ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಬಿ.ಎನ್. ವಿಜಯಕುಮಾರ್ ಅವರಿಗೆ ಆಡಳಿತ ಮಂಡಳಿಯ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಆತ್ಮೀಯವಾಗಿ ಬೀಳ್ಕೊಟ್ಟರು.ಮೈಮುಲ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಬಿ.ಎನ್. ವಿಜಯಕುಮಾರ್ ಮಾತನಾಡಿ, 1987ರಲ್ಲಿ ಶಿವಮೊಗ್ಗದಿಂದ ತಾಂತ್ರಿಕ ಅಧಿಕಾರಿಯಾಗಿ ವೃತ್ತಿ ಆರಂಭಿಸಿದೆ. ತದನಂತರ ದಾವಣಗೆರೆ, ಬಳ್ಳಾರಿ, ಬೆಂಗಳೂರಿನ ಕೆಎಂಎಫ್ ನಂದಿನಿಯಲ್ಲಿ 7 ವರ್ಷ ಕೆಲಸ ಮಾಡುವ ಅವಕಾಶ ದೊರೆಯಿತು. ಈ ವೇಳೆ ಮೈಸೂರು ಪಾಕ್ ಸೇರಿ ಅನೇಕ ಉತ್ಪನ್ನ ಹೊರತರಲಾಯಿತು. 2004 ರಲ್ಲಿ ಎನ್ಎಂಪಿ ಗುಣ ನಿಯಂತ್ರಣದಲ್ಲಿ ಕೆಲಸ ನಿರ್ವಹಿಸಿ, 2008 ರಲ್ಲಿ ಕೆಎಂಎಫ್ ಮಾರುಕಟ್ಟೆ ವಿಭಾಗದ ಮೂಲಕ ಗುಡ್ ಲೈಫ್ ಉತ್ಪನ್ನವನ್ನು ಹೊರ ರಾಜ್ಯಕ್ಕೂ ವಿಸ್ತರಿಸುವ ಯೋಜನೆ ಜಾರಿಗೊಳಿಸಲಾಯಿತು ಎಂದರು.
ನಂತರ 2010 ರಲ್ಲಿ ಚನ್ನರಾಯಪಟ್ಟಣದಲ್ಲಿ ಹೊಸ ಪ್ಲಾಂಟ್ ನಿರ್ಮಿಸಿ, ಗುಲ್ಬರ್ಗ ಡೇರಿಗೆ ಪ್ರಧಾನ ವ್ಯವಸ್ಥಾಪಕನಾದೆ. ಆಗ 55000 ಇದ್ದ ಹಾಲಿನ ಉತ್ಪನ್ನದ ಶೇಖರಣೆಯನ್ನು 73000 ತನಕ ಹೆಚ್ಚುವರಿ ಮಾಡಿದೆ. ಆ ಮೂಲಕ 2 ಕೋಟಿ ರೂ. ಲಾಭ ಗಳಿಸುವಲ್ಲಿ ಯಶಸ್ವಿಯಾದೆ ಎಂದು ಅವರು ಸ್ಮರಿಸಿದರು.ಮಂಗಳೂರು ಮಾರುಕಟ್ಟೆಯಲ್ಲಿ, ಡೆಂಪೋಡಿಯಲ್ಲಿ ನಾಲ್ಕು ವರ್ಷ ಹೊಸ ಯಂತ್ರೋಪಕರಣಗಳ ಅಳವಡಿಸಿದ್ದೇನೆ. ರಾಮನಗರದಲ್ಲಿ 10 ಲಕ್ಷದ ಪ್ಲಾಂಟ್ ಪ್ರಾರಂಭಿಸಿದುವು. 2021ರ ಮೇ 18ರಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಶೇ.7 ರಿಂದ 8 ರಷ್ಟು ಶೇಖರಣೆ ಹೆಚ್ಚಳಕ್ಕೆ ಕ್ರಮ ವಹಿಸಿದ್ದೇನೆ.
ನಂದಿನಿ ಪಾಕ ಸ್ಪರ್ಧೆ, ಶಾಲಾ ಅರಿವು, ವಿಶ್ವ ಹಾಲು ದಿನ ಹೀಗೆ ಹಲವು ಕಾರ್ಯಕ್ರಮದ ಮೂಲಕ ನಂದಿನಿ ಉತ್ಪನ್ನಗಳ ಅರಿವು ಮೂಡಿಸುವ ಪ್ರಯತ್ನ ಸಹ ಯಶಸ್ವಿಯಾಗಿ ಮಾಡಿದ್ದೇನೆ. 40000 ಇದ್ದ ಹಾಲಿನ ಮಾರಾಟ 3.20 ಲಕ್ಷವರೆಗೆ ಮಾಡಿರುವುದು ಹಾಗೂ ಹೊಸ ಘಟಕಗಳ ಸ್ಥಾಪನೆ ಮಾಡಿರುವ ಕರ್ತವ್ಯ ನನಗೆ ತೃಪ್ತಿ ತಂದಿದೆ ಎಂದು ಅವರು ಸ್ಮರಿಸಿದರು.ಇನ್ನೂ ಅಭಿನಂದಿಸಿದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ಹಿರಿಯ ಅಧಿಕಾರಿಗಳ ಬದ್ಧತೆ ಕಾರ್ಯ ವೈಖರಿಯಿಂದ ಮೈಸೂರು ಡೇರಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ. ಇವರ ಮುಂದಿನ ನಿವೃತ್ತಿ ಜೀವನವೂ ಸುಖಕರವಾಗಿರಲಿ. ಮೈಮುಲ್ ಅಭಿವೃದ್ಧಿಗೆ ಇವರ ಸಲಹೆ ನಿರಂತರವಾಗಿ ಇರಲಿ. ಮುಂಬರುವ ವ್ಯವಸ್ಥಾಪಕ ನಿರ್ದೇಶಕರು ಇವರಂತೆಯೇ ಸಾಧನೆ ಮಾಡಲಿ ಎಂದು ಆಶಿಸಿದರು.
ನಿರ್ದೇಶಕರಾದ ಎ.ಟಿ. ಸೋಮಶೇಖರ್, ಕೆ.ಜಿ. ಮಹೇಶ್, ಕೆ. ಈರೇಗೌಡ, ಕೆ.ಎಸ್. ಕುಮಾರ್, ಸಿ. ಓಂಪ್ರಕಾಶ್, ಕೆ. ಊಮಾಶಂಕರ್, ದ್ರಾಕ್ಷಾಯಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜ್, ವಿ. ಶಿವಗಾಮಿ ಷಣ್ಮುಗಂ, ಬಿ.ಎ. ಪ್ರಕಾಶ್ ಪಿರಿಯಾಪಟ್ಟಣ, ಬಿ.ಎನ್. ಸದಾನಂದ, ಆರ್. ಚೆಲುವರಾಜು, ಬಿ. ಗುರುಸ್ವಾಮಿ, ಆಡಳಿತ ವರ್ಗ ಸಿಬ್ಬಂದಿ ಇದ್ದರು.