ಕನ್ನಡಪ್ರಭ ವಾರ್ತೆ ಬ್ಯಾಡಗಿ
ಸೈದ್ಧಾಂತಿಕ ನೆಲಗಟ್ಟುಗಳ ಜೊತೆಗೆ ಯಾವುದೇ ಸಂಗತಿಗಳ ಸತ್ಯವನ್ನು ನಿರ್ಧರಿಸಲು ವಿಜ್ಞಾನವೊಂದು ಮೌಲ್ಯಮಾಪನ ಸೂತ್ರವಾಗಿದೆ ಎಂದು ಡಿಡಿಪಿಐ ಸುರೇಶ ಹುಗ್ಗಿ ತಿಳಿಸಿದರು.ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ತಾಲೂಕಿನ ಗುಂಡೇನಹಳ್ಳಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾಗುತ್ತಿರುವ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತವೆ. ನಿತ್ಯವೂ ಉದಯಿಸುವ ಸಮಸ್ಯೆಗಳಿಗೆ ಹೊಸ ಅನ್ವೇಷಣೆಗಳ ಅವಶ್ಯವಿದೆ. ಬೆಳಗ್ಗೆ ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸುವ ಟೂತ್ ಪೇಸ್ಟ್ ಕೂಡ ವಿಜ್ಞಾನ ಮತ್ತು ತಂತ್ರಜ್ಞಾನದ ಉತ್ಪನ್ನಗಳಾಗಿವೆ ಎಂದರು.ವಿಜ್ಞಾನವೂ ಜಗತ್ತನ್ನು ಆಳುತ್ತಿದೆ. ವಿಪುಲ ಅವಕಾಶಗಳನ್ನು ಜನಸಾಮಾನ್ಯರಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕಾಗಿದೆ ಎಂದರು.
ಕಂಪ್ಯೂಟರ್ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಂತಹ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸುಧಾರಿತ ಕೃಷಿ ತಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇತ್ತೀಚೆಗೆ ಚಂದ್ರಯಾನ ಯಾತ್ರೆಯೂ ದೇಶದ ವಿಜ್ಞಾನಶಕ್ತಿಯನ್ನು ಅನಾವರಣಗೊಳಿಸಿದೆ ಎಂದರು.ಈಗ ದೇಶಾದ್ಯಂತ ಶಾಲೆಗಳಲ್ಲಿ ಕೃಷಿ ಶಿಕ್ಷಣವನ್ನು ಕಲಿಸಲಾಗುತ್ತದೆ. ಕಠಿಣ ಹವಾಮಾನ ಬದಲಾವಣೆಗಳನ್ನು ತಡೆದುಕೊಳ್ಳುವ ಬೆಳೆಗಳನ್ನು ಆಯ್ಕೆ ಮಾಡಲು ಸಸ್ಯಗಳ ಜೀನೋಮಿಕ್ ಮೇಕಪ್ ಅಧ್ಯಯನ ಮಾಡಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ ಎಂದರು.
ಪ್ರಧಾನಿ ಮಂತ್ರಿ ಪೋಷಣಾ ಅಭಿಯಾನದ ಅಧಿಕಾರಿ ಝಡ್.ಎಂ. ಖಾಜಿ ಮಾತನಾಡಿ, ವಿಜ್ಞಾನದ ಯಶಸ್ವಿನಿಂದ ಜಗತ್ತು ಇವತ್ತು ಅಂಗೈಯಲ್ಲಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ತರಬೇತಿಗೊಳಿಸುವುದು ಅವಶ್ಯವಾಗಿದೆ ಎಂದರು. ಹಾಗಾಗಿ ಶಾಲಾ ಶಿಕ್ಷಣ ಇಲಾಖೆಗೆ ಹೆಚ್ಚು ಅವಕಾಶಗಳನ್ನು ಸರ್ಕಾರ ನೀಡುತ್ತಿದೆ. ವಿದ್ಯಾರ್ಥಿಗಳು ತಮಗೆ ದೊರಕುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕೆಂದು ಹೇಳಿದರು.ಕುಮಾರಪಟ್ಟಣದ ಪಾಲಿಫೈಬರ್ ಕಾಲೇಜಿನ ಉಪನ್ಯಾಸಕ ವಿಶ್ವನಾಥ ಹಿರೇಮಠ ವಿಶೇಷ ಉಪನ್ಯಾಸ ನೀಡಿದರು. ಚಿತ್ರಕಲಾ ಸ್ಫರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಎನ್. ಕರಿಯಪ್ಪನವರ, ವಿಷಯ ಪರಿವೀಕ್ಷಕ ಎಸ್.ಪಿ. ಮೂಡಲದವರ, ವಿ.ಎಸ್. ಪಾಟೀಲ, ಹನುಮಂತಗೌಡ ನರೇಗೌಡ್ರ, ಭರಮಪ್ಪ ಕುರುವತ್ತಿ, ವಿದ್ಯಾ ಕುರಟ್ಟಿ, ವಿ.ಡಿ. ಅಕ್ಕೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.