಕು ಕೇಂದ್ರಗಳು, ಮಹಾನಗರಕ್ಕೆ ಸಮಾನವಾದ ಆದ್ಯತೆ ನೀಡುತ್ತೇನೆ ಎಂದು ಹೇಳಿದರು. ಕೊಲ್ಲಾಪುರ ಮಾದರಿಯ ಕೆರೆಯನ್ನು ಹುಬ್ಬಳ್ಳಿಯಲ್ಲಿ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸಲಾಗುವುದು. ನೃಪತುಂಗ ಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಗೊಳಿಸುವುದು, ಶ್ರೀ ಸಿದ್ಧಾರೂಢ ಮಠವನ್ನು ಧರ್ಮಸ್ಥಳ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಾರಕ್ಕೆ ಒಂದು ಬಾರಿ ಹುಬ್ಬಳ್ಳಿಗೆ ಆಗಮಿಸಿ, ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಲಾಗುವುದು ಎಂದು ತಿಳಿಸಿದರು.

ಪ್ಲಾನಿಂಗ್ ಸಮಸ್ಯೆ

ನಗರ ಅಭಿವೃದ್ಧಿಗೆ ಹೊರ ದೇಶಗಳಲ್ಲಿ ಪ್ಲಾನಿಂಗ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದರೆ, ನಮ್ಮಲ್ಲಿ ಪೂರ್ವಾಪರ ಯೋಚನೆ, ಭವಿಷ್ಯದ ಬಗ್ಗೆ ಚಿಂತನೆ ಮಾಡದೇ ಯೋಜನೆಯ ಅನುಷ್ಠಾನ ಮಾಡುತ್ತಾರೆ. ಇದರಿಂದಾಗಿ ಸರ್ಕಾರದ ಯೋಜನೆಗಳು ಜನರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸುತ್ತಿವೆ. ಯೋಜನೆ ಅನುಷ್ಠಾನದ ಮೊದಲು ಅದರ ಬಗ್ಗೆ ಸಂಪೂರ್ಣ ಅಧ್ಯಯನ ಅಗತ್ಯ ಎಂದು ತಿಳಿಸಿದರು. ತಮ್ಮ ವ್ಯಾಪ್ತಿಯಲ್ಲಿ ಆಗಬಹುದಾದ ಕೆಲಸ ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Share this article