ಸಂಪನ್ಮೂಲ ಸಮನ್ವಯ ಶಿಕ್ಷಣ ತರಬೇತುದಾರಿಣಿ । ಅಂತಾರಾಷ್ಟ್ರೀಯ ಮಹಿಳಾ ದಿನಕನ್ನಡಪ್ರಭ ವಾರ್ತೆ ಹಾಸನ
ಹೆಣ್ಣು ಮಕ್ಕಳು ಸಣ್ಣ ಬೀಜದಲ್ಲಿ ಅಡಗಿರುವ ದೊಡ್ಡ ಆಲದ ಮರದಂತೆ ಬೆಳೆದು ಅನೇಕ ಜನರಿಗೆ ನೆರಳಾಗಿ ಬದುಕಬೇಕು. ಈ ಮೂಲಕ ಸ್ತ್ರೀ ಸಬಲೀಕರಣದ ಮಾಪಕಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯ, ರಾಜಕೀಯ ಅವಕಾಶ, ಆರ್ಥಿಕತೆ, ಸ್ವಾತಂತ್ರ್ಯತೆ, ಸ್ವಾವಲಂಬನೆಯಿಂದ ಬದುಕಬೇಕು ಎಂದು ಹಾಸನ ತಾಲೂಕು ಸಂಪನ್ಮೂಲ ಸಮನ್ವಯ ಶಿಕ್ಷಣ ತರಬೇತುದಾರರಾದ ಡಾ. ಶಾಂತ ಅತ್ನಿ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ಕಾಲೇಜಿನ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಯ ಮೈತ್ರೇಯಿ ಮಹಿಳಾ ವೇದಿಕೆ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಅವಕಾಶ ಇಲ್ಲದ ಮಹಿಳೆ ಇಂದು ರಾಜಕೀಯವಾಗಿ ಪ್ರವೇಶ ಪಡೆದು ಪ್ರಧಾನಿ, ರಾಷ್ಟ್ರಪತಿ, ಮಂತ್ರಿ, ಜಿಲ್ಲಾಧಿಕಾರಿ ಆಗುವ ಒಂದು ಉತ್ತಮ ಅವಕಾಶವನ್ನು ಅಂಬೇಡ್ಕರ್ ಸಂವಿಧಾನ ಕೊಡುಗೆಯಾಗಿ ಕೊಟ್ಟಿದೆ. ಇದು ಹೆಣ್ಣು ಮಕ್ಕಳಿಗೆ ಸಂವಿಧಾನ ನೀಡಿರುವ ಕೊಡುಗೆಯಾಗಿದೆ ಎಂದು ಹೇಳಿದರು.
ಮಡದಿ, ಮಗಳು, ತಾಯಿ, ತಂಗಿ, ಅಕ್ಕ, ಗೆಳತಿ ಹೀಗೆ ನಾನಾ ವಿಶ್ವರೂಪವನ್ನು ತೋರುವ ಮಹಿಳೆ ಒಂದು ದಿನ ಇಲ್ಲದಿದ್ದರೆ ಈ ಭೂಮಿ ಸ್ಮಶಾನವಾಗುತ್ತದೆ. ಆದ್ದರಿಂದ ಲಿಂಗ ತಾರತಮ್ಯ ಬಿಟ್ಟು, ಪುತ್ರ ವ್ಯಾಮೋಹ ಬಾಲ್ಯ ವಿವಾಹ, ವರದಕ್ಷಿಣೆ ಬಹು ಪತ್ನಿತ್ವ, ತಲಾಕ್ ವಿಚ್ಛೇದನ, ಸತಿ ಸಹಗಮನ, ಮೌಢ್ಯ, ಸಂಪ್ರದಾಯ, ಚಾರಿತ್ರ್ಯವಧೆ ಮಾಡದೆ ಸಮಾನ ಅವಕಾಶ ನೀಡಬೇಕು ಎಂದು ತಿಳಿಸಿದರು.ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್ ಮಾತನಾಡಿ, ಲಿಂಗತಾರತಮ್ಯ ಎಂಬ ಪಿಡುಗು ತೊಲಗಬೇಕು. ಶೇ. ೯೦ ರಷ್ಟು ಮಹಿಳೆಯರು ಇನ್ನೂ ಪುರುಷರ ದೌರ್ಜನ್ಯದಿಂದ ಹೊರತಾಗಿಲ್ಲ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಹಿಳೆಯರಿಗೆ ದೌರ್ಜನ್ಯವನ್ನು ಅನುಭವಿಸುತ್ತಿದ್ದಾರೆ. ಸಮುದಾಯದಲ್ಲಿ ಮಹಿಳಾ ಸಬಲೀಕರಣ ಆಗಬೇಕು. ಮುಂದೊಂದು ದಿನ ಪುರುಷ ಮಹಿಳೆಯನ್ನು ವರಿಸಲು ಹರಕೆ ಕಟ್ಟಿಕೊಳ್ಳುವ ದಿನ ಬರಬಹುದು. ಪುರುಷ ಪ್ರಧಾನ ಸಮಾಜದಲ್ಲಿ ಸ್ರೀಯನ್ನು ಗೌರವಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪರೀಕ್ಷಾ ನಿಯಂತ್ರಕ ಡಾ.ಮುರುಳಿಧರ ಕೆ.ಡಿ. ಮಾತನಾಡಿ, ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಾನಮಾನಗಳನ್ನು ಸದುಪಯೋಗಪಡಿಸಿಕೊಳ್ಳಲು ಮಹಿಳೆಯರಿಗೆ ಅವಕಾಶಗಳನ್ನು ನೀಡಬೇಕು. ಕುಟುಂಬದಲ್ಲಿ ಅಣ್ಣ-ತಂಗಿಯಾಗಿರಬಹುದು ಅಥವಾ ಅಕ್ಕ-ತಮ್ಮ ಆಗಿರಬಹುದು ಒಬ್ಬರಿಗೊಬ್ಬರು ತಿಳಿವಳಿಕೆಯ ಮನೋಭಾವವನ್ನು ಇಟ್ಟುಕೊಳ್ಳಬೇಕು. ಗಂಡಾಗಲಿ-ಹೆಣ್ಣಾಗಲಿ ಯಾವುದೇ ವಿಚಾರದಲ್ಲಿಯಾದರೂ ಆದರ್ಶಪ್ರಾಯರಾಗಿರಬೇಕು ಎಂದು ಹೇಳಿದರು.ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ಮೈತ್ರೇಯಿ ಮಹಿಳಾ ವೇದಿಕೆಯ ಸಂಚಾಲಕಿ ಅನುರಾಧ, ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ವನಿತಾ ಡಿ., ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ರತ್ನ ವೈ.ಡಿ., ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ರಶ್ಮಿ ಎ.ವಿ., ಭವ್ಯ ಎಚ್.ಸಿ., ಶೃತಿ, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕರಾದ ರೇಖಾ ಎಸ್. ಹಿಂದಿ ವಿಭಾಗದ ಉಪನ್ಯಾಸಕಿ ಮಾಲತಿ, ಗ್ರಂಥಪಾಲಕಿ ಪವಿತ್ರ, ಸಿಬ್ಬಂದಿ ಅನನ್ಯ, ಪುಷ್ಪ ಮತ್ತು ದಿವ್ಯರಾಣಿ ಇದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನಿತಾ ಎಲ್ಲರನ್ನು ಸ್ವಾಗತಿಸಿದರು. ಬಿಂದು ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ವಿದ್ಯಾರ್ಥಿನಿ ರಕ್ಷಿತಾ ವಂದಿಸಿದರು.ಹಾಸನದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಸಂಪನ್ಮೂಲ ಸಮನ್ವಯ ಶಿಕ್ಷಣ ತರಬೇತುದಾರರಾದ ಡಾ. ಶಾಂತ ಅತ್ನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.