ಹಳೆಯ ಯೋಜನೆ ಸೇರಿ ಭರಪೂರ ಕೊಡುಗೆ

KannadaprabhaNewsNetwork | Published : Feb 17, 2024 1:20 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೆಲವೊಂದಿಷ್ಟು ನಿರೀಕ್ಷೆಯಲ್ಲಿ ಇರದ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿ ಅಚ್ಚರಿಯನ್ನುಂಟು ಮಾಡಿದ್ದರೆ, ಮತ್ತೆ ಕೆಲವೊಂದಿಷ್ಟು ಹಳೆ ಯೋಜನೆಗಳನ್ನೇ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಇದೇ ಮೊದಲ ಬಾರಿಗೆ ರಾಜ್ಯ ಬಜೆಟ್‌ನಲ್ಲಿ ಬೆಣ್ಣಿಹಳ್ಳದ ಬಗ್ಗೆ ಪ್ರಸ್ತಾಪ.., ಬಯೋ ಸಿಎನ್‌ಜಿ ಪ್ಲಾಂಟ್‌.., ಹುಬ್ಬಳ್ಳಿ-ಧಾರವಾಡದಲ್ಲಿ ತಡರಾತ್ರಿ 1ರ ವರೆಗೆ ವಹಿವಾಟಿಗೆ ಅಸ್ತು.., ಮಹಾನಗರ ಪಾಲಿಕೆಗೆ ₹200 ಕೋಟಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌..!

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರಕ್ಕೆ ಸಂಬಂಧಪಟ್ಟಂತೆ ಸಿಕ್ಕಿರುವ ಹೊಸ ಯೋಜನೆಗಳು. ಕೆಲವೊಂದಿಷ್ಟು ನಿರೀಕ್ಷೆಯಲ್ಲಿ ಇರದ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿ ಅಚ್ಚರಿಯನ್ನುಂಟು ಮಾಡಿದ್ದರೆ, ಮತ್ತೆ ಕೆಲವೊಂದಿಷ್ಟು ಹಳೆ ಯೋಜನೆಗಳನ್ನೇ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ ಅಷ್ಟೇ. ಏನೇ ಆದರೂ ಭರಪೂರ ಭರವಸೆಗಳಂತೂ ದೊರೆತಿರುವುದು ಸಂತಸವನ್ನುಂಟು ಮಾಡಿದೆ.

ಏನೇನು ಯೋಜನೆ?

ಬೆಣ್ಣಿಹಳ್ಳ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಡೆಗೋಡೆ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ 139 ಕಿಮೀ ಹರಿಯುವ ಈ ಹಳ್ಳ ಮಳೆಗಾಲವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಮೈದಾನದಂತೆ ಇರುತ್ತದೆ. ಆದರೆ ಮಳೆಗಾಲ ಬಂದರೆ ಇದರ ಉಗ್ರವತಾರ ಅಷ್ಟಿಷ್ಟಲ್ಲ. ಪ್ರತಿವರ್ಷ ಹತ್ತಾರು ಜಾನುವಾರು, ನಾಲ್ಕಾರು ರೈತರು ಪ್ರವಾಹದಲ್ಲಿ ಸಿಲುಕುವುದು ಮಾಮೂಲಿ ಎಂಬಂತಾಗಿದೆ. ಇದರಿಂದ ಉಂಟಾಗುವ ಪ್ರವಾಹಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮವಾಗಲಿ ಎಂಬುದು ಬಹು ದಶಕಗಳ ಬೇಡಿಕೆಯಾಗಿತ್ತು.

ಆದರೆ ಯಾರೊಬ್ಬರು ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿರಲಿಲ್ಲ. ಆದರೆ, ಈ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ತಡೆಗೋಡೆ ನಿರ್ಮಿಸುವುದಾಗಿ ಸಿದ್ದರಾಮಯ್ಯ ಘೋಷಿಸಿರುವುದು ಬೆಣ್ಣಿಹಳ್ಳದ ಅಚ್ಚುಕಟ್ಟು ಪ್ರದೇಶದ ಜನತೆಯಲ್ಲಿ ಸಂತಸವನ್ನುಂಟು ಮಾಡಿದೆ.

ಇದಕ್ಕಾಗಿ ಹಿಂದಿನ ಸರ್ಕಾರ ₹1352 ಕೋಟಿ ಯೋಜನೆಯನ್ನು ಸಿದ್ಧಪಡಿಸಿತ್ತು. ಆ ಬಗ್ಗೆ ಪ್ರಸ್ತಾಪಿಸದೇ ಬರೀ ತಡೆಗೋಡೆ ನಿರ್ಮಿಸುವುದಾಗಿ ಸರ್ಕಾರ ಹೇಳಿದೆ. ಹಾಗಾದರೆ ಹಳೆ ಯೋಜನೆಯನ್ನೇ ಬದಲಾಯಿಸಿ ಜಾರಿಗೊಳಿಸುತ್ತದೆಯೋ? ಅಥವಾ ಅದನ್ನು ಕೈಬಿಟ್ಟು ಹೊಸದಾಗಿ ಎಲ್ಲವನ್ನು ಸಿದ್ಧಪಡಿಸುತ್ತದೆ ಎಂಬುದನ್ನು ನೋಡಬೇಕಿದೆ.

ಬಯೋ ಸಿಎನ್‌ಜಿ ಪ್ಲಾಂಟ್‌

ಹುಬ್ಬಳ್ಳಿ ರಾಜ್ಯದ ಎರಡನೆಯ ದೊಡ್ಡ ನಗರ. ಅಷ್ಟೇ ಪ್ರಮಾಣದಲ್ಲಿ ತ್ಯಾಜ್ಯ ಕೂಡ ಸಂಗ್ರಹವಾಗುತ್ತದೆ. ಅದರಲ್ಲೂ ಮಾರುಕಟ್ಟೆಯಲ್ಲಿನ ತ್ಯಾಜ್ಯ ಸಂಗ್ರಹ ಅಕ್ಷರಶಃ ಪಾಲಿಕೆಗೆ ದೊಡ್ಡ ಸವಾಲೇ ಸರಿ. ಇದಕ್ಕೆ ಪರಿಹಾರವೆಂಬಂತೆ ಬಯೋ ಸಿಎನ್‌ಜಿ ಪ್ಲಾಂಟ್‌ ಮಾಡುವ ಮೂಲಕ ಮಾರುಕಟ್ಟೆ ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂಬುದು ವಿಶ್ಲೇಷಕರ ಮಾತು.

ಇಂಟ್ರಿಗೇಟೆಡ್‌ ಟೌನ್‌ ಶಿಫ್‌

ಕೈಗಾರಿಕೆಗಳು ಬೆಳೆದಂತೆ ಟೌನ್‌ಶಿಫ್‌ಗಳನ್ನು ಮಾಡುವುದು ಅಗತ್ಯ ಹಾಗೂ ಅನಿವಾರ್ಯ. ಅದರಲ್ಲೂ ಸಕಲ ಸೌಲಭ್ಯಗಳಿರುವ ಇಂಟಿಗ್ರೇಟೆಡ್‌ ಟೌನ್‌ಶಿಫ್‌ ನಿರ್ಮಿಸುವುದು ಅವಶ್ಯಕ. ಆ ನಿಟ್ಟಿನಲ್ಲಿ ಎರಡನೆಯ ಸ್ತರದಲ್ಲಿರುವ ರಾಜ್ಯದ ಎಂಟು ನಗರಗಳಲ್ಲಿ ಇಂಥ ಟೌನ್‌ಶಿಫ್‌ ನಿರ್ಮಿಸುವುದಾಗಿ ಘೋಷಿಸಿದೆ. ಅದರಲ್ಲಿ ಹುಬ್ಬಳ್ಳಿ-ಧಾರವಾಡ ಕೂಡ ಒಂದಾಗಿರುವುದು ಸಂತಸಕರ ಸಂಗತಿ.

ಕ್ರಿಟಿಕಲ್‌ ಕೇರ್‌ ಬ್ಲಾಕ್‌

ಆರೋಗ್ಯ ವಿಷಯದಲ್ಲಿ ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಅದಕ್ಕೆ ಇದೀಗ ಧಾರವಾಡದಲ್ಲಿ ತೀವ್ರ ಅಸ್ವಸ್ಥತೆಯಿಂದ ಬಳಲುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದಕ್ಕಾಗಿ ಆಧುನಿಕ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ನಿರ್ಮಿಸುವ ಕುರಿತು ಪ್ರಸ್ತಾಪಿಸಿದ್ದಾರೆ. ಆದರೆ, ಹಿಂದಿನ ಸರ್ಕಾರ ಜಯದೇವ ಹೃದ್ರೋಗ ಘಟಕವನ್ನು ತೆರೆಯುವುದಾಗಿ ಹೇಳಿತ್ತು. ಘೋಷಣೆಯಾಗಿ ಎರಡು ವರ್ಷವೇ ಆದರೂ ಇನ್ನು ಶುರುವಾಗಿಲ್ಲ. ಆ ಜಯದೇವ ಆಸ್ಪತ್ರೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯ.

ಪಾಲಿಕೆಗೆ ₹200 ಕೋಟಿ

ಇನ್ನು ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2.0 ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ₹2 ಸಾವಿರ ಕೋಟಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅದರಲ್ಲಿ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಗೆ ₹200 ಕೋಟಿ ದೊರೆಯಲಿದೆ. ಈ ಹಣದಲ್ಲಿ ಮೂಲಸೌಲಭ್ಯಗಳಿಗೆ ಒತ್ತು ನೀಡಲು ಅನುಕೂಲವಾಗಲಿದೆ. ಆದರೆ ಅದನ್ನು ಪಾಲಿಕೆ ಸಮರ್ಪಕವಾಗಿ ಬಳಸಿಕೊಳ್ಳಬೇಕಷ್ಟೇ.

ಕೌಶಲ್ಯ ಕೇಂದ್ರ

ಇನ್ನು ಬೆಂಗಳೂರಿನಾಚೆ ತಂತ್ರಜ್ಞಾನದಲ್ಲಿ ಉದಯೋನ್ಮುಖ ಯುವಕರಿಗೆ ಕೌಶಲ್ಯಾಭಿವೃದ್ಧಿಗಾಗಿ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಮತ್ತು ಕಿಯೋನಿಕ್ಸ್‌ ಸಹಯೋಗದೊಂದಿಗೆ ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ತೆರೆಯಲು ನಿರ್ಧರಿಸಿದೆ. ನಾಲ್ಕು ಮಹಾನಗರಗಳಲ್ಲಿ ಈ ಕೇಂದ್ರ ಪ್ರಾರಂಭವಾಗಲಿದ್ದು, ಅದರಲ್ಲಿ ಹುಬ್ಬಳ್ಳಿ ಕೂಡ ಒಂದಾಗಿದೆ. ಇದರಿಂದ ಯುವ ಸಮೂಹಕ್ಕೆ ಅನುಕೂಲವಾಗಲಿದೆ.

ಇನ್ನು ಧಾರವಾಡದಲ್ಲಿರುವ ವಿಜ್ಞಾನ ಕೇಂದ್ರದಲ್ಲಿ ಸಿದ್ಧಗೊಂಡಿರುವ ತಾರಾಲಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂಬುದನ್ನು ಉಲ್ಲೇಖಿಸಿದ್ದಾರೆ. ಇದರಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸಲು ಇದು ನೆರವಾಗಲಿದೆ.

ಕಳಸಾ -ಬಂಡೂರಿ ಪ್ರಸ್ತಾಪ

ಬಹುನಿರೀಕ್ಷಿತ, ಬಹುಬೇಡಿಕೆಯ ಕಳಸಾ- ಬಂಡೂರಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಟೆಂಡರ್‌ ಕರೆದಿರುವುದನ್ನು ಹೇಳಿದ್ದಾರೆ. ಆದರೆ, ಇದೇ ವೇಳೆ ಕೇಂದ್ರ ಸರ್ಕಾರ ಇತ್ತೀಚಿಗೆ ನಡೆದ ಸಭೆಯಲ್ಲಿ ಅಡ್ಡಿಯನ್ನುಂಟು ಮಾಡಿದೆ. ಹೀಗಾಗಿ, ಏನು ಮಾಡುವುದಕ್ಕೆ ಆಗುತ್ತಿಲ್ಲ ಎಂಬ ಅಸಹಾಯಕತೆಯನ್ನು ತೋರಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮದೇ ಭಾಷೆಯಲ್ಲಿ ಕಿಡಿಕಾರಿದ್ದಾರೆ.

ರೈಲ್ವೆ ಯೋಜನೆ

ರಾಜ್ಯದಲ್ಲಿ ನಡೆಯುತ್ತಿರುವ 9 ರೈಲ್ವೆ ಯೋಜನೆಗಳಿಗೆ ರಾಜ್ಯದ ಪಾಲನ್ನು ನೀಡಲು ಸಿದ್ಧವಿದೆ ಎಂಬುದನ್ನು ಘೋಷಿಸಿದೆ. ಬಹುತೇಕ ಎಲ್ಲ ಯೋಜನೆಗಳನ್ನು ನೈರುತ್ಯ ರೈಲ್ವೆ ವಲಯವೇ ಕೈಗೆತ್ತಿಕೊಂಡಿದೆ. ₹12147 ಕೋಟಿ ವೆಚ್ಚದ ಯೋಜನೆಗಳಲ್ಲಿ ರಾಜ್ಯದ ಪಾಲು ₹9915 ಕೋಟಿ. ಇದರಲ್ಲಿ ಕಳೆದ ಸಲ 600 ಕೋಟಿ ಬಿಡುಗಡೆಗೊಳಿಸಿದೆ ಎಂದು ಹೇಳಿದೆ. ಭೂಸ್ವಾಧೀನ ಪ್ರಕ್ರಿಯೆಗಾಗಿ ಈ ಅನುದಾನ ಬಳಕೆಯಾಗಲಿದೆ. ಭೂಸ್ವಾಧೀನ ಪ್ರಕ್ರಿಯೆಯೇ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿದರೆ ಹೆಚ್ಚು ಅನುಕೂಲ ಎಂಬುದು ರೈಲ್ವೆ ಬಳಕೆದಾರರ ಅಂಬೋಣ.

ವಾಲ್ಮಿ ಹಳೆ ಯೋಜನೆ

ಧಾರವಾಡದಲ್ಲಿರುವ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ)ಯನ್ನು ಉನ್ನತೀಕರಿಸುವುದಾಗಿ ಹೇಳಿಕೊಂಡಿದೆ. ಆದರೆ ಇದೇ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಇದನ್ನು ಘೋಷಿಸಿತ್ತು. ಅದನ್ನೀಗ ಬಜೆಟ್‌ನಲ್ಲಿ ಸೇರಿಸಿದೆ ಅಷ್ಟೇ. ಇದೇನು ಹೊಸದಲ್ಲ ಎಂಬುದು ಮಾತ್ರ ಸ್ಪಷ್ಟ.

ಕೈಗಾರಿಕೆ ಕಾರಿಡಾರ್‌

ಈ ನಡುವೆ ಬೆಂಗಳೂರು- ಮುಂಬೈ ಎಕನಾಮಿಕ ಕಾರಿಡಾರ್‌ ಯೋಜನೆಯ ಕೈಗೆತ್ತಿಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕೈಗೊಳ್ಳುತ್ತಿರುವ ಈ ಯೋಜನೆಯಡಿ ಧಾರವಾಡದಲ್ಲಿ 6 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ನೋಡ್‌ ಮಾಡುವುದಾಗಿ ಪ್ರಸ್ತಾಪಿಸಿದೆ. ಇದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ ಕಳೆದ ಬಜೆಟ್‌ನಲ್ಲಿ ಸಿದ್ದರಾಮಯ್ಯ ಸರ್ಕಾರವೇ ಘೋಷಿಸಿದ್ದ ಕೈಗಾರಿಕಾ ವಸಾಹತು ಮಾತ್ರ ಈವರೆಗೂ ಪ್ರಾರಂಭವಾಗಿಲ್ಲ. ಅದು ಪ್ರಾರಂಭವಾಗುತ್ತದೆಯೋ ಇಲ್ಲವೋ ಎಂಬುದು ಕೂಡ ಗೊತ್ತಾಗುತ್ತಿಲ್ಲ. ಏನೇ ಆಗಲಿ ಈಗಲಾದರೂ ಘೋಷಿಸಿರುವುದನ್ನು ಕಾರ್ಯರೂಪಕ್ಕೆ ತಂದು ಕೈಗಾರಿಕೆಗಳಿಗೆ ಒತ್ತು ನೀಡಬೇಕು ಎಂಬುದು ವಾಣಿಜ್ಯೋದ್ಯಮಿಗಳ ಆಗ್ರಹ.

ತಡರಾತ್ರಿವರೆಗೂ ತೆರೆಯಲಿದೆ ಮಹಾನಗರ

ಇನ್ಮುಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಡರಾತ್ರಿ 1ರ ವರೆಗೆ ವ್ಯಾಪಾರ ವಹಿವಾಟು ಮಾಡಬಹುದಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಸೇರಿದಂತೆ 10 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಡರಾತ್ರಿ 1ರ ವರೆಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದು ಮಹಾನಗರದ ವಾಣಿಜ್ಯೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಿದೆ.

Share this article