ಕನ್ನಡಪ್ರಭ ವಾರ್ತೆ ಅರಸೀಕೆರೆ
ಪ್ರತಿಯೊಂದು ಮನೆಯಲ್ಲಿಯೂ ಇರುವ ಜಾಗವನ್ನೇ ಬಳಸಿಕೊಂಡು ತರಕಾರಿ ಕಾಯಿ ಪಲ್ಯೆಗಳಾದ ನುಗ್ಗೆ ,ಪಪಾಯ, ಕರಿಬೇವು, ಮೆಂತ್ಯ ಎಲ್ಲಾ ತರಹದ ತರಕಾರಿಗಳನ್ನು ತಾವೇ ಬೆಳೆದು ತಿನ್ನುವುದರಿಂದ ಎಲ್ಲರ ಆರೋಗ್ಯ ಉತ್ತಮವಾಗುತ್ತದೆ ಎಂದು ಬೋರನಕೊಪ್ಪಲು ತೋಟಗಾರಿಕೆ ಸಂಶೋಧನೆ ಕೇಂದ್ರದ ಮುಖ್ಯಸ್ಥ ಡಾ. ಜಗದೀಶ್ ತಿಳಿಸಿದರು.ತಾಲೂಕಿನ ಗಂಡಸಿ ಸಮೀಪದ ಚಿಕ್ಕಗಂಡಸಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಎಲ್ಲರ ತೋಟದ ಬೇಲಿಯಲ್ಲಿ ಹಬ್ಬುವ ತರಕಾರಿಗಳಾದ ತೊಂಡೆ, ಹಾಗಲ, ಸೋರೆ, ಹೀರೆ, ಮುಂತಾದವುಗಳನ್ನು ಬೆಳೆಯುತ್ತಿದ್ದರು. ಮನೆಯ ಮೇಲೂ ಸೋರೆ, ಮಾಗೆ ಮುಂತಾದ ಬಳ್ಳಿಗಳು ಇದ್ದವು, ಸಾವಯವ ಮನೆ ಮಾತಾಗಿತ್ತು, ಆರೋಗ್ಯ ಎಲ್ಲರಿಗೂ ಇತ್ತು, ಆಸ್ಪತ್ರೆ ದೂರವಾಗಿತ್ತು. ಆದರೆ ಇಂದು ಮನೆಯಲ್ಲಿ ನಾಲ್ಕೈದು ಬೋರ್‌ವೆಲ್ ಇದ್ದರು ಸಣ್ಣ ತರಕಾರಿ ತರಲು ಮಾರುಕಟ್ಟೆಗೆ ಬರೀ ಕೈಯಲ್ಲಿ ಬಂದು ಪ್ಲಾಸ್ಟಿಕ್ ಕವರ್ ನಲ್ಲಿ ತರಕಾರಿ ತೆಗೆದುಕೊಂಡು ಹೋಗುವ ಮಟ್ಟಕ್ಕೆ ಬಂದಿದ್ದೇವೆ ಎಂದು ವಿಷಾದಿಸಿದರು.
ಸಂಪನ್ಮೂಲ ವ್ಯಕ್ತಿ ಹಾಗೂ ಹಾರನಹಳ್ಳಿ ಪ್ರಾಥಮಿಕ ಅರೋಗ್ಯ ಕೇಂದ್ರದ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಬಿ. ಪರಮೇಶ್ ಮಾತನಾಡಿ, ಹಿಂದೆ ತರಕಾರಿ ಬೇಕಾದರೆ ಬುಟ್ಟಿ ಹಿಡಿದು ಕೈ ತೋಟಕ್ಕೆ ಹೋಗುತಿದ್ದರು, ಈಗ ಬ್ಯಾಗ್ ಇಲ್ಲದೆ ಮಾರುಕಟ್ಟೆಗೆ ಹೋಗಿ, ಪ್ಲಾಸ್ಟಿಕ್ ಕವರ್‌ನಲ್ಲಿ ತರಕಾರಿ ತರುವ ಕಾಲ ಬಂದಿದೆ. ಅಲ್ಲದೆ ಶಾಲಾ ಶಿಕ್ಷಣದಲ್ಲಿಯೇ ಆರೋಗ್ಯ ಶಿಕ್ಷಣ ಇದ್ದರೂ ಸಹ ಅರೋಗ್ಯ ಹಾಳಾಗುತ್ತಿರುವುದು ಆತಂಕಕಾರಿ. ಮುಂದಿನ ಪೀಳಿಗೆ ಸಾಕಷ್ಟು ತೊಂದರೆ ಅನುಭವಿಸುವ ಕಾಲಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಮಹಿಳೆಯರು ಜಾಗರೂಕರಾದರೆ ಎಲ್ಲವೂ ಸುಧಾರಣೆ ಆಗುತ್ತದೆ ಎಂದು ತಿಳಿಸಿದರು.ವಿಸ್ತರಣಾ ಮುಂದಾಳು ಡಾ. ಚಂದ್ರಶೇಖರ್ ಮಾತನಾಡಿ, ತೆಂಗಿನಲ್ಲಿ ಬರುವ ಬಿಳಿನೊಣಗಳ ಬಗ್ಗೆ ತಿಳಿಸಿ, ಗ್ರಾಮೀಣ ಮಹಿಳೆಯರು ಕೃಷಿ, ತೋಟಗಾರಿಕೆ, ಆರೋಗ್ಯ ಕುರಿತು ಬಗ್ಗೆ ಚರ್ಚಿಸಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಸಮಗ್ರ ಬೆಳವಣಿಗೆ ಆಗಿ ಅನವಶ್ಯಕ ಖರ್ಚುಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಪ್ರಯೋಗಾಲಯ ಸಹಾಯಕಿ ಡಾ. ಕುಶಲ ಮಾತನಾಡಿ, ಪ್ರತಿ ಮನೆಯಲ್ಲಿ ಕೈ ತೋಟವಿದ್ದರೆ ಅದು ಆರೋಗ್ಯದ ಅಂಗಳ, ಮನೆಯಲ್ಲೊಂದು ಕೈ ತೋಟ ಇದ್ದರೆ ಮನೆಮಂದಿಗೆಲ್ಲಾ ಸವಿಯೂಟ ಮಾಡಬಹುದು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಸಮತೋಲನ ಆಹಾರ ಸೇವಿಸಿದರೆ ಅದು ಆರೋಗ್ಯದ ಹೆಬ್ಬಾಗಿಲು ಎಂದರು..ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ಮಹಿಳೆಯರಿಗೂ ತರಕಾರಿ ಬೀಜದ ಕಿಟ್ ವಿತರಣೆ ಮಾಡಲಾಯಿತು. ಶ್ರೀಮತಿ ಶ್ವೇತ ಕಾರ್ಯಕ್ರಮ ನಿರೂಪಿಸಿದರು. ಕೇತ್ರ ಸಹಾಯಕಿ ರೂಪ, ಗ್ರಾ ಪಂ.ನ ಜಯಲಕ್ಷ್ಮಮ್ಮ, ವಸಂತ, ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.